ಪುತ್ತಿಲ ಪರಿವಾರದಿಂದ ನಡೆಯಲಿರುವ `ಗಿರಿಜಾ ಕಲ್ಯಾಣೋತ್ಸವ’ದ ಪೂರ್ವಭಾವಿ ಸಭೆ

0

ಡಿ.12-13 ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ

ಈ ಬಾರಿಯೂ ನಡೆಯಲಿದೆ ವೈಭವ ಸಾಮೂಹಿಕ ವಿವಾಹ

ಡಿ.12 ಕೇಸರಿ ಸಂಗಮ-ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ

ಡಿ.13 ಗಿರಿಜಾ ಕಲ್ಯಾಣೋತ್ಸವ

ಎರಡು ಲಕ್ಷ ಮಂದಿಗೆ ಅನ್ನದಾನ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನಡೆಯುವ ತಾಲೂಕಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಶ್ರೀನಿವಾಸ ಕಲ್ಯಾಣೋತ್ಸವದ’ 4ನೇ ವರ್ಷದ ಕಾರ್ಯಕ್ರಮವಾಗಿ ಡಿ.12 ಮತ್ತು 13ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ಸಂಭ್ರಮಿಸಲಿರುವ ಗಿರಿಜಾ ಕಲ್ಯಾಣೋತ್ಸವದ’ ಪೂರ್ವಭಾವಿ ಸಭೆಯು ಸೆ.27ರಂದು ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಸಾಮಾಜಿಕ ವ್ಯವಸ್ಥೆ ಜೊತೆಗೆ ಧಾರ್ಮಿಕವಾಗಿ ತೊಡಗಿಸಿಕೊಂಡು ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕೆಲಸವಾಗುತ್ತಿದೆ. ಕಳೆದ 3 ವರ್ಷಗಳಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸುವ ಮೂಲಕ ತಿರುಪತಿಗೆ ತೆರಲಿ ದೇವರ ದರ್ಶನ ಮಾಡಲು ಅಸಾಧ್ಯವಾದವರಿಗೆ ಕಳೆದ ಮೂರು ವರ್ಷಗಳಲ್ಲಿ ಪುತ್ತೂರಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಕಣ್ತುಂಬಿಸಿಕೊಳ್ಳುವ ಅವಕಾಶ ದೊರೆತಿದೆ. ಕಳೆದ ಬಾರಿಯ ಕಾರ್ಯಕ್ರಮದಲ್ಲಿ ಮುಂದಿನ ಬಾರಿಯ ಕಾರ್ಯಕ್ರಮದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಸುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅಲ್ಲದೆ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆದ ಲೋಕ ಕಲ್ಯಾಣವಾಗುವುದಾಗಿ ದೇವಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ಸೂಚಿಸಿದ್ದರು. ಇದೀಗ ದೇವರ ಪ್ರೇರಣೆ, ಎಲ್ಲರ ಅಪೇಕ್ಷೆಯಂತೆ ಈ ಬಾರಿ ಗಿರಿಜಾ ಕಲ್ಯಾಣೋತ್ಸವ ಆಯೋಜಿಸಲಾಗಿದ್ದು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಗಿರಿಜಾ ಕಲ್ಯಾಣೋತ್ಸವ ಅಭೂತಪೂರ್ವವಾಗಿ ನಡೆಯಲಿದೆ ಎಂದು ಹೇಳಿದ ಅವರು ಈ ಎಲ್ಲಾ ಕಾರ್ಯಕ್ರಮದ ಜೊತೆಗೆ ಹಿರಿಯರ ಕಲ್ಪನೆಯಂತೆ ಡಿ.12ರಂದು ಮಹಾಲಿಂಗೇಶ್ವರ ದೇವರಿಗೆ ಲಕ್ಷಾ ಬಿಲ್ವಾರ್ಚನೆ ನಡೆಯಲಿದೆ ಎಂದು ಹೇಳಿದರು.

