ಮುಕ್ವೆ ಶಾಲಾ ಮುಖ್ಯಗುರು ಪುಷ್ಪಾ ಕುಮಾರಿಗೆ ಬೀಳ್ಕೊಡುಗೆ

0

ಮಕ್ಕಳನ್ನು ಯೋಗ್ಯ ಪ್ರಜೆಗಳಾಗಿಸುವ ಭಾಗ್ಯ ಪ್ರಾಥಮಿಕ ಶಾಲಾ ಶಿಕ್ಷಕರದ್ದು: ಪುಷ್ಪಾ ಕುಮಾರಿ

ಪುತ್ತೂರು: ಮುಕ್ವೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪುಷ್ಪಾ ಕುಮಾರಿ ಎನ್. ಜೂನ್ 30ರಂದು ನಿವೃತ್ತಿಗೊಂಡಿದ್ದು, ಅವರಿಗೆ ಶಾಲಾ ಸಭಾಂಗಣದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.

40 ಚೆಯರ್‌ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಗುರು ಪುಷ್ಪಾ ಕುಮಾರಿ ಎನ್., ಪುಟಾಣಿ ಮಕ್ಕಳನ್ನು ತಿದ್ದಿ ತೀಡುವ ಕಾಯಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಕ್ಕಿದ ಪುಣ್ಯದ ಫಲ. ಇದೇ ಪುಟಾಣಿ ಮಕ್ಕಳು ಮುಂದೆ ದೇಶದ ಪ್ರಜೆಗಳು. ಇವರನ್ನು ಯೋಗ್ಯ ಪ್ರಜೆಗಳಾಗಿ ರೂಪಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಪುಣ್ಯ ಸಂಪಾದಿಸಿದವರು ಶಿಕ್ಷಕರಾಗಿ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳುವ ಅವಕಾಶ ಲಭಿಸುತ್ತದೆ ಎಂದರು.

ಸರಕಾರಿ ಕೆಲಸಕ್ಕೆ ಸೇರಿದ ಬಳಿಕ ನಮ್ಮನ್ನು ಸಂಪೂರ್ಣ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸರಕಾರಿ ನೌಕರರಿಗೆ ಗೌರವ ಪ್ರಾಪ್ತಿಯಾಗುತ್ತದೆ. ಸಾರ್ವಜನಿಕರನ್ನು ಸಹಮತಕ್ಕೆ ತೆಗೆದುಕೊಂಡು, ಸಮಾಜಕ್ಕೆ ಉತ್ತಮ ಸೇವೆ ನೀಡುವುದು ಸರಕಾರಿ ನೌಕರರ ಕರ್ತವ್ಯವೂ ಹೌದು. ಶಿಶಿಲ, ಆನಡ್ಕ, ಕೈಕಾರ, ಸವಣೂರು ಮೊಗರು ನಂತರ ಮುಕ್ವೆ ಶಾಲೆಯಲ್ಲಿ ನಾನು ಶಿಕ್ಷಕಿಯಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ ಎಂದರು.

ಜನರೊಂದಿಗೆ ಉತ್ತಮ ಒಡನಾಟ: ಸುಧಾಕರ್ ಕುಲಾಲ್:

ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮಾತನಾಡಿ, ಪುಷ್ಪಾ ಕುಮಾರಿ ಅವರು ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇವರ ಪತಿ ಮೋನಪ್ಪ ಪುರುಷ ಅವರು ಕೂಡ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಆನಡ್ಕ ಶಾಲೆಯಲ್ಲಿ ಪುಷ್ಪಾ ಕುಮಾರಿ ಅವರು ತೋರಿಸಿಕೊಟ್ಟಿರುವ ಹಾದಿ ಇಂದೂ ಜೀವಂತವಾಗಿದೆ. ಆ ಶಾಲೆಯಲ್ಲಿ ಇಂದು ಕೂಡ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಶಾಲೆಗೆ ಬರುವ ಅನೇಕ ಪಾರಿವಾಳ, ಕಾಗೆ ಮೊದಲಾದ ಪಕ್ಷಿಗಳಿಗೆ ಪುಷ್ಪಾ ಕುಮಾರಿ ಅವರು ಆಹಾರ ನೀಡುತ್ತಿದ್ದರು. ಶಾಲೆಯಿಂದ ಹಿಂದಿರುಗುವಾಗ 7-8 ನಾಯಿಗಳಿಗೆ ಆಹಾರ ಹಾಕುತ್ತಾರೆ. ಇದು ಅವರ ಮಾನವೀಯತೆಗೆ ಹಿಡಿದ ಕೈಗನ್ನಡಿ ಎಂದರು.

