ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವ-ಧನ್ಯತಾ ಸಭೆ

0
  • ಕೊರಗಜ್ಜರವರ ಪ್ರೇರೇಪಣಾ ಶಕ್ತಿಯಿಂದ ಕ್ಷೇತ್ರ ಅಭಿವೃದ್ಧಿಪಥದತ್ತ-ರವೀಂದ್ರ ಶೆಟ್ಟಿ ನುಳಿಯಾಲು

ಪುತ್ತೂರು: ಎರಡು ವರ್ಷಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬಂದಿರುವುದು ನೋಡಿದಾಗ ಮುಂದಿನ ದಿನಗಳಲ್ಲಿ ಇಲ್ಲಿನ ಮಣ್ಣಾಪು ಕೊರಗಜ್ಜ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿ ಅಭಿವೃದ್ಧಿಪಥದಲ್ಲಿ ಸಾಗಲು ಶ್ರೀ ಕೊರಗಜ್ಜರವರೇ ಪ್ರೇರೇಪಣಾ ಶಕ್ತಿಯಾಗಿ ಆಶೀರ್ವದಿಸಲಿದ್ದಾರೆ ಎಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

 


ಮೊಟ್ಟೆತ್ತಡ್ಕ ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ದ್ವಿತೀಯ ವರ್ಷದ ನೇಮೋತ್ಸವವು ಯಶಸ್ವಿಯಾಗಿ ಸಂಪನ್ನ ಕಂಡಿದ್ದು, ಈ ಪ್ರಯುಕ್ತ ಫೆ.೧೩ ರಂದು ಶ್ರೀ ಕ್ಷೇತ್ರದಲ್ಲಿ ನಡೆದ ಧನ್ಯಾತಾ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದಲ್ಲಿ ಕಳೆದ ವರ್ಷ ನಡೆದ ಮೂಲ ಶಿಲಾ ಕಲ್ಲು ಪುನರ್ ಪ್ರತಿಷ್ಟೆ ಹಾಗೂ ನೇಮೋತ್ಸವ ಮತ್ತು ಪ್ರಸ್ತುತ ವರ್ಷ ನಡೆದ ನೇಮೋತ್ಸವ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆದಿರುವ ಹಿಂದೆ ಇಲ್ಲಿನ ಸ್ಥಳೀಯರು ನಿರ್ವಹಿಸಿದ ಕಾರ್ಯವೈಖರಿಯೇ ಕಾರಣವಾಗಿದೆ. ಪ್ರತಿಯೋರ್ವರು ತಮಗೆ ವಹಿಸಿದ ಕಾರ್ಯವನ್ನು ನಿಸ್ಸಂದೇಹವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಶ್ರೀ ಕ್ಷೇತ್ರವು ಮೂಲಭೂತ ಸೌಕರ್ಯಗಳಾದ ನರ್ತನ ಚಾವಡಿ, ಪಾಕಶಾಲೆ ಹಾಗೂ ಶೌಚಾಲಯವನ್ನು ಹೊಂದಿದ್ದು ಅನೇಕ ಸಹೃದಯ ದಾನಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲೂ ಶ್ರೀ ಕ್ಷೇತ್ರದ ಭಕ್ತರು ಕ್ಷೇತ್ರದ ಅಭಿವೃದ್ಧಿನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾ ಉತ್ತಮ ಸಂದೇಶ ರವಾನೆಯಾಗಲಿ ಎಂದರು.

ಆದಾಯ ಬರುವ ನಿಟ್ಟಿನಲ್ಲಿ ಶುಭ ಕಾರ್ಯಗಳು ನಡೆಯಲಿ-ಗಿರಿಧರ್ ಆಮೆಮನೆ:
ಮಣ್ಣಾಪು ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ರೂ.೫೦ ಸಾವಿರ ಧನಸಹಾಯವಿತ್ತು ಸಹಕರಿಸಿದ ಕೆಎಸ್‌ಆರ್‌ಟಿಸಿಯ ನಿವೃತ್ತ ಉದ್ಯೋಗಿ ಗಿರಿಧರ್ ಆಮೆಮನೆರವರು ಮಾತನಾಡಿ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಲಿದೆ ಮಾತ್ರವಲ್ಲ ಎಲ್ಲಾ ಕಡೆಗಳಲ್ಲೂ ಶ್ರೀ ಕ್ಷೇತ್ರದ ಬಗ್ಗೆ ಭಕ್ತರು ಅಭಿಮಾನದ ಮಾತುಗಳನ್ನಾಡುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀ ಕ್ಷೇತ್ರಕ್ಕೆ ಹೋಗುವ ದಾರಿ ಗೊತ್ತುವಿಕೆಗಾಗಿ ಮುಕ್ರಂಪಾಡಿ-ಮೊಟ್ಟೆತ್ತಡ್ಕ ತಿರುವಿನಲ್ಲಿ ಬೋರ್ಡ್ ಲಗತ್ತಿಸಿದರೆ ಒಳ್ಳೆಯದು ಮತ್ತು ಶ್ರೀ ಕ್ಷೇತ್ರಕ್ಕೆ ಒಂದಿಷ್ಟು ಆದಾಯ ಬರುವ ನಿಟ್ಟಿನಲ್ಲಿ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದರು.