ಈ ಬಾರಿಯೂ ಸಾಮೂಹಿಕ ವಿವಾಹ:
ಸಂಘ ಶತಾಬ್ದಿಯ ಅಂಗವಾಗಿ ಹಾಗೂ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ನೆನಪು ಶಾಶ್ವತವಾಗಿ ಉಳಿಸಲು ಕಳೆದ ಬಾರಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ವೈಭವದ ದಿಬ್ಬಣ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಇದರಲ್ಲಿ 13 ಜೋಡಿಗಳು ಸಹಸ್ರಾರು ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ಜೋಡಿಗೆ ರೂ.1.40ಲಕ್ಷ ವೆಚ್ಚವನ್ನು ಟ್ರಸ್ಟ್ ಮೂಲಕ ಭರಿಸಲಾಗಿದೆ. ಆದರೂ ಸಾಕಷ್ಟು ಅಪವಾದಗಳು ಬಂದಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಾರ್ಯಕರ್ತರು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವಲ್ಲಿ ಪ್ರಮುಖಪಾತ್ರವಹಿಸಿದ್ದರು. ಈ ಬಾರಿಯ ಗಿರಿಜಾ ಕಲ್ಯಾಣೋತ್ಸವದಲ್ಲಿಯೂ ಎಲ್ಲರ ಅಪೇಕ್ಷೆಯಂತೆ ಈ ಬಾರಿಯೂ ಸಾಮೂಹಿಕ ವಿವಾಹ ನಡೆಯಲಿದ್ದು ಡಿ.13ರ 11.20ರ ಶುಭಲಘ್ನದಲ್ಲಿ ವಿವಾಹ ನೆರವೇರಲಿದೆ. ಸಾಮೂಹಿಕ ವಿವಾಹಕ್ಕೆ ಈಗಾಗಲೇ 5 ಜೋಡಿಗಳು ನೋಂದಾಯಿಸಿಕೊಂಡಿರುತ್ತಾರೆ. ಈ ಬಾರಿಯೂ ಮನೆಯಲ್ಲಿ ನಡೆಯುವ ಮದುವೆಯ ಕಾರ್ಯಕ್ರಮದಂತೆ ಅತ್ಯಂತ ವೈಭವದಂತೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಅರುಣ್ ಪುತ್ತಿಲ ಹೇಳಿದರು.

ಕೇಸರಿ ಸಂಗಮ-ಧಾರ್ಮಿಕ ಸಭೆ:
ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮದ ಪ್ರಾರಂಭ ದಿನವಾದ ಡಿ.12ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮ ಕೇಸರಿ ಸಂಗಮ ನಡೆಯಲಿದೆ. ಈ ಕೇಸರಿ ಸಂಗಮದಲ್ಲಿ 11 ಮಂದಿ ಮಠಾಧೀಶರ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.

ಡಿ.13 ಗಿರಿಜಾ ಕಲ್ಯಾಣೋತ್ಸವ:
ಕಾರ್ಯಕ್ರಮದ ಎರಡನೇ ದಿನವಾದ ಡಿ.13ರಂದು ಮಧ್ಯಾಹ್ನ 2 ಗಂಟೆಯಿಂದ 5 ರ ತನಕ ನೂರಾರು ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ, ಇದಾದ ನಂತರ ಗಿರಿಜಾ ಕಲ್ಯಾಣದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ರಾತ್ರಿ 8.30ರ ವೇಳೆಗೆ ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಮನೆಯ ಕಾರ್ಯಕ್ರಮದಂತೆ ಸಹಕರಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಎರಡು ಲಕ್ಷ ಮಂದಿಗೆ ಅನ್ನದಾನ:
ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಉಪಹಾರ ಹಾಗೂ ಅನ್ನದಾನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು ಸುಮಾರು 2ಲಕ್ಷ ಮಂದಿಗೆ ಅನ್ನದಾನ ನಡೆಯಲಿದೆ. ‌ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿ.12ರಂದು ರಾತ್ರಿ ಕೇರಳ ಪ್ರಸಿದ್ದ ತಂಡದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಭಜನ್ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಹಿಂದೂ ಸಮಾಜಕ್ಕೆ ದಿಕ್ಸೂಚಿ ಕಾರ್ಯಕ್ರಮವಾಗಿ ನಡೆದು ಎಲ್ಲಾ ಸವಾಲುಗಳಿಗೆ ಉತ್ತರವಾಗುವ ನಿಟ್ಟಿನಲ್ಲಿ ರಾಜಕೀಯ, ಜಾತಿ ರಹಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಗಿರಿಜಾ ಕಲ್ಯಾಣೋತ್ಸವ ಸಮಿತಿ ಘೋಷಣೆ
ಈ ಬಾರಿಯ ಗಿರಿಜಾ ಕಲ್ಯಾಣೋತ್ಸವ ಸಮಿತಿಯನ್ನು ಘೋಷಿಸಲಾಗಿದ್ದು ಅಧ್ಯಕ್ಷರಾಗಿ ಡಾ.ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ತೆಂಕಿಲ, ಗೌರವಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಗುಂಡ್ಯಡ್ಕ ವಾಸು ಪೂಜಾರಿ, ರಘು ಬೆಳ್ಳಿಪ್ಪಾಡಿ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಕಾಮತ್ ಉಪ್ಪಿನಂಗಡಿ ಅವರನ್ನು ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಘೋಷಣೆ ಮಾಡಿದರು. ಉಪ ಸಮಿತಿಗಳ ಸಂಚಾಲಕ ಹಾಗೂ ಸಹ ಸಂಚಾಲಕರನ್ನು ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಘೋಷಣೆ ಮಾಡಿದರು.

