ವಿದ್ಯಾಮಾತಾ ಅಕಾಡೆಮಿಯಲ್ಲಿ ಭಾರತೀಯ ಸೇನಾ ನೇಮಕಾತಿಗಳ ಕುರಿತು ಉಚಿತ ಮಾಹಿತಿ ಕಾರ್ಯಾಗಾರ

0

ಪುತ್ತೂರು: ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇದರ ವತಿಯಿಂದ ದ.ಕ ಜಿಲ್ಲಾ ನಿವೃತ್ತ ಸೈನಿಕರ ಸಂಘ ಮತ್ತು ತಾಲೂಕು ಘಟಕಗಳ ಸಹಯೋಗದಲ್ಲಿ ಭಾರತೀಯ ಸೇನಾ ನೇಮಕಾತಿಗಳ ಕುರಿತು ಉಚಿತ ಮಾಹಿತಿ ಕಾರ್ಯಾಗಾರ ಜೂ.26ರಂದು ಎಪಿಎಂಸಿ ರಸ್ತೆಯ ಹಿಂದೂಸ್ಥಾನ್ ಕಾಂಪ್ಲೆಕ್ಸ್‌ನಲಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಏರ್‌ವೈಸ್ ಮಾರ್ಷಲ್ ಕೆ.ರಮೇಶ್ ಕಾರ್ಣಿಕ್ ಮಾತನಾಡಿ, ಅಗ್ನಿಪಥ್ ಯುವಕರಿಗೆ ಬಹಳಷ್ಟು ಉತ್ತಮ ಯೋಜನೆ. ಸೇನೆಗೆ ಸೇರಲು ಪ್ರಯತ್ನಿಸುತ್ತಿದ್ದರೆ ಅಗ್ನಿಪಥ್ ಉತ್ತಮ ಅವಕಾಶ. ಸಾಕಷ್ಟು ಮಂದಿ ಇದರಲ್ಲಿ ಅರ್ಜಿ ಸಲ್ಲಿಸುತ್ತಿದ್ದು ಸರ್ವರ್ ತುಂಬಾ ಬ್ಯೂಸಿ ಬುರುತ್ತಿದೆ. ಸೇನೆ ಸೇರಿದ ಬಳಿಕ ನಿಮ್ಮ ಶೈಲಿಯೇ ಬದಲಾಗುತ್ತದೆ. ಅಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಬದಲಾವಣೆಗೆ ಸಾಕಷ್ಟು ಅವಕಾಶಗಳಿವೆ. ಉನ್ನತ ಶಿಕ್ಷಣ, ಉದ್ಯೋಗ, ಜೀವನ ಮಟ್ಟ ಸುಧಾರಿಸಲು ಸೇರಲು ಅವಕಾಶವಿದೆ ಎಂದು ಹೇಳಿದ ಅವರು ಏರ್‌ಪೋರ್ಸ್‌ನಲ್ಲಿ ಇಂಟರ್‌ವ್ಯೂ ಮೂಲಕ ಉದ್ಯೋಗ ಪಡೆದದ್ದು, ಉದ್ಯೋಗದಲ್ಲಿನ ಕೆಲವೊಂದು ರೋಚಕ ಸಂದರ್ಭ, ಹುದ್ದೆಯಲ್ಲಿದ್ದುಕೊಂಡು ತಾನು ಪಡೆದ ಉನ್ನತ ಶಿಕ್ಷಣ ಮುಂತಾದ ಹತ್ತು ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳ ಮುಂದಿಟ್ಟರು. ಬಳಿಕ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಕೇವಲ ಕೆಲಸ ಮಾತ್ರ ಅಲ್ಲ. ತಮ್ಮ ಜೀವನ ಶೈಲಿಯನ್ನು ನಿರ್ಮಿಸುವುದರ ಜತೆ ಜೀವನಕ್ಕೆ ಉತ್ತಮ ಅಡಿಪಾಯವನ್ನು ಹಾಕುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗ ಅಕಾಂಕ್ಷಿಗಳು ಯಾರೇ ಆಗಿರಲಿ ಯಾವುದೇ ಉದ್ಯೋಗದಲ್ಲಿನ ಗೈಡ್‌ಲೈನ್ಸ್‌ಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಒಳ್ಳೆಯದು. ರಾಷ್ಟ್ರೀಯ ರಕ್ಷಣಾ ತಂಡದಲ್ಲಿ ಉತ್ತಮ ಭವಿಷ್ಯವಿದ್ದು ಒಮ್ಮೆ ಸೇರ್ಪಡೆಗೊಂಡರೆ ಅದರಲ್ಲಿ ವಿದ್ಯಾಭ್ಯಾಸ, ಉದ್ಯೋಗ ದೊರೆಯುತ್ತದೆ. ಇದರಲ್ಲಿ ಮಹಿಳೆಯವರಿಗೂ ಅವಕಾಶವಿದೆ. ಐಎಎಸ್, ಐಪಿಎಸ್‌ಗಳಿಗಿಂತಲೂ ಉತ್ತಮ ಪದವಿ ಉದ್ಯೋಗಗಳು ದೊರೆಯಲಿದೆ. ಎಂದು ಹೇಳಿದ ಅವರು ಅಗ್ನಿಪಥ್ ಯೋಜನೆಯಲ್ಲಿ ಸೇನಾ ನೇಮಕಾತಿ ಮಾದರಿಯಲ್ಲೇ ನೇಮಕಾತಿಗಳು ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿ ಭಾರತೀಯ ಸೇನೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ನೇಮಕಾತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಭಾರತೀಯ ಸೇನಾ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ಸಾತ್ವಿಕ್ ಕುಳಮರ್ವ ಭಾರತೀಯ ಸೇನಾ ಉದ್ಯೋಗದ ತಮ್ಮ ಅನುಭವನದಲ್ಲಿ ಹಂಚಿಕೊಂಡು ವಿದ್ಯಾರ್ಥಿಗಳೊಂದಿಗೆ ಸೇನೆಗೆ ಬೇಕಾದ ಅರ್ಹತೆ ಮುಂತಾದವುಗಳ ಕುರಿತು ಸಂವಾದ ನಡೆಸಿಕೊಟ್ಟರು.


ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಉದ್ಯೋಗ ಮೇಳವನ್ನು ಸಂಘಟಿಸಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿಯನ್ನು ಸೇರಿಸಿ ೧೧೦ ಮಂದಿಗೆ ಬೇರೆ ಬೇರೆ ಕಂಪೆನಿಗಳ ನೇಮಕಾತಿ ಆದೇಶವನ್ನು ವೇದಿಕೆಯಲ್ಲಿ ನೀಡಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಗಿದೆ. ಭಾರತೀಯ ಸೇನಾ ನೇಮಕಾತಿ ಕುರಿತು ಕೊಡಗು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮುಂತಾದ ಗ್ರಾಮೀಣ ಪ್ರದೇಶದ ಜನರಿಗೆ ಮಾಹಿತಿ ಸಿಗಬೇಕು ಎಂಬ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಮೂಲಕ ಪುತ್ತೂರು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಕಾಲೇಜು ವಿದ್ಯಾರ್ಥಿ ಸಂದರ್ಭದಲ್ಲಿ ಎಸ್.ಐಯಾಗುವ ಕನಸಿತ್ತು. ಆದರೆ ಅದು ನನಸಾಲಿಲ್ಲ. ಆದರೆ ಈಗ ವಿದ್ಯಾಮಾತಾ ಅಕಾಡೆಮಿಯನ್ನು ಪ್ರಾರಂಭಿಸಿ ಅದರ ಮುಖಾಂತರ ನೂರಾರು ಎಸ್.ಐಗಳನ್ನು ತಯಾರಿಸುವ ಮೂಲಕ ನನ್ನ ಕನಸು ನನಸಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಬಂಟ್ವಾಳ, ಕೊಡಗು, ಸುಳ್ಯ, ಬೆಳ್ತಂಗಡಿ ಮುಂತಾದ ಕಡೆಗಳಿಂದ ಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೇನೆಯಲ್ಲಿರುವ ವಿವಿಧ ಸ್ತರದ ನೇಮಕಾತಿಗಳ ಮಾಹಿತಿ ನೀಡುವುದರ ಜತೆಗೆ ಭೂಸೇನೆ, ವಾಯುಸೇನೆ, ನೌಕಾಸೇನೆಗಳಲ್ಲಿನ ಅಧಿಕಾರಿ ಹುದ್ದೆಗಳನ್ನು ಹೇಗೆ ಪಡೆಯಬಹುದು, ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.
ನಿವೃತ್ತ ಯೋಧ, ಕಾರ್ಯಕ್ರಮ ಸಂಯೋಜಕ ಗೋಪಾಲಕೃಷ್ಣ ಕಾಂಚೋಡು ಉಪಸ್ಥಿತರಿದ್ದರು. ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿದರು. ಸಿಬ್ಬಂದಿ ಹರ್ಷಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here