ಉತ್ತಮ ಹೆಸರು ಸಂಪಾದನೆ: ರವಿಚಂದ್ರ:

ನರಿಮೊಗರು ಪಿಡಿಓ ರವಿಚಂದ್ರ ಮಾತನಾಡಿ, ತಾನು ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ಪುಷ್ಪಾ ಕುಮಾರಿ ಅವರು ಉತ್ತಮ ಹೆಸರು ಸಂಪಾದಿಸಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಪಾಠ ಮಾಡುವುದು, ವಿದ್ಯಾರ್ಥಿಗಳಿಗೆ ಕಲಿಸುವುದು ಬಹಳ ಕಷ್ಟ. ಅಂತಹದ್ದರಲ್ಲಿ 32 ವರ್ಷ ಕೆಲಸ ನಿರ್ವಹಣೆ ಮಾಡಿದ್ದಾರೆ ಎಂದರೆ ಅದು ದೊಡ್ಡ ವಿಷಯ. ಅವರ ಮುಂದಿನ ಜೀವನಕ್ಕೆ ಶುಭಹಾರೈಕೆ ಎಂದರು.

ಸಮಾಜಸೇವೆಯ ಮನೆತನ: ಪರಮೇಶ್ವರ ಭಂಡಾರಿ:

ತಾ.ಪಂ. ಮಾಜಿ ಸದಸ್ಯ ಪರಮೇಶ್ವರ ಭಂಡಾರಿ ಮಾತನಾಡಿ, ಸೌಮ್ಯ ಸ್ವಭಾವದ ಪುಷ್ಪಾ ಕುಮಾರಿ ಅವರು, ಸಮಾಜ ಸೇವೆಯಲ್ಲೂ ಆಸಕ್ತಿ ಹೊಂದಿದ ಮನೆತನದ ಹಿನ್ನೆಲೆಯವರು ಎಂದರು.

ವಿನಯತೆ, ವಿವೇಕವೇ ಶಿಕ್ಷಣ: ಪುಷ್ಪಾ:

ಗ್ರಾ.ಪಂ. ಸದಸ್ಯೆ ಪುಷ್ಪಾ ಮಾತನಾಡಿ, ವಿನಯತೆ, ವಿವೇಕದಿಂದ ಪಡೆಯುವುದೇ ಶಿಕ್ಷಣ. ಪುಷ್ಪಾ ಕುಮಾರಿ ಅವರು ಇದನ್ನು ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಯೋಗ್ಯರಿಗೆ ಸನ್ಮಾನ, ದಾನ ನೀಡಬೇಕು ಎಂದು ಹಿರಿಯರು ತಿಳಿಸಿದ್ದಾರೆ. ಆದ್ದರಿಂದ ಪುಷ್ಪಾಕುಮಾರಿ ದಂಪತಿಗೆ ಸನ್ಮಾನ ಮಾಡಿರುವುದಕ್ಕೆ ನಾವು ಧನ್ಯರಾಗಿದ್ದೇವೆ ಎಂದರು.

ಸ್ಥಿತಪ್ರಜ್ಞೆಯೇ ಸಾಧನೆ: ನವೀನ್ ಕುಮಾರ್:

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ದಿನದ 24 ಗಂಟೆಯೂ ಒಂದೇ ರೀತಿಯಾಗಿ ಅಂದರೆ ಸ್ಥಿತಪ್ರಜ್ಞರಂತೆ ಬದುಕುವುದೇ ಸಾಧನೆ. ಎಲ್ಲರೂ ಕೂಡ ಈ ರೀತಿಯಾಗಿ ಬದುಕಲು ಸಾಧ್ಯ. ಅದು ಸಾಧ್ಯವಾಗಬೇಕಾದರೆ ಚಿಂತೆ, ಆಲೋಚನೆಯನ್ನು ಬಿಡಬೇಕು. ನಾವು ಕೆಲಸ ಮಾಡುವಾಗ ಮಾತ್ರ ಯೋಚನೆ ಮಾಡಬೇಕು. ಆಗ ಸಾಧನೆ ಮಾಡಬಹುದು ಎಂದರು.