ಗಿರಿಜಾ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ.ಅಖಲೇಶ್ ಪಾಣಾಜೆ ಮಾತನಾಡಿ, ಬಹುದೊಡ್ಡ ಜವಾಬ್ದಾರಿ ನನಗೆ ದೊರೆತಿದೆ. ಅತ್ಯುತ್ತಮ ತಂಡ ಸಿದ್ದವಾಗಿದೆ. ಈ ಬಾರಿಯ ಗಿರಿಜಾ ಕಲ್ಯಾಣೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿ, ವಿಜೃಂಭನೆಯಿಂದ ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಬೇಕು. ನಾಡಿನ ಧಾರ್ಮಿಕ ಸಂಸ್ಕೃತಿಯ ಸಂಕೇತವಾಗಿ ನಡೆಯುವ ಗಿರಿಜಾ ಕಲ್ಯಾಣದಲ್ಲಿ ವೈಭವವನ್ನು ಮೆರೆಯಲಿದೆ. ಇದಕ್ಕೆ ನಮ್ಮ ತಂಡ ಸಿದ್ದವಾಗಿದ್ದು ನಾಳೆಯಿಂದಲೇ ಕಾರ್ಯ ಪ್ರವೃತ್ತವಾಗಲಿದೆ. ಶೇ.101ರಷ್ಟು ಯಶಸ್ಸಿಯಾಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದೆ. ನಮ್ಮನ್ನು ಆಯ್ಕೆ ಮಾಡಿದ್ದು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಹುಸಿಯಾಗಿಸುವುದಿಲ್ಲ ಎಂದು ಹೇಳಿದರು.

