ಉಪ್ಪಿನಂಗಡಿಯ 36ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಅದ್ದೂರಿಯ ಚಾಲನೆ

0

ಉಪ್ಪಿನಂಗಡಿ: ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರ ಕೃಪಾಶೀರ್ವಾದದೊಂದಿಗೆ ಕೂಟೇಲು ಹಳೆಗೇಟು ಬಳಿಯಿರುವ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುವ ೩೬ನೇ ವರ್ಷದ ಹೊನಲು ಬೆಳಕಿನ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಎಪ್ರಿಲ್2 ರಂದು ಬೆಳಿಗ್ಗೆ 10.31ರ ಸುಮುಹೂರ್ತದಲ್ಲಿ ಅದ್ದೂರಿಯ ಚಾಲನೆ ದೊರಕಿದೆ.

ಬೆಳಿಗ್ಗೆ ೮.೪೫ಕ್ಕೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದರವರು ದೇವಸ್ಥಾನದ ಮುಂಭಾಗದಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಕಂಬಳ ಸಮಿತಿಯ ಅಧ್ಯಕ್ಷರಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರು ಡಾ.ಯು.ಪಿ. ಶಿವಾನಂದರವರನ್ನು ಶಾಲು ಹೊದಿಸಿ ಗೌರವಿಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಉಳಿಯ, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಮೆರವಣಿಗೆಗೆ ಚಾಲನೆ ದೊರೆತ ಬಳಿಕ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದ ಮೆರವಣಿಗೆಯಲ್ಲಿ ಕಂಬಳ ಕೋಣಗಳು, ಗೊಂಬೆ ಕುಣಿತ, ಕೀಲು ಕುದುರೆ, ಪ್ರಚಾರ ವಾಹನ, ಜಿ.ಎಸ್. ಬ್ಯಾಂಡ್ ಸೆಟ್ ಸಾಗಿ ಬಂದು ಮೆರವಣಿಗೆಯ ಕಳೆ ಹೆಚ್ಚಿಸಿತು. ಕಂಬಳ ಕೋಣಗಳ ಯಜಮಾನರು, ನೇರಳೆ ರುಮಾಲ್ ತಲೆಗೆ ಧರಿಸಿದ ಕಂಬಳ ಸಮಿತಿಯ ಪದಾಧಿಕಾರಿಗಳು, ಹಲವಾರು ಕಂಬಳಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕಂಬಳ ಕರೆಯ ಬಳಿಯ ಮುಖ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ದೀಪ ಬೆಳಗಿಸುವುದ ಮೂಲಕ ಕಂಬಳ ಕೂಟಕ್ಕೆ ಚಾಲನೆ ನೀಡಿದರು. ಉಪ್ಪಿನಂಗಡಿಯ ಕಂಬಳವು ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಈಗ ಗೆದ್ದಿದೆ. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯ ಸಿಕ್ಕ ಬಳಿಕ ಉಪ್ಪಿನಂಗಡಿ ಕಂಬಳವೆನ್ನುವುದು ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿದೆ. ಇದರ ಹಿರಿಮೆ ಇನ್ನಷ್ಟು ಹೆಚ್ಚಾಗಲಿ ಎಂದು ಕರುಣಾಕರ ಸುವರ್ಣ ಶುಭ ಹಾರೈಸಿದರು.

ಮುಖ್ಯ ಅಭ್ಯಾಗತರಾಗಿದ್ದ ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ಹಿರಿಯರಿಂದ ಬಂದ ಸಂಪ್ರದಾಯ ಬದ್ಧ ಆಚರಣೆಗಳಿಗೆ ಜೀವಕಳೆ ಇದೆ ಎನ್ನುವುದಕ್ಕೆ ಕಂಬಳವು ಜನರನ್ನು ಆಕರ್ಷಿಸುತ್ತಿರುವುದೇ ಸಾಕ್ಷಿ. ಕಂಬಳವನ್ನು ನಡೆಸುವಲ್ಲಿ, ಕಂಬಳವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಶೋಕ್ ಕುಮಾರ್ ರೈಯವರು ಕಂಬಳದ ಕೋಣಗಳ ಯಜಮಾನನಾಗಿಯೂ ಹತ್ತೂರಲ್ಲಿ ಪ್ರಸಿದ್ಧಿಯನ್ನು ಪಡೆಯಲಿ ಎಂದು ಶುಭಹಾರೈಸಿದರು.

ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಕೂಟವನ್ನು ನಡೆಸುವುದೆಂದರೆ ಸುಲಭದ ಮಾತಲ್ಲ. ಇಂದು ಕಂಬಳ ಉಳಿದಿದೆ ಎಂದರೆ ಅದಕ್ಕೆ ಉಪ್ಪಿನಂಗಡಿಯ ಕಂಬಳ ಸಮಿತಿ ಕಾರಣ. ಕಂಬಳದ ವಿರುದ್ಧ ನಿರ್ಬಂಧಗಳು ಬಂದಾಗ ಅದನ್ನು ನ್ಯಾಯಾಲಯದ ಮೂಲಕ ಹೋರಾಟ ಮಾಡಿದ್ದು ಉಪ್ಪಿನಂಗಡಿ ಕಂಬಳ ಸಮಿತಿ. ಇಲ್ಲಿನ ಕಂಬಳ ಕೂಟವನ್ನು ನಿಗದಿತ ಸಮಯದಲ್ಲಿ ಮುಗಿಸುವ ದೃಷ್ಟಿಕೋನವನ್ನಿಟ್ಟುಕೊಳ್ಳಲಾಗಿದೆ. ಆದ್ದರಿಂದ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಮಾತನಾಡಿ, ಕಂಬಳ ಕೋಣಗಳನ್ನು ಸಾಕುವುದು, ಅವುಗಳ ಆರೈಕೆ ಮಾಡುವುದು, ಅವುಗಳನ್ನು ಕಂಬಳ ಕೂಟಕ್ಕೆ ಕರೆದುಕೊಂಡು ಹೋಗುವುದಕ್ಕೆ ಕಂಬಳ ಕೋಣಗಳ ಯಜಮಾನರು ಸಾಕಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಆದ್ದರಿಂದ ಕಂಬಳ ಕೋಣಗಳನ್ನು ಸಾಕುವವರಿಗೆ ಅದರ ವೆಚ್ಚ ಭರಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದರು.

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ರಾಜೇಶ್ ಎಲೆಕ್ಟ್ರಿಕಲ್ಸ್‌ನ ಮಾಲಕ ರಾಜೇಶ್ ರೈ, ಉಪ್ಪಿನಂಗಡಿ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹಾಲಿಂಗ ಕಜೆಕ್ಕಾರು, ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಉಪಾಧ್ಯಕ್ಷರಾದ ಜಯಂತ ಪೊರೋಳಿ, ನಟೇಶ್ ಪೂಜಾರಿ ಪುಳಿತ್ತಡಿ, ರಾಮಚಂದ್ರ ಮಣಿಯಾಣಿ, ಪ್ರವೀಣ್ ಕುಮಾರ್ ಕದಿಕ್ಕಾರುಬೀಡು, ವಾರಿಸೇನ ಜೈನ್ ಕೋಡಿಯಾಡಿ, ವಿದ್ಯಾಧರ ಜೈನ್, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ವಿಜಯ ಪೂಜಾರಿ ಚೀಮುಳ್ಳು ಕೋಡಿಂಬಾಡಿ, ಸಹಸಂಚಾಲಕರಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಜಯಪ್ರಕಾಶ್ ಬದಿನಾರು, ಮಹಾಲಿಂಗ ಕಜೆಕ್ಕಾರು, ಸದಸ್ಯರಾದ ಜಗದೀಶ್ ಪರಕಜೆ, ಸದಾಶಿವ ಸಾಮಾನಿ ಸಂಪಿಗೆದಡಿ, ಕಬೀರ್ ಕರುವೇಲು, ಜಯಾನಂದ ಪಿಲಿಗುಂಡ, ಕೃಷ್ಣಪ್ಪ ಪೂಜಾರಿ ಪುಲಮುಗೇರು, ನಿಹಾಲ್ ಶೆಟ್ಟಿ, ವಿಕ್ರಂ ಶೆಟ್ಟಿ ಅಂತರ, ಶಿವಪ್ರಸಾದ್ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಸ್ವಾಗತಿಸಿ, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ನಂತರ ಕಂಬಳ ಆರಂಭಗೊಂಡಿತು.

ಸುದ್ದಿಯಲ್ಲಿ ನೇರಪ್ರಸಾರ
ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳವು ಸುದ್ದಿ ಯೂ ಟ್ಯೂಬ್ ಚಾನೆಲ್ ಮತ್ತು ಸುದ್ದಿ ಫೇಸ್‌ಬುಕ್ ಪೇಜ್‌ನಲ್ಲಿ ನಿರಂತರವಾಗಿ ನೇರಪ್ರಸಾರಗೊಳ್ಳುತ್ತಿದ್ದು ಕಂಬಳಾಭಿಮಾನಿಗಳು ವೀಕ್ಷಿಸುತ್ತಿದ್ದಾರೆ.

ಉಪ್ಪಿನಂಗಡಿಯ 36ನೇ ವರ್ಷದ ವಿಜಯ ವಿಕ್ರಮ ಜೋಡುಕರೆ ಕಂಬಳದ ಮೆರವಣಿಗೆಗೆ ಚಾಲನೆ

LEAVE A REPLY

Please enter your comment!
Please enter your name here