ದಾಖಲೆ ನಿರ್ವಹಣೆ ಅಚ್ಚುಕಟ್ಟು: ತನುಜಾ:

ಬಿಐಇಆರ್‌ಟಿ ತನುಜಾ ಮಾತನಾಡಿ, ಪುಷ್ಪಾ ಕುಮಾರಿ ಅವರು ದಾಖಲೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಅಚ್ಚುಕಟ್ಟಾಗಿವೆ. ಯಾವುದೇ ಸಮಸ್ಯೆ ಎದುರಾದರೂ ಅದನ್ನು ಶಾಂತ ಸ್ವಭಾವದಿಂದ ಬಗೆಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಈ ಹೊತ್ತಿನಲ್ಲಿ ಅವರಲ್ಲಿ ಖಂಡಿತವಾಗಿಯೂ ಧನ್ಯತಾ ಭಾವ ಇರುತ್ತದೆ. ಉತ್ತಮ ಶಿಕ್ಷಕರು ಯಾವಾಗಲೂ ನಮ್ಮ ಮನಸ್ಸಿನಲ್ಲಿರುತ್ತಾರೆ ಎಂದರು.

ಕತ್ತಿಲಿನಿಂದ ಬೆಳಕಿನೆಡೆಗೊಯ್ದ ಗುರು: ಪರಮೇಶ್ವರಿ:

ನರಿಮೊಗರು ಸಿಆರ್‌ಪಿ ಪರಮೇಶ್ವರಿ ಮಾತನಾಡಿ, ಗು ಎಂದರೆ ಕತ್ತಲು, ರು ಎಂದರೆ ಬೆಳಕು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರು. ಪುಷ್ಪಾ ಕುಮಾರಿ ಅವರು ಈ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಭದ್ರತಾ ಭಾವನೆ: ಚರಣ್ ಕುಮಾರ್: 

ಶಿಕ್ಷಕ ಚರಣ್ ಕುಮಾರ್ ಮಾತನಾಡಿ, ಪುಷ್ಪಾ ಕುಮಾರಿ ಅವರು ಕೆಲಸ ನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ ಮಕ್ಕಳ ಪ್ರೀತಿ ಸಂಪಾದಿಸಿದ್ದಾರೆ. ಅವರು ಕೆಲಸ ಮಾಡುವಲ್ಲಿ ಮನೆಯ ವಾತಾವರಣ ನಿರ್ಮಾಣ ಆಗಿರುತ್ತದೆ. ಅವರು ಜೊತೆಗಿರುವಾಗ ತಾಯಿ ಜೊತೆಗಿದ್ದಂತಹ ಭದ್ರತಾ ಭಾವನೆ ಇರುತ್ತದೆ. ಸಮಯಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಅವರು, ನನ್ನ ನೆಚ್ಚಿನ ಶಿಕ್ಷಕಿ ಎಂದರು.

ತಾಳ್ಮೆಯ ಮೂರ್ತಿ: ಶುಭಲತಾ:

ಆನಡ್ಕ ಶಾಲಾ ಮುಖ್ಯಗುರು ಶುಭಲತಾ ಮಾತನಾಡಿ, ಆನಡ್ಕ ಶಾಲೆಯಲ್ಲಿ ಪುಷ್ಪಾ ಕುಮಾರಿ ಅವರು ನಿರ್ವಹಿಸಿದ ಕೆಲಸಗಳ ಹೆಜ್ಜೆಗುರುತು ಇಂದು ಕೂಡ ಇದೆ. ತಾಳ್ಮೆಯ ಸಾಕಾರ ರೂಪವಾದ ಪುಷ್ಪಾ ಕುಮಾರಿ ಅವರಿಂದ ಕಲಿತುಕೊಳ್ಳಬೇಕಾದ ವಿಷಯ ತುಂಬಾ ಇದೆ ಎಂದರು.

