ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ

0
  • ಕಾಡಬಾಗಿಲು-ಬಾವಾ ರಸ್ತೆ ಅಭಿವೃದ್ಧಿಗೆ ಗ್ರಾ.ಪಂ.ನಿಂದ ಅನುದಾನ ಇಡಲು ಒಮ್ಮತದ ನಿರ್ಧಾರ
  • ಸ್ವಾತಂತ್ರ್ಯದ ದಿನದಂದು ಗ್ರಾ.ಪಂ.ನಿಂದ ಅಖಂಡ ಭಾರತಕ್ಕೆ ಪುಷ್ಪಾರ್ಚನೆ-ಆರೋಪ

ಪುತ್ತೂರು: ಅನೇಕ ವರ್ಷಗಳಿಂದ ವಿವಾದ, ಚರ್ಚೆಯಲ್ಲಿರುವ ಸರ್ವೆ ಗ್ರಾಮದ ಕಾಡಬಾಗಿಲು-ಬಾವಾ ರಸ್ತೆಗೆ ಗ್ರಾ.ಪಂ.ನಿಂದ ಅನುದಾನ ಇಟ್ಟು ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ ಸುಧೀರ್ಘ ಚರ್ಚೆ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಭೆ ಆ.25ರಂದು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ಕಾಡಬಾಗಿಲು-ಬಾವಾ ರಸ್ತೆ ಬಹುಕಾಲದ ಬೇಡಿಕೆ ಇರುವ ರಸ್ತೆಯಾಗಿದ್ದು ಅದನ್ನು ಗ್ರಾ.ಪಂ.ನಿಂದ ಅಭಿವೃದ್ಧಿಪಡಿಸುವುದು ಉತ್ತಮ ಎಂದು ಹೇಳಿದರು.

ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಯಾರಿಗೆ ಮನವಿ ಮಾಡಿಯೂ ಆ ರಸ್ತೆ ಅಭಿವೃದ್ಧಿಯಾಗಿಲ್ಲ. ಗ್ರಾ.ಪಂ ಅಥವಾ ಶಾಸಕರು ಇಲ್ಲವೇ ಬೇರೆ ಅನುದಾನ ಇಟ್ಟಾದರೂ ಆ ರಸ್ತೆ ಅಭಿವೃದ್ಧಿ ಆಗಲೇಬೇಕು. ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷ ಕಳೆದರೂ ಆ ಭಾಗದ ಜನರಿಗೆ ರಸ್ತೆಯಿಲ್ಲ ಎಂದರೆ ನಾಚಿಕೆಯ ವಿಷಯ. ಹಾಗಾಗಿ ಇವತ್ತಿನ ಸಭೆಯಲ್ಲೊಂದು ಅದಕ್ಕೊಂದು ಸ್ಪಷ್ಟ ತೀರ್ಮಾನ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾನು ಗ್ರಾ.ಪಂ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಹೇಳಿದರು.

