







ಪುತ್ತೂರು: ಕಳೆದ ಮೂರು ವರ್ಷಗಳಿಂದ ಉಚಿತ ಥೆರಪಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾವಿರಾರು ಜನರಿಗೆ ಸೇವೆ ಒದಗಿಸುತ್ತಿರುವ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ನ ಮುಖ್ಯಸ್ಥ ಕೆ. ಪ್ರಭಾಕರ್ ಸಾಲಿಯಾನ್ ಅವರಿಗೆ ಸತತ ಮೂರನೇ ಬಾರಿ ಕಂಪಾನಿಯೋ ಸಂಸ್ಥೆಯ ಪ್ರತಿಷ್ಠಿತ ‘ಬಾಹುಬಲಿ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ಸಂಸ್ಥೆಯ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ.


ಇತ್ತೀಚೆಗೆ ಕುಂದಾಪುರದ ಟಿಂಟನ್ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪಾನಿಯೋ ಸಂಸ್ಥೆಯ ಪ್ರಮುಖ ಪ್ರವರ್ತಕರಾದ ರತ್ನಾಕರ ಶೆಟ್ಟಿ, ಸೀತಾರಾಮ್ ಶೆಟ್ಟಿ, ಲತಾ ಹಾಗೂ ತಮಿಳುನಾಡಿನ ಗೌತಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.



ಕೆ. ಪ್ರಭಾಕರ್ ಸಾಲಿಯಾನ್ ಅವರು ಕಳೆದ ಮೂರು ವರ್ಷಗಳಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಹಾಗೂ ಕಡಬ ತಾಲೂಕುಗಳಲ್ಲದೆ, ಕಾಸರಗೋಡಿನ ಕೆಲವು ತಾಲೂಕುಗಳಲ್ಲಿಯೂ ಸುಮಾರು 144 ಉಚಿತ ಫುಟ್ ಪಲ್ಸ್ ಥೆರಪಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಶಿಬಿರಗಳ ಮೂಲಕ ಸುಮಾರು 52 ಸಾವಿರ ಜನರಿಗೆ ಸೇವೆ ಒದಗಿಸಿದ್ದು, ಒಟ್ಟು 2.60 ಲಕ್ಷ ಉಚಿತ ಥೆರಪಿ ಸೇವೆಗಳನ್ನು ನೀಡಿದ್ದಾರೆ. ಪ್ರಸ್ತುತ ಕಾಸರಗೋಡಿನ ಉಪ್ಪಳದಲ್ಲಿ ಉಚಿತ ಥೆರಪಿ ಶಿಬಿರ ನಡೆಯುತ್ತಿದೆ.
ಪ್ರಸ್ತುತ ಪುತ್ತೂರಿನ ಬೊಳುವಾರು ಧ್ರುವ ಸಂಕೀರ್ಣದಲ್ಲಿ ‘ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್’ ಹೆಸರಿನ ಸ್ವಂತ ಸಂಸ್ಥೆಯನ್ನು ನಡೆಸುತ್ತಿರುವ ಅವರು, ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆ. ಪ್ರಭಾಕರ್ ಸಾಲಿಯಾನ್ ಅವರು ಪುತ್ತೂರು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ ಹಾಗೂ ನರಿಮೊಗರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಪುತ್ತೂರು ತಾಲೂಕು ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದಾರೆ.
ಇತ್ತೀಚೆಗೆ ಯುವವಾಹಿನಿ ಮಂಗಳೂರು ಕೇಂದ್ರದ ವ್ಯಾಪ್ತಿಯ ವಿವಿಧ ಘಟಕಗಳ ನಡುವೆ ನಡೆದ ಅಂತರ್ ಘಟಕ ಜಾನಪದ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ ಡೆನ್ನನ’ ಕಾರ್ಯಕ್ರಮವು ಕೆ. ಪ್ರಭಾಕರ್ ಸಾಲಿಯಾನ್ ಅವರ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು.
ನರಿಮೊಗರು ಮೂಲದ ಕೆ. ಪ್ರಭಾಕರ್ ಸಾಲಿಯಾನ್ ಅವರು ಕಳೆದ 18 ವರ್ಷಗಳಿಂದ ಕೋಡಿಂಬಾಡಿಯಲ್ಲಿ ಪತ್ನಿ ತುಳಸಿ, ಪುತ್ರ ವಿವೇಕ್ ಹಾಗೂ ಪುತ್ರಿ ಪೃಥ್ವಿ ಅವರೊಂದಿಗೆ ವಾಸಿಸುತ್ತಿದ್ದಾರೆ.