ನಿವೃತ್ತಗೊಂಡ ಮುಖ್ಯಶಿಕ್ಷಕಿ ಪುಷ್ಪಾಕುಮಾರಿ ಹಾಗೂ ಅವರ ಪತಿ ಮೋನಪ್ಪ ಪುರುಷ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸ್ಮರಣಿಕೆ, -ಲಪುಷ್ಪ ನೀಡಿ ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ತಾಹಿರಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತಿ ಉಪತಹಶೀಲ್ದಾರ್, ಪುಷ್ಪಾ ಕುಮಾರಿ ಅವರ ಪತಿ ಮೋನಪ್ಪ ಪುರುಷ, ಗ್ರಾ.ಪಂ. ಸದಸ್ಯರಾದ ಕೇಶವ, ಗಣೇಶ್ ಉಪಸ್ಥಿತರಿದ್ದರು. ಮುಕ್ವೆ ಶಾಲಾ ಎಸ್‌ಡಿಎಂಸಿ, ಶಿಕ್ಷಕರು, ಅಕ್ಷರದಾಸೋಹ ಸಿಬ್ಬಂದಿ, ಪೂರ್ವ ಪ್ರಾಥಮಿಕ ಶಾಲೆ ಹಾಗೂ ವಿದ್ಯಾರ್ಥಿಗಳ ಪರವಾಗಿ ಪುಷ್ಪಾ ಕುಮಾರಿ ಎನ್. ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ನರಿಮೊಗರು ಗ್ರಾ.ಪಂ.ನ ಮುಕ್ವೆ ವಾರ್ಡ್‌ನಿಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿಯರಾದ ವೇದಾವತಿ, ಕಾರ್ಮಲೆಸ್ ಅಂದ್ರಾದೆ, ಶಿಕ್ಷಕಿ ಜಯಶ್ರೀ ಹಾಗೂ ಅವರ ಪತಿ ರಮೇಶ್ ಅವರು ಅಭಿನಂದಿಸಿದರು. 7ನೇ ತರಗತಿಯ ಮುಫೀದಾ, 6ನೇ ತರಗತಿಯ ನಿಶಾಲ್, ೮ನೇ ತರಗತಿಯ ನಿಶ್ಮಿತಾ ಅನಿಸಿಕೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಸದಸ್ಯರಾದ ಸಖೀನಾ, ನಸೀಮಾ, ಕೃಷ್ಣಪ್ಪ ಪೂಜಾರಿ, ವಸಂತಿ, ಸದಾಶಿವ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಶಿಕ್ಷಕಿ ವಿಮಲಾ ಸನ್ಮಾನ ಪತ್ರ ವಾಚಿಸಿದರು. ಮುಕ್ವೆ ಶಾಲೆಯ ಮುಂದಿನ ಮುಖ್ಯಶಿಕ್ಷಕಿ ಕಾರ್ಮಲೆಸ್ ಅಂದ್ರಾದೆ ಸ್ವಾಗತಿಸಿ, ಪದವೀಧರೆ ಶಿಕ್ಷಕಿ ಜಯಶ್ರೀ ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮುಕ್ವೆ ಶಾಲಾ ಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.

ಒಗ್ಗಟ್ಟಿನಿಂದ ಕೆಲಸ ಯಶಸ್ಸು

ಶಿಶಿಲ ಎಂಬ ಪುಟ್ಟ ಗ್ರಾಮದಿಂದ ಪ್ರೌಢಶಾಲೆಗೆ ಹೋಗಬೇಕಾದರೆ 5 ಕಿಲೋ ಮೀಟರ್ ದೂರ ನಡೆದು ಹೋಗಬೇಕಾಗಿತ್ತು. ಅಂತಹ ಕಷ್ಟಕಾಲದಲ್ಲೂ ನನಗೆ ಹಾಗೂ ನನ್ನ ಅಕ್ಕನಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಕನಸು ಕಂಡವರು ನನ್ನ ತಂದೆ. ಪ್ರೌಢಶಿಕ್ಷಣದ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ತೆರಳಿದೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಮೊದಲ ನೇಮಕಾತಿ, ನಾನು ಓದಿದ ಶಾಲೆಯಲ್ಲೇ ದೊರೆಯಿತು. ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದ್ದು ಮುಕ್ವೆ ಶಾಲೆಯಲ್ಲಿ. ಇದಕ್ಕೆ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ಪರಮೇಶ್ವರ್ ಅವರು ನೀಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು ಒಗ್ಗಟ್ಟಾಗಿದ್ದರೆ ಏನನ್ನೂ ಸಾಧಿಸಲು ಸಾಧ್ಯ. ಯಾವುದೇ ಅಡೆ-ತಡೆಗಳನ್ನು ಮೀರಿ ನಿಲ್ಲಬಹುದು ಎನ್ನುವುದು ಇಲ್ಲಿ ಸಾಬೀತಾಗಿದೆ. ಆದರೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಹೇಳಿದ ಪುಷ್ಪಾ ಕುಮಾರಿ ಅವರು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here