ಪಿಡಿಓ ಗೀತಾ ಬಿ.ಎಸ್ ಮಾತನಾಡಿ ಎ.ಸಿ ಅವರು ಆ ರಸ್ತೆ ಫಲಾನುಭವಿಗಳ ಎರಡೂ ಪಾರ್ಟಿಯನ್ನು ಕರೆಸಿ ಮಾತನಾಡಿರಬೇಕು ಎಂದು ಹೇಳಿದರು.
ಅಶೊಕ್ ಕುಮಾರ್ ಪುತ್ತಿಲ ಮಾತನಾಡಿ ಎ.ಸಿ.ಯವರ ಬಳಿ ದೂರು ಇದ್ದರೂ ಏನೂ ಆಗಿಲ್ಲ ಎಂದರು. ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ನಾವು ಇನ್ನೊಮ್ಮೆ ಎ.ಸಿ.ಯವರಲ್ಲಿ ಮಾತನಾಡೋಣ ಎಂದು ಹೇಳಿದರು. ಗ್ರಾ.ಪಂನಿಂದ ಯಾವುದಾದರೊಂದು ಅನುದಾನವನ್ನು ಅಲ್ಲಿಗೆ ಇಟ್ಟು ರಸ್ತೆ ಅಭಿವೃದ್ಧಿ ಮಾಡುವ ಎಂದು ಅನೇಕ ಸದಸ್ಯರು ಹೇಳಿದರು.
ಸದಸ್ಯ ಬಾಲಕೃಷ್ಣ ಕುರೆಮಜಲು ಮಾತನಾಡಿ ನಮ್ಮ ಗ್ರಾ.ಪಂ ಎದುರು ನಾವೇ ಪ್ರತಿಭಟನೆ ಮಾಡುವುದು ಸರಿಯಾಗುವುದಿಲ್ಲ ಎಂದು ಹೇಳಿದರು. ಪಿಡಿಓ ಗೀತಾ ಬಿ.ಎಸ್ ಮಾತನಾಡಿ ಎಸ್‌ಸಿಎಸ್‌ಟಿ ಶೇ.25ರ ಅನುದಾದನಲ್ಲಿ ರೂ.3 ಲಕ್ಷವನ್ನು ಒಂದೇ ಕಡೆಗೆ ಇಟ್ಟು ರಸ್ತೆ ಅಭಿವೃದ್ಧಿ ಮಾಡುವ ಎಂದು ಹೇಳಿದರು. ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮಾತನಾಡಿ ಹಲವು ವರ್ಷಗಳಿಂದ ಇರುವ ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು ಎಂದು ಹೇಳಿದರು. ಸದಸ್ಯ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ ಅಲ್ಲಿನ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ. ಪಂಚಾಯತ್ ಯಾಕೆ ಇರುವುದು ಎಂದು ಜನರು ನಮ್ಮನ್ನು ಪ್ರಶ್ನೆ ಮಾಡುವಂತಾಗಿದೆ ಎಂದು ಹೇಳಿದರು. ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ಮೂರು ಲಕ್ಷ ರೂ ಅನುದಾನವನ್ನು ಒಂದೇ ಕಡೆ ಇಟ್ಟರೆ ಇತರ ವಾರ್ಡ್‌ಗಳಲ್ಲಿಯೂ ಸಮಸ್ಯೆ ಇದೆಯಲ್ವಾ ಅದಕ್ಕೆ ಏನು ಮಾಡುವುದು ಎಂದು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ಗ್ರಾ.ಪಂನಿಂದ ರೂ.3ಲಕ್ಷ ಅನುದಾನ ಇಟ್ಟು ಕಾಡಬಾಗಿಲು-ಬಾವಾ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಎಲ್ಲ ಸದಸ್ಯರ ಒಪ್ಪಿಗೆ ಇದೆ, ಬಾಬು ಅವರೂ ದೊಡ್ಡ ಮನಸ್ಸು ಮಾಡಿ ಒಪ್ಪಿಕೊಳ್ಳಿ, ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು. ಸದಸ್ಯ ಉಮೇಶ್ ಗೌಡ ಅಂಬಟ ಮಾತನಾಡಿ ಬಾವಾ ರಸ್ತೆಗೆ ಅನುದಾನ ಇಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಬೇರೆ ವಾರ್ಡ್‌ಗಳಿಗೆ ಬೇಕಾದ ಸಂದರ್ಭದಲ್ಲಿ ಇತರ ವಾರ್ಡ್‌ನ ಸದಸ್ಯರು ಆಕ್ಷೇಪ ಮಾಡದೆ ಸಹಕರಿಸಬೇಕು ಎಂದು ಹೇಳಿದರು.

ನಂತರ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮುಂದುವರಿಯಿತು.

ಪಿಡಿಓ ಗೀತಾ ಬಿ.ಎಸ್ ಮಾತನಾಡಿ ಎಸ್.ಸಿಎಸ್.ಟಿ ಶೇ.25 ಅನುದಾನದಲ್ಲಿ ಇಡುವುದು ಬೇಡ. ಬೇರೆ ಕ್ರಿಯಾ ಯೋಜನೆ ಮಾಡಿ ಅನುದಾನ ಇಡುವ ಎಂದು ಹೇಳಿದರು.
ಮುಂದಿನ ಗ್ರಾಮ ಸಭೆಯ ಮೊದಲು ಇದನ್ನು ಮಾಡುವುದು ಉತ್ತಮ ಎಂದು ಪ್ರವೀಣ್ ನಾಯ್ಕ ಹಾಗೂ ಬಾಲಕೃಷ್ಣ ಕುರೆಮಜಲು ಹೇಳಿದರು.

