ಜು.9: ರಾಮಕುಂಜದಲ್ಲಿ ’ವಿಜ್ಞಾನ ವನ’ ಉದ್ಘಾಟನೆ

0

ರಾಮಕುಂಜ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಖಿಂಚಾ & ಖಾರಿವಲ್ ಫ್ಯಾಮಿಲೀಸ್ ಕ್ಯಾಪ್ಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡ ವಿಜ್ಞಾನ ವನದ ಉದ್ಘಾಟನೆ ಜು.9ರಂದು ನಡೆಯಲಿದೆ ಎಂದು ಕ್ಯಾಪ್ಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ಹೇಳಿದರು.

ರಾಮಕುಂಜ ಪ್ರಥಮ ದರ್ಜೆ ಕಾಲೇಜಿನಲ್ಲಿ ಝೂಮ್ ಆಪ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೊರಂಗಣದಲ್ಲಿ ವೈಜ್ಞಾನಿಕವಾಗಿ ಪ್ರಯೋಗಗಳ ಅಪರೂಪದ ಯೋಜನೆಯಾಗಿದೆ. ಈಗಾಗಲೇ ದ.ಕ.ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ.ಪೂ.ಕಾಲೇಜು, ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ಸೈನ್ಸ್ ಪಾರ್ಕ್ ನಿರ್ಮಾಣಗೊಳಿಸಲಾಗಿದೆ. ಪ್ರತಿಯೊಂದು ಸೈನ್ಸ್ ಪಾರ್ಕ್‌ಗಳಿಗೂ ತಲಾ 25 ಲಕ್ಷ ರೂ.,ಮೌಲ್ಯದ ವೈಜ್ಞಾನಿಕ ಪ್ರಯೋಗಗಳನ್ನು ನೀಡಲಾಗಿದೆ. ಇಲ್ಲಿಗೆ ಸಮೀಪದ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು. 2008ರ ಮೇ 14ರಂದು ಸ್ಥಾಪನೆಗೊಂಡ ಕ್ಯಾಪ್ಸ್ ಫೌಂಡೇಶನ್ ಶಿಕ್ಷಣ ಹಾಗೂ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಲಾಂ ಫಾರ್ ಕಲಾಂ ಎಂಬ ಹೆಸರಿನ ಯೋಜನೆಯ ಮೂಲಕ ಮೈಸೂರಿನಲ್ಲಿ 1 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ವಿವಿಧ ಸಲಕರಣೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಜ್ಞಾನವನವನ್ನು ಅಂತರಾಷ್ಟ್ರೀಯ ಖ್ಯಾತಿಯ ತೆರಿಗೆ ತಜ್ಞ ಸಿಎ ಪದಮ್ ಚಂದ್ ಖಿಂಚಾ ಉದ್ಘಾಟಿಸಲಿದ್ದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಟೀಲು ಪ.ಪೂ.ಕಾಲೇಜಿನ ವಿಶ್ರಾಂತ ಉಪನ್ಯಾಸಕ ಅತ್ತಾವರ ನಿರೇಂದ್ರ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್, ಅಮೃತ ಭಾರತ ವಿಜ್ಞಾನ ವನ ಉಸ್ತುವಾರಿ ಸುಮಂತ್ ಚಂಬು ರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಿಜ್ಞಾನ ವನ ಉಸ್ತುವಾರಿಗಳಾದ ಅಮನ್ ಶೆಟ್ಟಿ, ನಾಗದತ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here