ಗೌರವಾಧ್ಯಕ್ಷ ಮುಗೇರೋಡಿ ಬಾಲಕೃಷ್ಣ ರೈ ಮಾತನಾಡಿ, ನಾನು 62 ವರ್ಷಗಳ ಕಾಲ ಹಿಂದು ಸಂಘಟನೆಗಾಗಿ ಹೋರಾಡಿದವನು. ಈಗ ಅರುಣ್ ಕುಮಾರ್ ಪುತ್ತಿಲ ಅವರ ಪ್ರೇರಣೆಯಿಂದ ವೇದಿಕೆಯಲ್ಲಿದ್ದೇನೆ. ಅರುಣ್ ಪುತ್ತಿಲ ಅವರು ಹಿಂದುತ್ವದ ಉಳಿವಿಗಾಗಿ ಯುವಕರ ಸೈನ್ಯ ಕಟ್ಟಿಕೊಂಡಿರುವ ಮಹಾನ್ ಕಮಾಂಡರ್ ಆಗಿದ್ದಾರೆ ಎಂದರು. ಡಿ.ವಿ ಸದಾನಂದ ಗೌಡ ರನ್ನು ಪ್ರಥಮ ಬಾರಿಗೆ ಶಾಸಕರನ್ನಾಗಿ ಮಾಡುವ ಸಮಯದಲ್ಲಿ ತಂಡವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಅವರು ಶಾಸಕರಾಗಿದ್ದರು. ಪ್ರಸ್ತುತ ಸಮಯದಲ್ಲಿ ನಾಯಕರು ಜಾಸ್ತಿಯಾಗಿ, ಅಧಿಕಾರದ ಆಸೆಯಿಂದ, ನಾನೇ ವ್ಯಕ್ತಿ ನಾನೇ ಪಕ್ಷ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಹಿಂದುತ್ವದ ಸಂಘಟನೆ ಮಾಡಿ ಹೋರಾಟ ಮಾಡುತ್ತಿರುವ ಅರುಣ್ ಕುಮಾರ್ ಪುತ್ತಿಲ ಪ್ರತಿಯೊಬ್ಬರ ಮನಸ್ಸಿನಲ್ಲಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವ, ಗಿರಿಜಾ ಕಲ್ಯಾಣೋತ್ಸವದ ಮುಖಾಂತರ ಅವರಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದರು.

ಗೌರವಾಧ್ಯಕ್ಷ ರಘು ಬೆಳ್ಳಿಪ್ಪಾಡಿ ಮಾತನಾಡಿ, ಪುತ್ತೂರಿನಲ್ಲಿ ನಡೆಯುವ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ಅರುಣ್ ಕುಮಾರ್ ಪುತ್ತಿಲ ಉತ್ತಮ ತಂಡವು ಶೋಷಿತ ವರ್ಗದಿಂದ ಬಂದಿರುವ ನನಗೆ ಪ್ರಾಮುಖ್ಯತೆ ನೀಡಿ ನನ್ನನ್ನು ಆಯ್ಕೆ ಮಾಡಿದ್ದು ಎಲ್ಲಾ ದಲಿತ ಬಂಧುಗಳು ಕಾರ್ಯಕ್ರಮದಲ್ಲಿ ಸಹಕರಿಸಲಿದ್ದಾರೆ. ಈ ಭಾರಿಯ ಕಾರ್ಯಕ್ರಮ ಈ ಹಿಂದೆ ನಡೆದ ಕಾರ್ಯಕ್ರಮಕ್ಕಿಂತಲೂ ನೂರು ಪಟ್ಟು ವಿಜೃಂಭಣೆಯಿಂದ ನಡೆಯಲಿದೆ ಎಂದರು. ನಮ್ಮ ಧರ್ಮ ನಮಗೆ ಶ್ರೇಷ್ಠ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲರವರ ಹೋರಾಟವನ್ನು ಗಮನಿಸಿದ್ದೇನೆ. ಯಾರಿಗೆ ಅನ್ಯಾವಾದರು ಪ್ರಥಮ ಬಾರಿ ಬರುವವರು ಪುತ್ತಿಲ ಆಗಿರುತ್ತಾರೆ ಎಂದರು.

