ತಣ್ಣೀರುಪಂಥ ಪಂಚಾಯಿತಿ ಸಂತೆ ಮಾರುಕಟ್ಟೆ ಜಮೀನು ಒತ್ತುವರಿ ಆರೋಪ : ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲು

0
  • ಬಿ. ನಿರಂಜನ್ ಕುಮಾರ್ ವಿರುದ್ಧ ಕೆ.ಎಸ್. ಅಬ್ದುಲ್ಲ ದೂರು.
  • ಕರಾಯ ಗ್ರಾಮದ ಸ.ನಂ. 12/3ಡಿ3ನಲ್ಲಿ 0.48 ಎಕ್ರೆ ಜಾಗ.
  • ತಣ್ಣೀರುಪಂಥ ಗ್ರಾಮ ಪಂಚಾಯಿತಿ ಸಂತೆ ಮಾರುಕಟ್ಟೆಗೆ ಕಾಯ್ದಿರಿಸಿದ ಜಮೀನು.

ಉಪ್ಪಿನಂಗಡಿ: ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ತಣ್ಣೀರುಪಂಥ ಗ್ರಾಮ ಪಂಚಾಯಿತಿಗೆ ಸೇರಿದ ಸಂತೆ ಮಾರುಕಟ್ಟೆ ನಿರ್ಮಾಣ ಸಲುವಾಗಿ ಮೀಸಲು ಇರಿಸಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ದೂರಿನ ಮೇರೆಗೆ ಕಲ್ಲೇರಿ ನಿವಾಸಿ ಬಿ. ನಿರಂಜನ ಕುಮಾರ್ ಎಂಬವರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಕರಾಯ ಗ್ರಾಮದ ಶಾಲಾ ಬಳಿ ನಿವಾಸಿ ಕೆ.ಎಸ್. ಅಬ್ದುಲ್ಲ ಎಂಬವರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದು ಕರಾಯ ಗ್ರಾಮದ ಸ.ನಂ. 12/3ಡಿ2ರಲ್ಲಿ 0.48 ಎಕ್ರೆ ತಣ್ಣೀರುಪಂಥ ಗ್ರಾಮ ಪಂಚಾಯಿತಿ ಜಾಗವನ್ನು ತಣ್ಣೀರುಪಂಥ ಗ್ರಾಮದ ಬಸ್ತಿ ಬಳಿ ಮನೆ ಬಿ. ನಿರಂಜನ ಕುಮಾರ್ ಬಾವಂತಬೆಟ್ಟು ಎಂಬವರು ಒತ್ತುವರಿ ಮಾಡಿಕೊಂಡಿದ್ದು, ಸದ್ರಿಯವರು ಈ ಜಾಗದಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಈ ಜಾಗವನ್ನು ಸರ್ವೆ ಇಲಾಖೆಯಿಂದ ಅಳತೆ ಮಾಡಲಾಗಿ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 12 ಸಾವಿರ ರೂಪಾಯಿ ಖರ್ಚು ವೆಚ್ಚ ಮಾಡಲಾಗಿ ಬೇಲಿ ಹಾಕಿಕೊಂಡಿತ್ತು. ಇದೀಗ ಆರೋಪಿತರು ಬೇಲಿಯನ್ನು ಕಿತ್ತು ತೆಗೆದು ಹೊಸ ವಾಣಿಜ್ಯ ಕಟ್ಟಡ ಕಟ್ಟಲು ಪ್ರಾರಂಭಿಸಿದ್ದಾರೆ ಪ್ರತಿವಾದಿ ಆಕ್ರಮಣ ಮಾಡಿರುವ ಪಂಚಾಯಿತಿ ಮಾರುಕಟ್ಟೆಯ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾನೂನು ಕ್ರಮ ಜರಗಿಸುವಂತೆ ಕೋರಿದ್ದಾರೆ.

ಜಾಗ ಪಂಚಾಯಿತಿಗೆ ಸೇರಿದ್ದು, ತೆರವಿಗೆ ಗಡಿಗುರುತು ಸಮಸ್ಯೆ ಇದೆ-ಪಿಡಿಒ

ಪಹಣಿ ಪತ್ರದಲ್ಲಿ ಇರುವಂತೆ ಕರಾಯ ಗ್ರಾಮದ ಸ.ನಂ. 12/3ಡಿ2ರಲ್ಲಿ 0.48 ಎಕ್ರೆ ಜಾಗ ತಣ್ಣೀರುಪಂಥ ಗ್ರಾಮ ಪಂಚಾಯಿತಿಯ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲು ಇರಿಸಿರುವ ಜಾಗ ಆಗಿರುತ್ತದೆ. ಆದರೆ ಇದೇ ಜಾಗಕ್ಕೆ ತಾಗಿಕೊಂಡಿರುವ ಜಾಗದ ಬಗ್ಗೆ ತಗಾದೆ ಇದ್ದು, ಗಡಿ ಗುರುತು ಆಗಿರುವುದಿಲ್ಲ. ಈಗಾಗಲೇ ಗಡಿ ಗುರುತು ಮಾಡಿಕೊಡುವಂತೆ 2 ಬಾರಿ ಬೆಳ್ತಂಗಡಿ ತಹಸೀಲ್ದಾರ್ ಅವರಿಗೆ ಕೇಳಿಕೊಳ್ಳಲಾಗಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಹೀಗಾಗಿ ಅಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ತೆರವು ಮಾಡುವುದಕ್ಕೆ ಕಾನೂನಾತ್ಮಕ ತೊಡಕು ಇದೆ.

-ಪುಟ್ಟಸ್ವಾಮಿ, ಪಿಡಿಒ. ತಣ್ಣೀರುಪಂಥ ಗ್ರಾಮ ಪಂಚಾಯಿತಿ.

LEAVE A REPLY

Please enter your comment!
Please enter your name here