







ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸನ್ಮಾನ ಸಮಾರಂಭ ಆ. 26 ರಂದು ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ರವರು ಶಶಿಕುಮಾರ್ ರೈ ಯವರನ್ನು ಸನ್ಮಾನಿಸಿ ಬಳಿಕ ಮಾತನಾಡಿ ‘ಸಹಕಾರಿ ಕ್ಷೇತ್ರದ ಮೂಲಕ ನಮ್ಮೂರಿನ ವ್ಯಕ್ತಿಯೋರ್ವರು ರಾಜ್ಯಮಟ್ಟದ ನಾಯಕರ ಸಾಲಿಗೆ ಸೇರ್ಪಡೆಗೊಂಡಿರುವುದು ನಮ್ಮ ಊರಿಗೆ ಹೆಮ್ಮೆಯ ವಿಷಯ. ನಮ್ಮ ಸಂಸ್ಥೆಯ ಬೆಳ್ಳಿಹಬ್ಬ, ನೂತನ ಸಭಾಭವನ ನಿರ್ಮಾಣ ಕಾರ್ಯದಲ್ಲಿ ನಮ್ಮೊಂದಿಗೆ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಒಟ್ಟು ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡು ಅಭೂತಪೂರ್ವವಾದ ಕಾರ್ಯಕ್ರಮ ಆಯೋಜಿಸಿ, ಶಾಲೆಯ ಅಭಿವೃದ್ಧಿಯಲ್ಲಿ ಸಹಕಾರ ಮಾರ್ಗದರ್ಶನ ನೀಡಿರುವ ಶಶಿಕುಮಾರ್ ರೈಯವರಿಗೆ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ‘ಪ್ರಿಯದರ್ಶಿನಿ ಸಂಸ್ಥೆಯ ಮೇಲೆ ನನಗೆ ಅಪಾರ ಅಭಿಮಾನವಿದೆ. ನಾವು ಎಷ್ಟು ಎತ್ತರಕ್ಕೆ ಹೋದರೂ ನನಗೆ ಮೂಲ ನನ್ನ ಊರು. ಇಲ್ಲಿನ ಜನರ ಪ್ರೀತಿ ವಿಶ್ವಾಸ, ತೋರಿರುವ ಗೌರವಕ್ಕೆ ನಾನು ಚಿರಋಣಿ. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ನಾನು ಬೇರೆ ಬೇರೆ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. ಮುಂದೆಯೂ ಊರಿನ ಯಾವುದೇ ಕೆಲಸ ಕಾರ್ಯಗಳಿಗೆ ಸಹಕಾರ, ಪ್ರೋತ್ಸಾಹ ಸದಾ ನೀಡಲಿದ್ದೇನೆ’ ಎಂದರು.
ಮುಖ್ಯಗುರು ರಾಜೇಶ್ ಎನ್. ರವರು ಸ್ವಾಗತಿಸಿ, ಬೆಳ್ಳಿಹಬ್ಬ ಸಂಭ್ರಮದಲ್ಲಿ ಶಾಲೆಯ ಭೌತಿಕ ಅಭಿವೃದ್ಧಿ ಮತ್ತು ಸಾಂಸ್ಥಿಕವಾಗಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಸಂಸ್ಥೆಯಾಗಿ ಬೆಳೆಯುವಲ್ಲಿ ಶಶಿಕುಮಾರ್ ರೈ ಯವರ ಸಂಪೂರ್ಣ ಮುಂದಾಳತ್ವವನ್ನು, ಕೊಡುಗೆಯನ್ನು ನಾವು ಎಂದಿಗೂ ಮರೆಯುವಂತಿಲ್ಲ’ ಎಂದರು.
ಈ ವೇಳೆ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ಸದಸ್ಯರಾದ ಅರವಿಂದ ದರ್ಭೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕನ್ನಡ್ಕ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ಪೋಷಕರಾದ ರಾಜರಾಮ ಭಟ್, ಸನತ್ ಕುಮಾರ್ ರೈ ಕುಂಜಾಡಿ, ಸಂತೋಷ್ ಕುಮಾರ್ ಬೇರಿಕೆ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













