ಜು.3; ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉಚಿತ ವೈದ್ಯಕೀಯ ಶಿಬಿರ

0

ಈ ಬಾರಿ ನಡೆಯಲಿದೆ ಉಚಿತ ದಂತ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಆಯುಷ್ಮಾನ್ ನೊಂದಣಿ

ಪುತ್ತೂರು; ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಆರೋಗ್ಯ ರಕ್ಷಾ ಸಮಿತಿ ಆಶ್ರಯದಲ್ಲಿ ಭಕ್ತರಿಗಾಗಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವೀಯಾಗಿ ಮುನ್ನಡೆಯುತ್ತಿದೆ. ಪ್ರತಿ ತಿಂಗಳು ನಡೆಯುವ ಶಿಬಿದರಲ್ಲಿ ಪ್ರತಿ ಬಾರಿಯೂ ಒಂದೊಂದು ವಿಶೇಷತೆ ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಜು.3ರಂದು ನಡೆಯುವ ನಾಲ್ಕನೇ ಹಂತದ ಶಿಬಿರದಲ್ಲಿ ವಿಶೇಷವಾಗಿ ಉಚಿತ ದಂತ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆಗಳ ಜೊತೆಗೆ ಆಯುಷ್ಮಾನ್ ಕಾರ್ಡ್ ನೋಂದಾವಣೆಯು ನಡೆಸುವುದಾಗಿ ಶಿಬಿರದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯು ಜೂ.25ರಂದು ದೇವಸ್ಥಾನದ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ತಿಂಗಳ ಮೊದಲ ಭಾನುವಾರ ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಈ ಬಾರಿ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ಡಾ. ಕೃಷ್ಣಪ್ರಸಾದ್ ನೇತೃತ್ವದಲ್ಲಿ ದಂತ ವೈದ್ಯರ ತಂಡವು ದಂತ ವೈದ್ಯಕೀಯ ತಪಾಸಣೆಯಲ್ಲಿ ದಂತ ಸ್ವಚ್ಛತೆ, ದಂತ ಕುಳಿ ತುಂಬುವಿಕೆ (ಮಕ್ಕಳಿಗೆ ಮತ್ತು ವಯಸ್ಕರಿಗೆ), ಹಲ್ಲು ಕೀಳುವಿಕೆ ಮೊದಲಾದ ಚಿಕಿತ್ಸೆಗಳು ದೊರೆಯಲಿದೆ. ಚರ್ಮರೋಗ ತಜ್ಞ ಡಾ. ಸಚಿನ್ ಶೆಟ್ಟಿಯವರಿಂದ ಚರ್ಮರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ವಿಶೇಷವಾಗಿ ನಡೆಯಲಿದೆ. ಇದರ ಜೊತೆಗೆ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ನೇತೃತ್ವದಲ್ಲಿ ರಕ್ತಪರೀಕ್ಷೆ ಹಾಗೂ ಇಸಿಜಿ, ಇತರ ಸಾಮಾನ್ಯ ಪರೀಕ್ಷೆಗಳು ಮತ್ತು ಉಚಿತ ಔಷಧಿಗಳು ವಿತರಣೆ ನಡೆಯಲಿದೆ. ಇದರ ಜೊತೆಗೆ ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ಸಾಯಿಪ್ರಕಾಶ್ ಹಾಗೂ ಡಾ.ದೀಕ್ಷಾ ಶಿಬಿರದಲ್ಲಿ ತಜ್ಞ ವೈದ್ಯರುಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.