ಕಾರ್ಯಾಧ್ಯಕ್ಷ ಅನಿಲ್ ಕನ್ನಾರ್ಣೂಜಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವು ಅದ್ದೂರಿಯಾಗಿ ನಡೆದಿದೆ. ಈ ಬಾರಿ ಶಿವನ ಸಾನಿಧ್ಯದ ಮುಂಭಾಗದಲ್ಲಿ ಶಿವ ಪಾರ್ವತಿಯರ ಕಲ್ಯಾಣ ಗಿರಿಜಾ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ರಹಿತವಾಗಿ ಸಹಕರಿಸಬೇಕು. ಸೀಮಾದಿತಿಯ ಸ್ಥಳಕ್ಕೆ ಸೀಮೆಯವರು ಆಗಮಿಸಿ ಕಾರ್ಯಕ್ರಮದ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ ಮಾತನಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಶ್ರೀನಿವಾಸ ಕಲ್ಯಾಣೋತ್ಸವವು ಟ್ರಸ್ಟ್ನ ಸಂಕಲ್ಪದಂತೆ ಸೇವಾ ಪರ್ವವಾಗಿ ನಡೆಯುತ್ತಿದೆ. ಪುತ್ತೂರಿನ ಮಹಾಜನತೆ, ದಾನಿಗಳ ನೆರವು ದೇವ ದುರ್ಲಬ ಕಾರ್ಯಕರ್ತರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಟ್ರಸ್ಟ್ ನ ಸಾಮಾಜಿಕ ಕಾರ್ಯಕ್ರಮವಾಗಿ ಆಧಾರ್ ತಿದ್ದುಪಡಿ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ಘಾಟೆ, ಹರೀಶ್ ಮರುವಾಳ, ಕೋಶಾಧಿಕಾರಿ ಸುಜಿತ್ ಕಜೆ, ಸೀತಾಪರಿವಾರ ಅಧ್ಯಕ್ಷೆ ಪ್ರೇಮಾ ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೀತಾಪರಿವಾರದ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ ಎಸ್.ಕೆರಾವ್ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ರವಿಕುಮಾರ್ ರೈ ಕೆದಂಬಾಡಿ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ಕಲ್ಯಾಣೋತ್ಸವ ಸಮಿತಿ ನೂತನ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ವಂದಿಸಿದರು.


ಟ್ರಸ್ಟ್ ನ ಕಾರ್ಯಕ್ರಮಗಳಿಗೆ ರೂ.2.93ಕೋಟಿ ಖರ್ಚು:
ಟ್ರಸ್ಟ್ ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದ ಅರುಣ್ ಪುತ್ತಿಲ ಅವರು, ಟ್ರಸ್ಟ್ ಮೂಲಕ ನಡೆದ ಮೂರು ವರ್ಷದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ರೂ.2.32ಕೋಟಿ ಖರ್ಚಾಗಿದೆ. ಖರ್ಚು ವೆಚ್ಚಗಳನ್ನು ಪಾರದರ್ಶಕವಾಗಿ ನಡೆಸಿ ಲೆಕ್ಕಪತ್ರ ಮಂಡಿಸಲಾಗಿದೆ. ಮೂರು ಅ್ಯಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನ ಎಲ್ಲಾ ಗ್ರಾಮಗಳಲ್ಲಿಯೂ ಅ್ಯಂಬ್ಯುಲೆನ್ಸ್ ಸೇವೆ ನೀಡುವ ಯೋಜನೆಯಿದೆ. ಟ್ರಸ್ಟ್ ನಿಂದ ಈ ತನಕ ನಡೆದ ಎಲ್ಲಾ ಕಾರ್ಯಕ್ರಮಗಳಿಗೆ ಒಟ್ಟು 2.93ಕೋಟಿ ಖರ್ಚಾಗಿದ್ದು ಇದಕ್ಕೆಲ್ಲಾ ಸಹಕಾರ ದೊರೆತಿರುವುದು ಹಿಂದೂ ಸಮಾಜದಿಂದ ಆಗಿದೆ. ದಾನಿಗಳು ಹಾಗೂ ದೇವ ದುರ್ಲಬ ಕಾರ್ಯಕರ್ತರ ಸಹಕಾರದಿಂದ ಕಾರ್ಯಕ್ರಮಗಳು ಬಹಳಷ್ಟು ಯಶಸ್ವಿಯಾಗಿ ನಡೆದಿದೆ ಎಂದರು.


ತುಂಬಿ ತುಲುಕಿದ ಸಭಾಂಗಣ:
ಸುಭದ್ರಾ ಕಲಾ ಮಂದಿರದಲ್ಲಿ ನಡೆದ ಗಿರಿಜಾ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಇಡೀ ಸಭಾಂಗಣವೇ ಜನರಿಂದ ತುಂಬಿ ತುಲುಕಿತ್ತು. ಆಸನಗಳು ಭರ್ತಿಯಾಗಿ ಸಭಾಂಗಣದ ಬದಿ ಹಾಗೂ ಹೊರಭಾಗದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿರುವುದು ಪೂರ್ವಭಾವಿ ಸಭೆಯಲ್ಲಿ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here