ಅಖಂಡ ಭಾರತಕ್ಕೆ ಪುಷ್ಪಾರ್ಚನೆ-ಆರೋಪ

ಗ್ರಾ.ಪಂ.ನಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ್ದು ಭೂಪಟ ಸರಿಯಿರಲಿಲ್ಲ, ರಾಷ್ಟ್ರಧ್ವಜ ಇರಲಿಲ್ಲ. ಮತ್ತು ಪಾಕಿಸ್ತಾನಕ್ಕೆ ಪುಷ್ಪಾರ್ಚನೆ ಮಾಡಿದ ಹಾಗಿದೆ. ಮಾತ್ರವಲ್ಲದೇ ಆ ಭೂಪಟದಲ್ಲಿ ಅಘ್ಘಾನಿಸ್ತಾನ, ಶ್ರೀಲಂಕಾವೂ ಇದೆ. ಹೊರಗಡೆ ಸಂಘಟನೆಗಳು ಆ ರೀತಿ ಮಾಡಿದರೆ ನಾನು ಮಾತನಾಡುತ್ತಿರಲಿಲ್ಲ. ಗ್ರಾ.ಪಂ.ನಲ್ಲಿ ಆಗುವ ಕಾರ್ಯಕ್ರಮ ಸರಕಾರಿ ಲೆವೆಲಲ್ಲಿ ಆಗುವಾಗ ಸ್ವತಂತ್ರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಬೇಕಿತ್ತೇ ವಿನಃ ಅಖಂಡ ಭಾರತಕ್ಕಲ್ಲ ಎಂದು ಸದಸ್ಯ ಕಮಲೇಶ್ ಎಸ್.ವಿ ಹೇಳಿದರು. ಅದಕ್ಕಾಗಿ ನಾನು ಕಾರ್ಯಕ್ರಮಕ್ಕೇ ಬಂದಿಲ್ಲ. ಗ್ರಾ.ಪಂನಿಂದ ಆ ರೀತಿಯಾಗಬಾರದು ಎಂದು ಅವರು ಹೇಳಿದರು.

ಬಾಬು ಕಲ್ಲಗುಡ್ಡೆ ಮಾತನಾಡಿ ಆ ದಿನ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವ ಚಿತ್ರವನ್ನೂ ಇಟ್ಟಿಲ್ಲ ಯಾಕೆ ಎಂದು ಕೇಳಿದರು. ಪಿಡಿಓ ಗೀತಾ ಬಿ.ಎಸ್ ಉತ್ತರಿಸಿ ನಾವು ಬೇರೆ ಉದ್ದೇಶದಿಂದ ಮಾಡಿದ್ದಲ್ಲ, ಭಾರತ ಮಾತೆಗೆಂದು ಪುಷ್ಪಾರ್ಚನೆ ಮಾಡಿದ್ದೇವೆ. ಗಾಂಧೀಜಿ ಭಾವಚಿತ್ರಕ್ಕೆ ಗಾಂಧಿ ಜಯಂತಿಯಂದು ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಅಂಬೇಡ್ಕರ್ ಜಯಂತಿಯಂದು ಮಾಲಾರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು. ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಜೃಂಭಣೆಯಿಂದ ಆಗಲಿ ಎನ್ನುವ ಕಾರಣಕ್ಕೆ ಗ್ರಾ.ಪಂ ಸದಸ್ಯರ, ಅಧಿಕಾರಿಯವರ, ಸಿಬ್ಬಂದಿಗಳ ಪರಿಶ್ರಮದಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ದಿನ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ್ದೇವೆಯೇ ವಿನಃ ಇನ್ಯಾವುದೂ ಮಾಡಿಲ್ಲ. ನಮ್ಮ ಉದ್ದೇಶ ಹಬ್ಬದ ರೀತಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಆಗಬೇಕೆಂಬುವುದಾಗಿತ್ತೇ ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದರು.

ಕಮಲೇಶ್ ಎಸ್.ವಿ ಮಾತನಾಡಿ ನಾನು ಚರ್ಚೆ ಮಾಡಲು ಈ ವಿಷಯ ಹೇಳಿಲ್ಲ. ವಿಮರ್ಶೆಗೆ ಹೇಳಿದೆ. ಭೂಪಟಕ್ಕೆ ತನ್ನದೇ ಆದ ನಿಯಮ ಇದೆ. ಒಟ್ಟಾರೆ ಮಾಡಿದರೆ ಆಕ್ಟ್ ಪ್ರಕಾರ ಅಪರಾಧ ಆಗುತ್ತದೆ ಎಂದರು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಗಬೇಕೆಂದು ಕರೆ ನೀಡಿದ್ದ ಮತ್ತು ಕಾರ್ಯಕ್ರಮದ ಪ್ರಚಾರ ಮಾಡಿದ ‘ಸುದ್ದಿ’ಗೆ ಸದಸ್ಯರಾದ ಕರುಣಾಕರ ಗೌಡ ಎಲಿಯ ಹಾಗೂ ಅಶೋಕ್ ಕುಮಾರ್ ಪುತ್ತಿಲ ಅಭಿನಂದನೆ ಸಲ್ಲಿಸಿದರು.