ವೈದ್ಯರ ತಂಡ ಉತ್ಸಾಹದಲ್ಲಿ ಭಾಗಿ:

ಶಿಬಿರದಲ್ಲಿ ಪರಿಣಾಮಕಾರಿಯಾಗಿ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ. ಪುತ್ತೂರಿನ ಹಿರಿಯ ವೈದ್ಯರುಗಳು ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲು ವೈದ್ಯರ ತಂಡ ಅವರಾಗಿಯೇ ಆಸಕ್ತಿಯಿಂದ ಸೇವೆ ನೀಡಲು ಮುಂದೆ ಬರುತ್ತಿದ್ದಾರೆ. ಹೃದ್ರೋಗ ತಜ್ಞ, ಮನೋರೋಗ ತಜ್ಞ ಸಹಿತ ಹಲವು ವೈದ್ಯರು ಶಿಬಿರದಲ್ಲಿ ಉಚಿತವಾಗಿ ಸೇವೆ ನೀಡುವ ಉತ್ಸಾಹದಲ್ಲಿದ್ದಾರೆ. ಮಂಗಳೂರಿನ ಪ್ರಸಿದ್ದ ಆಸ್ಪತ್ರೆಗಳು, ಪ್ರತಿಷ್ಠಿತ ವೈದ್ಯರುಗಳು ಉಚಿತ ಶಿಬಿರದಲ್ಲಿ ಸೇವೆ ನೀಡಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ ಎಂದು ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.

ಉಚಿತ ಆಯುಷ್ಮಾನ್ ನೋಂದಣಿ:

ಉಚಿತ ವೈದ್ಯಕೀಯ ಶಿಬಿರದಲ್ಲಿ ಈ ಬಾರಿ ವಿಶೇಷವಾಗಿ ಆಯುಷ್ಮಾನ್ ಕಾರ್ಡ್ ನೋಂದಣಿಯು ನಡೆಯಲಿದೆ. ಆಯುಷ್ಮಾನ್ ಕಾರ್ಡ್ ನೋಂದಾಯಿಸಿಕೊಳ್ಳುವ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್(ಎಪಿಲ್ ಅಥವಾ ಬಿಪಿಎಲ್), ಆಧಾರ್ ಕಾರ್ಡ್‌ನೊಂದಿಗೆ ಆಗಮಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ಊಟ, ಉಪಾಹಾರ:

ಶಿಬಿರದಲ್ಲಿ ಬಾಗವಹಿಸುವವರಿಗೆ ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಪ್ರತಿಯೊಬ್ಬರಿಗೂ ಊಟ, ಉಪಾಹಾರಗಳನ್ನು ನೀಡಲಾಗುತ್ತಿದೆ. ಈ ಬಾರಿಯ ಶಿಬಿರದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಕುಮಾರ್ ನಾಯರ್‌ರವರ ಪ್ರಾಯೋಜಕತ್ವದಲ್ಲಿ ಊಟ, ಉಪಾಹಾರಗಳು ನಡೆಯಲಿದೆ.

ಆರೋಗ್ಯ ರಕ್ಷಾ ಸಮಿತಿ ಸಂಚಾಲಕ ಪ್ರಸನ್ನ ಮಾರ್ತ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್, ಉದಯ ಕುಮಾರ್ ರೈ ಸಂಪ್ಯ, ವ್ಯವಸ್ಥಾನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ವಿನ್ಯಾಸ್ ಯು.ಎಸ್., ಜಗದೀಶ್, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಪ್ರೇಮಾ, ಶಶಿಕಲಾ ನಿರಂಜನ, ಪ್ರಮುಖರಾದ ರಮೇಶ್ ರೈ ಮೊಟ್ಟೆತ್ತಡ್ಕ, ಮಂಜಪ್ಪ ಗೌಡ ಬೈಲಾಡಿ, ಗುಡ್ಡಪ್ಪ ಗೌಡ ಬೈಲಾಡಿ, ನವೀನ್ ಕುಕ್ಕಾಡಿ, ರವಿನಾಥ ಗೌಡ ಬೈಲಾಡಿ, ರವೀಂದ್ರ ಪೂಜಾರಿ ಸಂಪ್ಯ, ನಾಗೇಶ್ ಸಂಪ್ಯ, ಜಯರಾಮ ಪಂಜಳ, ಸುರೇಶ್ ಮೊಟ್ಟೆತ್ತಡ್ಕ, ರವೀಂದ್ರ ಗೌಡ ಬೈಲಾಡಿ, ಸುರೇಶ್ ಉದಯಗಿರಿ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here