ಸಮಸ್ಯೆಗಳನ್ನು ಭಿನ್ನದೃಷ್ಟಿಯಿಂದ ಗುರುತಿಸಿ, ಬಗೆಹರಿಸಬೇಕು: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಜೀವನದಲ್ಲಿ ಸಮಸ್ಯೆಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಬೇಕಾಗುತ್ತದೆ. ಪ್ರತಿಯೊಂದು ಸಮಸ್ಯೆಗೂ ಉತ್ತರವೆಂಬುದು ಇದ್ದೇ ಇರುತ್ತದೆ. ನಿರಂತರ ಶ್ರಮ, ಛಲದಿಂದ ಪರಿಹಾರ ಸಿದ್ಧಿಸುತ್ತದೆ. ಹೀಗೆ ತಪಸ್ಸು ಮಾಡಿದರೆ ಮಾತ್ರ ಬದುಕಿನಲ್ಲಿ ಗುರಿಯನ್ನು ಸೇರಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ದೇಶವನ್ನು ಸ್ವಾಭಿಮಾನದಿಂದ ರಕ್ಷಿಸಬೇಕು. ತನ್ನ ದೇಶದ ಬಗೆಗೆ ಪ್ರೇಮದ ಛಾಪನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಾಬೀತುಪಡಿಸಬೇಕು. ತಮ್ಮ ಆತ್ಮ, ಜ್ಞಾನ ಹಾಗೂ ಸಕಲವನ್ನೂ ದೇಶಕ್ಕಾಗಿ ಮುಡಿಪಾಗಿಡಬೇಕು. ಇಂತಹ ಕೆಚ್ಚನ್ನು ಹೊಂದಿರುವ ರಾಷ್ಟ್ರಭಕ್ತರನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ಕಲಿಕೆಗೆ ಕೊನೆ ಎಂಬುದಿಲ್ಲ. ಜೀವನ ಎಂಬುದೇ ನಿರಂತರ ಕಲಿಕೆ. ತರಗತಿ ಕೊಠಡಿಯೊಳಗೆ ಎಲ್ಲವನ್ನು ಕಲಿಯಲು ಅಸಾಧ್ಯ. ಹಲವಾರು ಪಾಠಗಳು ಅನುಭವಗಳ ಮೂಲಕವೇ ದೊರಕುವುದು. ಆದ್ದರಿಂದ ಅನುಭವಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಜೀವನವನ್ನು ಮುಡಿಪಾಗಿಡಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಪಠ್ಯವಿಷಯಗಳ ನೆಲೆಯಲ್ಲಿ ಒಂದು ಸಂಸ್ಥೆ ಮತ್ತೊಂದು ಸಂಸ್ಥೆಗಿಂತ ಭಿನ್ನ ಎನಿಸಿಕೊಳ್ಳುವುದಿಲ್ಲ. ಆದರೆ ಸಂಸ್ಥೆಯ ಆಶಯ, ದ್ಯೇಯೋದ್ಧೇಶಗಳ ನೆಲೆಯಲ್ಲಿ ವಿಭಿನ್ನತೆಯನ್ನು ಗುರುತಿಸಬಹುದು. ಆದ್ದರಿಂದ ಸಂಸ್ಥೆಯೊಂದರ ಉದ್ದೇಶಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಎಂತಹ ಪರಿಣಾಮಗಳನ್ನು ಮಾಡಿವೆ ಎಂಬುದು ಮುಖ್ಯ ಹಾಗೂ ಸಂಸ್ಥೆ ಆ ಕಾರ್ಯದಲ್ಲಿ ಯಶಸ್ವಿಯಾದರೆ ಉತ್ಕೃಷ್ಟ ವಿದ್ಯಾರ್ಥಿಗಳು ಸಮಾಜಕ್ಕೆ ದೊರಕುವುದಕ್ಕೆ ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಮಹಾವಿದ್ಯಾಲಯದ ನಿಕಟಪೂರ್ವ ಪ್ರಾಚಾರ್ಯ ಡಾ. ವಿನಾಯಕ ಭಟ್ಟ ಗಾಳಿಮನೆ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಅಂಕಿತಾ ಹಾಗೂ ಮಹಿಮಾ ಪ್ರಾರ್ಥಿಸಿ, ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಸ್ವಾಗತಿಸಿ, ವಿದ್ಯಾರ್ಥಿ ಶಶಾಂಕ್ ವಂದಿಸಿದರು. ವಿದ್ಯಾರ್ಥಿ ಅನ್ಮಯ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನಿಂದ ಹೊರ ಜಗತ್ತಿಗೆ ಅಡಿಯಿಡುತ್ತಿರುವ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವನ್ನಿಟ್ಟು ಶುಭಹಾರೈಸಿ, ಬೀಲ್ಕೊಡಲಾಯಿತು.