ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದ ರಂಜಿತ್ ಕುಮಾರ್ ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ಪೊಕ್ಸೋ) ಎಫ್.ಟಿ.ಎಸ್.ಸಿ-೧ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.
ಮೂಡಬಿದ್ರೆ ತಾಲೂಕು ಬೆಳುವಾಯಿ ಗ್ರಾಮದ ಕರಿಯನಂಗಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಂಜಿತ್ ಕುಮಾರ್ ಎಂಬಾತ ನೊಂದ ಬಾಲಕಿಯ ತಾಯಿಯ ಎರಡನೇ ಪತಿಯಾಗಿದ್ದು ದಿನಾಂಕ ೮.೫.೨೦೧೯ರಂದು ಮುಂಜಾನೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದ. ಆರೋಪಿಯ ಕೃತ್ಯವನ್ನು ಪ್ರತ್ಯಕ್ಷ ಕಂಡ ಬಾಲಕಿಯ ತಾಯಿ ಪ್ರಶ್ನಿಸಿದಾಗ ರಂಜಿತ್ ಕುಮಾರ್ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದ. ಈ ಬಗ್ಗೆ ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ನೊಂದ ಬಾಲಕಿಯ ತಾಯಿ ನೀಡಿದ್ದ ದೂರಿನಂತೆ ರಂಜಿತ್ ಕುಮಾರ್ ವಿರುದ್ಧ ಪೊಕ್ಸೋ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆ ಪೂರ್ಣಗೊಳಿಸಿದ ಮೂಡಬಿದ್ರೆ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಸಾವಿತ್ರಿ ನಾಯಕ್ ಅವರು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ವಾದ ಪ್ರತಿವಾದ ನಡೆದು ಆಗಸ್ಟ್ ೨೫ರಂದು ನ್ಯಾಯಾಧೀಶೆ ಮಂಜುಳಾ ಇಟ್ಟಿ ತೀರ್ಪು ಪ್ರಕಟಿಸಿದ್ದು ಆರೋಪಿ ರಂಜಿತ್ ಕುಮಾರ್‌ಗೆ ಪೋಕ್ಸೋ ಕಾಯ್ದೆಗೆ ಸಂಬಂಧಿಸಿ ಐದು ವರ್ಷ ಜೈಲು ಶಿಕ್ಷೆ ಮತ್ತು ರೂ. ೫೦೦೦ ದಂಡ, ಭಾ.ದಂ.ಸಂ ಕಲಂ ೩೫೪ರ ಆರೋಪಕ್ಕೆ ಸಂಬಂಧಿಸಿ ಒಂದು ವರ್ಷ ಜೈಲು ಶಿಕ್ಷೆ ಮತ್ತು ರೂ. ೧,೦೦೦ ದಂಡ, ಭಾ.ದಂ.ಸಂ. ಕಲಂ-೫೦೪ರ ಆರೋಪಕ್ಕೆ ಸಂಬಂಧಿಸಿ ೬ ತಿಂಗಳ ಜೈಲು ಶಿಕ್ಷೆ ಮತ್ತು ೧,೦೦೦ ದಂಡ, ಭಾ.ದಂ. ಸಂ. ಕಲಂ ೫೦೬ರ ಆರೋಪಕ್ಕೆ ಸಂಬಂಧಿಸಿ ೬ ತಿಂಗಳ ಜೈಲು ಶಿಕ್ಷೆ ಮತ್ತು ರೂ. ೧,೦೦೦ ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಹನಾದೇವಿ ವಾದ ಮಂಡಿಸಿದ್ದರು. ಸಹನಾ ದೇವಿರವರು ಪುತ್ತೂರು ನ್ಯಾಯಾಲಯದ ಎಪಿಪಿ ಚೇತನಾದೇವಿಯವರ ಸಹೋದರಿ.
Home ಕ್ರೈಂ ನ್ಯೂಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಿಂದಿಸಿ ಬೆದರಿಕೆ ಒಡ್ಡಿದ ಆರೋಪ ಸಾಬೀತು; ಅಪರಾಧಿ ರಂಜಿತ್ ಕುಮಾರ್...