ನಿವೇಶನ ಹಂಚಿಕೆ ಏನಾಗಿದೆ…?
ಸರ್ವೆ ಗ್ರಾಮದಲ್ಲಿ ನಿವೇಶನ ಹಂಚಿಕೆ ಏನಾಗಿದೆ ಎಂದು ಸದಸ್ಯೆ ರಸಿಕಾ ರೈ ಮೇಗಿನಗುತ್ತು ಕೇಳಿದರು. ಅನೇಕ ಸಮಯ ಕಳೆದಿದೆ. ಜನರು ಈ ಬಗ್ಗೆ ನಮ್ಮಲ್ಲಿ ಕೇಳ್ತಿದ್ದಾರೆ ಎಂದರು. ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಧ್ವನಿಗೂಡಿಸಿದರು.

ಗ್ರಾಮ ವಾಸ್ತವ್ಯದ ಬಗ್ಗೆ ಅಸಮಾಧಾನ:
ಕಳೆದ ಬಾರಿ ಮುಂಡೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ನಡೆದಂತಾಗಿದೆ. ಅಲ್ಲಿ ಸಲ್ಲಿಕೆಯಾದ ಮನವಿ, ಬೇಡಿಕೆಗಳು ಅನುಷ್ಠಾನ ಆಗಿಲ್ಲ. ಜನರು ನಮ್ಮನ್ನು ಬೈಯಲು ಪ್ರಾರಂಭಿಸಿದ್ದಾರೆ ಎಂದು ಅಶೊಕ್ ಕುಮಾರ್ ಪುತ್ತಿಲ ಅಸಮಾಧಾನ ವ್ಯಕ್ತಪಡಿಸಿದರು. ಕಾಟಾಚಾರಕ್ಕೆ ಮಾಡುವ ಗ್ರಾಮ ವಾಸ್ತವ್ಯದ ಅಗತ್ಯವೇ ಇಲ್ಲ ಕರುಣಾಕರ ಗೌಡ ಎಲಿಯ ಹೇಳಿದರು.

ಕಮಲೇಶ್ ಎಸ್.ವಿ ಅವರೂ ಗ್ರಾಮ ವಾಸ್ತವ್ಯದ ಬಳಿಕದ ಬೆಳವಣಿಗೆ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದರು.

ಅಪಾಯಕಾರಿ ಮರ ತೆರವುಗೊಳಿಸಬೇಕು:

ಗ್ರಾಮದಲ್ಲಿ ಅಪಾಯಕಾರಿ ಮರಗಳಿದ್ದು ಅದನ್ನು ತೆರವುಗೊಳಿಸುವ ಕಾರ್ಯ ಆಗಬೇಕು. ಅಂತಹ ಮರಗಳನ್ನು ಕಡಿಯಲು ಹೇಳಿದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಸದಸ್ಯ ಮಹಮ್ಮದ್ ಆಲಿ ನೇರೋಳ್ತಡ್ಕ ಹೇಳಿದರು.

ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಎಸ್, ಸದಸ್ಯರಾದ ದುಗ್ಗಪ್ಪ ಕಡ್ಯ, ಅರುಣಾ ಎ.ಕೆ, ಯಶೊಧ ಅಜಲಾಡಿ, ಕಮಲ ನೇರೋಳ್ತಡ್ಕ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಸಿಬ್ಬಂದಿ ಕೊರಗಪ್ಪ ನಾಯ್ಕ ಅರ್ಜಿಗಳನ್ನು ವಾಚಿಸಿದರು. ಸಿಬ್ಬಂದಿಗಳಾದ ದೇವಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಮೋಕ್ಷಾ ಸಹಕರಿಸಿದರು.

LEAVE A REPLY

Please enter your comment!
Please enter your name here