ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

0

ವರ್ಷದೊಳಗೆ ಹೊಸ ಕಟ್ಟಡದ ಭರವಸೆ – ಸುಂದರ ಪೂಜಾರಿ ಬಡಾವು : ರೂ. 7.29 ಲಕ್ಷ ಲಾಭ – ಶೇ. 20 ಡಿವಿಡೆಂಟ್

ಪುತ್ತೂರು: ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಂಘ 17 ವರ್ಷಗಳ ಹಿರಿಯ ಸಂಘವಾಗಿದ್ದು, ಸತತ ಲಾಭದಲ್ಲೇ ಯಶಸ್ವಿ ಕಂಡಿದೆ. ಇಂತಹ ಸಂದರ್ಭದಲ್ಲಿ ಸಂಘವು ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷದೊಳಗೆ ಹೊಸ ಕಟ್ಟಡ ಮಾಡುವ ಗುರಿ ಇಟ್ಟು ಕೊಂಡಿದ್ದೇವೆ ಎಂದು ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಹೇಳಿದರು.
ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆಯು ಆ.24ರಂದು ಸಂಘದ ಬಳಿಯಿರುವ ಆಶೀರ್ವಾದ ಕಾಂಪ್ಲೆಕ್ಸ್ನ ಮೇಲಂತಸ್ತಿನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘವು ವರದಿ ಸಾಲಿನಲ್ಲಿ ಒಟ್ಟು 2,75,367 ಲೀಟರ್ ಹಾಲು ಖರೀದಿಸಿದೆ. ಅದೇ ರೀತಿ ಸಂಘದ ಸದಸ್ಯರ ದನಗಳಿಗೆ ಇನ್ಸೂರೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಸಂಘವು ಉತ್ತಮ ವ್ಯವಹಾರದಿಂದಾಗಿ 2021-22ನೇ ಸಾಲಿಗೆ ರೂ. 7,29,827.20 ಲಾಭಾಂಶ ಗಳಿಸಿದೆ. ಲಾಭಾಂಶವನ್ನು ವಿಂಗಡಣೆ ಮಾಡಿಕೊಂಡಿದ್ದು, ಶೇ.20 ಸದಸ್ಯರಿಗೆ ಡಿವಿಡೆಂಟ್ ನೀಡುವುದಾಗಿ ಘೋಷಣೆ ಮಾಡಿದರು.
ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಅನುದಾನ ಬಳಸಿ:
ಕೆಎಮ್‌ಎಫ್ ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ ಇತ್ತೀಚೆಗಷ್ಟೆ ಆರಂಭಗೊಳ್ಳುತ್ತಿರುವ ಸಂಘಗಳು ಹೊಸ ಹೊಸ ಕಟ್ಟಡಗಳನ್ನು ಕಟ್ಟಿರುವಾಗ 17 ವರ್ಷಗಳ ಒಂದು ಸಂಘ ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ದೊಡ್ಡ ಸಂಗತಿಯೇ ಅಲ್ಲ. ಕಟ್ಟಡಕ್ಕಾಗಿ ಕ್ಷೇಮ ನಿಧಿಯಿಂದ ಶೇ.80, ದಾನಧರ್ಮ, ಸವಕಳಿಯಿಂದಲೂ ಅನುದಾನ ಪಡೆಯಬಹುದು. ಅದೇ ರೀತಿ ಕೆ.ಎಂ.ಎಫ್‌ನಿಂದ ರೂ. 4 ಲಕ್ಷ, ಒಕ್ಕೂಟದಿಂದ ಬಡ್ಡಿರಹಿತ ರೂ. 2ಲಕ್ಷ ಸಾಲ, ಧರ್ಮಸ್ಥಳದಿಂದ ರೂ. 2ಲಕ್ಷ ಹೀಗೆ ಲಭ್ಯವಿರುವ ಅನುದಾನದ ಕುರಿತು ಮಾಹಿತಿ ನೀಡಿದ ಅವರು ದನಗಳ ಸುರಕ್ಷತೆ ಮತ್ತು ಹಾಲಿನ ಗುಣಮಟ್ಟ ಕಾಯ್ದು ಕೊಳ್ಳುವ ಕುರಿತು ಮಾಹಿತಿ ನೀಡಿದರು.
ಪ್ರೋತ್ಸಾಹ ಬಹುಮಾನ:
ಸಂಘಕ್ಕೆ ಅಧಿಕ ಹಾಲು ವಿತರಣೆ ಮಾಡುತ್ತಿರುವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಬಹುಮಾನ ವಿತರಣೆ ಮಾಡಲಾಯಿತು. ಅಧಿಕ ಹಾಲು ವಿತರಣೆಯಲ್ಲಿ ಸಂಘದ ನಿರ್ದೇಶಕ ಮೋನಪ್ಪ ಬೀರಿಗ(ಪ್ರ), ಸದಸ್ಯ ಸುದರ್ಶನ್ ಬಿ ಮತ್ತು ಸಂಘದ ಉಪಾಧ್ಯಕ್ಷ ಸುರೇಶ್(ದ್ವಿ) ಸ್ಥಾನ ಪಡೆದಿದಿದ್ದು, ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಲ್ಲಿ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಅನುಜ್ಞಾ ಡಿ ಪೂಜಾರಿ ಬಡಾವು, ಭವಿಷ್ಯ ಕೆ, ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಸೌಜನ್ಯ, ಕಿಶನ್ ಹೆಚ್ ಮತ್ತು ಪದವಿಯಲ್ಲಿ ಅಧಿಕ ಅಂಕ ಪಡೆದ ರಕ್ಷಿತಾ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ರಾಜೇಶ್ ಗೌಡ ಜಿ, ಶಶಿಧರ ಗೌಡ ಕುಂಟ್ಯಾನ, ಗಂಗಾಧರ ಗೌಡ, ಮೋನಪ್ಪ ಗೌಡ ಬೀರಿಗ, ನಾಗೇಶ್ ಮೂಲ್ಯ, ರಘುನಾಥ ರೈ, ಶ್ರೀಧರ್ ಪೂಜಾರಿ ಬಡಾವು, ಮುದರು, ಜಾನಕಿ, ನಿರ್ಮಲ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅನುರಾಧಾ ವರದಿ ವಾಚಿಸಿದರು. ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ರಾಜಶೇಖರ್ ಜೈನ್, ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ದಿನೇಶ್ ಸಾಲಿಯಾನ್, ನಗರಸಭೆ ಮಾಜಿ ಸದಸ್ಯೆ ಜಯಲಕ್ಷ್ಮೀ ಸುರೇಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here