ತಾಲೂಕು ಕ್ರೀಡಾಂಗಣದಲ್ಲಿ ಅಂಬಿಕಾ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

0
  • ದೇಹವೇ ನಮ್ಮೆಲ್ಲಾ ಸಾಧನೆಗಳಿಗೆ ಮೂಲಧಾತು : ರವಿಶಂಕರ್ ಬಿ

ಪುತ್ತೂರು: ಇಂದಿನ ಶೈಕ್ಷಣಿಕ ಕ್ರಮ ಮನುಷ್ಯನ ಚಿಂತನೆಯ ಮೇಲೆ ಪರಿಣಾಮ ಮಾಡುತ್ತಿದೆಯೇ ವಿನಃ ದೇಹದ ಮೇಲೆ ಯಾವುದೇ ಪ್ರಭಾವವನ್ನು ಬೀರುತ್ತಿಲ್ಲ. ಆದರೆ ದೇಹವಿಲ್ಲದೆ ಯಾವುದೇ ಸಾಧನಾ ಸಾಧ್ಯತೆಗಳೂ ಇಲ್ಲ ಎಂಬ ಸತ್ಯವನ್ನು ನಾವು ಮರೆಯುತ್ತಿದ್ದೇವೆ. ಹಾಗಾಗಿ ನಮ್ಮ ಶರೀರವನ್ನು ಅರಿಯುವ, ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ನೆಲೆಯಲ್ಲಿ ಆಲೋಚಿಸಬೇಕು ಎಂದು ಶೃಂಗೇರಿಯ ಸರ್ಕಾರಿ ಪಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ ಬಿ ಹೇಳಿದರು.


ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಧ್ವಜಾರೋಹಣಗೈದು ಮಾತನಾಡಿದರು. ನಮ್ಮ ಜೀವನದಲ್ಲಿ ದೇಹದ ಸತ್ವದ ಬಗೆಗೆ ಗಮನ ಕೊಡಬೇಕು. ದೈಹಿಕ ಶಕ್ತಿಯಿಲ್ಲದೆ ಯಾವುದೇ ಯುಕ್ತಿ ಕಾರ್ಯಗತಗೊಳ್ಳುವುದಿಲ್ಲ. ಮನುಷ್ಯರೆಂದ ಮೇಲೆ ವ್ಯಾಯಾಮ ಚಟುವಟಿಕೆಗಳು ಇರಲೇಬೇಕು. ಅದರಿಂದ ವಿಮುಖರಾದಷ್ಟೂ ನಾವು ದೇಹವನ್ನು ತಿಳಿಯುವ ಪ್ರಕ್ರಿಯೆಯಿಂದ ದೂರವಾಗುತ್ತೇವೆ ಎಂದ ಅವರು, ಲಿಂಗ, ಜಾತಿ, ವರ್ಗ ಭೇದ ಇಲ್ಲದೆ ಎಲ್ಲರನ್ನೂ ಒಳಗೊಳ್ಳುವ ವಿಶೇಷ ಕ್ಷೇತ್ರವೇ ಕ್ರೀಡೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ನಮ್ಮ ಇಡಿಯ ಜೀವನದಲ್ಲೇ ಕ್ರೀಡಾಮನೋಭಾವ ಬೆಳೆಯಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಒಡಮೂಡಬೇಕು. ನಾವು ಹೀಗೆಯೇ ಇರುವುದು ಎಂಬ ನಿರ್ಬಂಧಿತ ಮನಃಸ್ಥಿತಿಯಿಂದ ಹೊರಬಂದು ಸೋಲು ಗೆಲುವಿನ ಆಚೆಗಿನ ಅನುಭವದ ಸುಖವನ್ನು ಸ್ವೀಕರಿಸಬೇಕು. ತನ್ಮೂಲಕ ಮನಸ್ಸನ್ನು ಸುಸ್ಥಿತಿಗೆ ತರಬೇಕು ಎಂದರು. ಕಾಲೇಜಿನ ಕ್ರೀಡಾಪಟುಗಳಾದ ಸಾಯಿಶ್ವೇತ, ನವನೀತ್, ರಾಹುಲ್ ಹಾಗೂ ಅನ್ಮಯ್ ಭಟ್ ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಸ್ವಾಗತಿಸಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಎಸ್ ಅತಿಥಿಗಳನ್ನು ಪರಿಚಯಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮ ನಂತರ ವಿವಿಧ ಸ್ಪರ್ಧೆಗಳು ನಡೆದವು.

LEAVE A REPLY

Please enter your comment!
Please enter your name here