ಶ್ರೀ ಕ್ಷೇತ್ರದ ಯಶಸ್ಸಿಗೆ ಎಲ್ಲರೂ ಕಾರಣಿಕರ್ತರೇ-ವಿಶ್ವನಾಥ್ ಮಣ್ಣಾಪು:
ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪುರವರು ಸ್ವಾಗತಿಸಿ ಮಾತನಾಡಿ, ಶ್ರೀ ಕ್ಷೇತ್ರದ ನೇಮೋತ್ಸವ ಯಶಸ್ಸಿಗೆ ಹಲವಾರು ಮಂದಿ ಕಾರಣೀಕರ್ತರಾಗಿದ್ದಾರೆ. ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರ ಮಾರ್ಗದರ್ಶನದಲ್ಲಿ ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ, ಅರ್ಚಕರಾದ ಕುಂಡ ಮಣ್ಣಾಪು ಹಾಗೂ ಅಣ್ಣು ಮಣ್ಣಾಪು, ಪ್ರಮುಖರಾದ ಯಶವಂತ ನಾಯಕ್ ಪೇರಾಜೆ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ, ಗೌರವ ಸಲಹೆಗಾರ ಗಂಗಾಧರ್ ಮಣ್ಣಾಪು, ವಿಘ್ನೇಶ್ ಆರ್ಟ್ಸ್‌ನ ಕೇಶವ, ಲಕ್ಷ್ಮೀ ಮಣ್ಣಾಪು, ರವಿ ಕೆ.ಮಣ್ಣಾಪು, ಸುಶೀಲ ಮಣ್ಣಾಪು, ಚನ್ನು ಮಣ್ಣಾಪು, ಲೋಕೇಶ್ ಜಿ.ಆರ್ ಮಣ್ಣಾಪು, ಕೇಶವ ಮಣ್ಣಾಪು, ಉಮೇಶ್ ಮಣ್ಣಾಪು, ದಿನೇಶ್ ಮಣ್ಣಾಪು ಸೇರಿದಂತೆ ಹಲವಾರು ಮಂದಿ ದುಡಿದಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ಸಹಕಾರ ಮುಂದುವರೆಯಲಿ ಎಂದರು.

ಶ್ರೀ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿರವರು ಲೆಕ್ಕಪತ್ರವನ್ನು ಮಂಡಿಸಿ, ವಂದಿಸಿದರು. ಪ್ರಮುಖರಾದ ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು ಸೇರಿದಂತೆ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.

ಆದಿತ್ಯವಾರ, ಮಂಗಳವಾರ, ಶುಕ್ರವಾರ ಪ್ರಾರ್ಥನೆಗೆ ಅವಕಾಶ
ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಆದಿತ್ಯವಾರ, ಮಂಗಳವಾರ, ಶುಕ್ರವಾರ ಹೀಗೆ ವಾರದ ಮೂರು ದಿನ ಬೆಳಿಗ್ಗೆ ಏಳರಿಂದ ಸಂಜೆ ಏಳರ ವರೆಗೆ ಭಕ್ತರಿಗೆ ಪ್ರಾರ್ಥನೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಉಳಿದ ದಿನಗಳಲ್ಲಿ ಪ್ರಾರ್ಥನೆಗೆ ಅವಕಾಶ ಬೇಕಾದರೆ ಶ್ರೀ ಕ್ಷೇತ್ರಕ್ಕೆ ಮುಂಚಿತವಾಗಿ ತಿಳಿಸತಕ್ಕದ್ದು. ಅಗೇಲು ಸೇವೆ ಸಲ್ಲಿಸುವವರು ಎರಡು ದಿನದ ಮುಂಚಿತವಾಗಿ ತಮ್ಮ ಹೆಸರನ್ನು ಶ್ರೀ ಕ್ಷೇತ್ರದಲ್ಲಿ ನಮೂದಿಸತಕ್ಕದ್ದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ರೂ.50 ಸಾವಿರ ದೇಣಿಗೆ
ನರ್ತನ ಚಾವಡಿ, ಪಾಕಶಾಲೆ, ಶೌಚಾಲಯ ನಿರ್ಮಾಣದ ಜೊತೆಗೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ರೂ.೧೨ ಲಕ್ಷ ವೆಚ್ಚವಾಗಿತ್ತು. ಹಲವಾರು ದಾನಿಗಳು ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ನೆರವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲುರವರು ಸುಮಾರು ರೂ.೧.೯೦ ಲಕ್ಷ ಹಣವನ್ನು ವ್ಯಯಿಸಿದ್ದು, ಇದರಲ್ಲಿ ರೂ.೫೦ ಸಾವಿರ ಮೊತ್ತವನ್ನು ಶ್ರೀ ಕ್ಷೇತ್ರಕ್ಕೆ ದೇಣಿಗೆಯಾಗಿ ಅರ್ಪಿಸುತ್ತಿದ್ದೇನೆ ಎಂದು ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲುರವರು ಹೇಳಿದರು.

LEAVE A REPLY

Please enter your comment!
Please enter your name here