ಪೆರಿಯಡ್ಕದಲ್ಲಿ 25ನೇ ವರ್ಷದ ಗಣೇಶೋತ್ಸವ

0

ಗಣಪತಿಯ ಆರಾಧನೆಯಿಂದ ಸಾರ್ಥಕ್ಯ ಜೀವನ: ಯು.ಜಿ. ರಾಧಾ

ಉಪ್ಪಿನಂಗಡಿ: ಗಣೇಶೋತ್ಸವ ಆಚರಣೆಯ ಹಿಂದೆ ಸಾಮಾಜಿಕ ಸಾಮರಸ್ಯದ ಸಂಕೇತವಿದ್ದು, ಎಲ್ಲರಿಗೂ ಆಪ್ತನಾಗಿರುವ ಗಣಪತಿಯ ಆರಾಧನೆಯಿಂದ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯವಿದೆಯಲ್ಲದೆ, ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಿದೆ ಎಂದು ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು.ಜಿ. ರಾಧಾ ಹೇಳಿದರು.

ಪೆರಿಯಡ್ಕದ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಆರಾಧನೆಗೊಂಡ ಗಣಪತಿ

ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‌ನ ವತಿಯಿಂದ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಗಣಪತಿಯ ರೂಪದಲ್ಲೇ ಬದುಕಿನ ಪಾಠವಿದ್ದು, ಆತನ ಸಣ್ಣ ಕಣ್ಣುಗಳು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸು ಎಂದು ಹೇಳಿದರೆ, ದೊಡ್ಡ ಕಿವಿ ಸಮಾಜದಿಂದ ಬರುವ ಟೀಕೆ- ಟಿಪ್ಪಣಿಯನ್ನು ಸ್ವೀಕರಿಸಿ ಮುನ್ನಡೆಯಬೇಕು ಎಂದು ಕಲಿಸುತ್ತದೆ. ದೊಡ್ಡ ಹೊಟ್ಟೆ ಎಲ್ಲವನ್ನೂ ಜೀರ್ಣಿಸಿಕೋ ಎಂದು ತಿಳಿಸುತ್ತದೆ. ಮತ್ತೆ ಆತನ ಹೊಟ್ಟೆಯಲ್ಲಿರುವ ಹಾವು ಹಾಗೂ ಕಾಲ ಬಳಿ ಇರುವ ಇಲಿ ಸಾಮರಸ್ಯದ ಬದುಕನ್ನು ಪ್ರತಿಪಾದಿಸುತ್ತವೆ ಎಂದು ಬಣ್ಣಿಸಿದ ಅವರು, ನಮ್ಮ ಧರ್ಮವು ನಮಗೆ ಸಾಮರಸ್ಯದ ಬದುಕನ್ನು ತಿಳಿಸಿದ್ದು, ಆದರೆ ನಮ್ಮಲ್ಲಿರುವ ವಿವೇಚನೆ ಕೊರತೆ ಹಾಗೂ ನಮ್ಮ ಭವ್ಯ ಪರಂಪರೆ, ಪುರಾತನ ಸಂಸ್ಕೃತಿಯನ್ನು ಮರೆತ ಕಾರಣ ಮತೀಯರಿಂದ ನಾವು ಸಾಮರಸ್ಯದ ಪಾಠ ಹೇಳಿಕೊಳ್ಳಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಕೇವಲ ಅಂಕಗಳಿಕೆಗಷ್ಟೇ ಸೀಮಿತವಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಸಂಸ್ಕಾರ, ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದ ನಾವೆಲ್ಲರೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರೀಯ ವಿಚಾರಧಾರೆ, ಸಮಾಜಮುಖಿ ಚಿಂತನೆಯುಳ್ಳ ಸಂಸ್ಕಾರಯುತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು ಮಾತನಾಡಿ, ಸಾಧು- ಸಂತರು, ಋಷಿ ಮುನಿಗಳು ಕಟ್ಟಿದ ಪುಣ್ಯ ಭೂಮಿ ಭಾರತದಲ್ಲಿ ನಾವಿದ್ದೇವೆ. ಹಿರಿಯರ ಆಚಾರ- ವಿಚಾರಗಳನ್ನು ಮರೆಯದೇ, ನಮ್ಮ ಸಂಸ್ಕೃತಿ- ಸಂಸ್ಕಾರಗಳಿಗೆ ಲೋಪವಾಗದಂತೆ ಮೌಲ್ಯಯುತ ಬದುಕು ನಮ್ಮದಾಗಬೇಕು. ಜಾತಿ ವ್ಯವಸ್ಥೆಯನ್ನು ದೂರವಿಟ್ಟು ನಾವೆಲ್ಲಾ ಭಾರತಾಂಬೆಯ ಮಕ್ಕಳು ಎಂದು ಒಗ್ಗಟ್ಟಿನ ಬಾಳ್ವೆ ನಮ್ಮದಾಗಬೇಕು. ಹಿಂದೊಮ್ಮೆ ಜಗತ್ತಿಗೆ ಗುರುವಾಗಿದ್ದ ಭಾರತ ದೇಶವು ಆಗ ಮಾತ್ರ ಇನ್ನೊಮ್ಮೆ ಜಗದ್ಗುರುವಾಗಿ ಮೆರೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಮಾತನಾಡಿ, ಭಜನಾ ಮಂದಿರದಲ್ಲಿ ಅಂದು ಹಿರಿಯರು ಸಣ್ಣದಾಗಿ ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಎಲ್ಲರೂ ಒಗ್ಗೂಡಿ ಮಾಡಿದ ಕೆಲಸ ಕಾರ್ಯಗಳಿಂದ ಇಂತಹ ಯಶಸ್ವಿ ಕಾರ್ಯಕ್ರಮಗಳು ಸಾಧ್ಯವಾಗುತ್ತದೆ. ಊರಿನ ಹಬ್ಬದ ರೀತಿ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಆಡಳಿತ ಮಂಡಳಿಯ ಮೊದಲ ಸದಸ್ಯರಾದ ಸತೀಶ್ ರಾವ್, ಕಾಂತಪ್ಪ ಗೌಡ ಅವರನ್ನು, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮೊದಲ ಸದಸ್ಯರಾದ ಶಂಕರನಾರಾಯಣ ಭಟ್ ಬೊಳ್ಳಾವು, ಹರಿಪ್ರಸಾದ್ ಭಟ್, ಹರೀಶ್ವರ ಮೊಗ್ರಾಲ್, ಪ್ರಶಾಂತ್ ಪೆರಿಯಡ್ಕ, ಗಣೇಶ್ ಕಿಂಡೋವು, ಗೋಪಾಲಕೃಷ್ಣ ನಾಯಕ್ ಪೋರೋಳಿ, ದೇವಿದಾಸ್ ಕಣಿಯ ಅವರನ್ನು, ಆರ್ಥಿಕ ನೆರವು ನೀಡಿ ಭಜನಾ ಮಂದಿರದ ಅಭಿವೃದ್ಧಿಗೆ ಕಾರಣರಾದ ಪ್ರತಾಪ್ ಮತ್ತು ಶ್ರೀಲತಾ ದಂಪತಿ, ಪ್ರಸನ್ನಕುಮಾರ್ ಮತ್ತು ಭವ್ಯ ದಂಪತಿಯನ್ನು ಹಾಗೂ ಗಣೇಶ ವಿಗ್ರಹ ರಚಿಸಿದ ಲೊಕೇಶ್‌ರನ್ನು ಸನ್ಮಾನಿಸಲಾಯಿತು. ಶ್ರೀ ಮಂದಿರದಲ್ಲಿ ಮುರಳೀ ಮುಕುಂದ ಭಟ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ ಜರಗಿತು. ರಾತ್ರಿ ಲಯನ್ ಕಿಶೋರ್ ಡಿ. ಶೆಟ್ಟಿ ತಂಡದ ಕಲಾವಿದರಿಂದ ‘ಕಟೀಲ್ದಪ್ಪೆ ಉಳ್ಳಾಲ್ದಿ’ ತುಳು ಪೌರಣಿಕ ನಾಟಕ ಜರಗಿತು.

ವೇದಿಕೆಯಲ್ಲಿ ಹಿರಿಯರಾದ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮಕ್ಕೆ ಆಗಮಿಸಿ, ಶುಭಕೋರಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಸದಸ್ಯ ಸುರೇಶ್ ಅತ್ರೆಮಜಲು ಪ್ರಮುಖರಾದ ಪ್ರಸನ್ನ ಕುಮಾರ್, ಪ್ರತಾಪ್ ಪೆರಿಯಡ್ಕ, ಸದಾನಂದ ಶೆಟ್ಟಿ ಕಿಂಡೋವು, ಜಗದೀಶ್ ರಾವ್ ಮಣಿಕ್ಕಳ, ವಸಂತ ನಾಯ್ಕ, ಪ್ರಶಾಂತ್ ಪೆರಿಯಡ್ಕ, ಹರೀಶ್ವರ ಮೊಗ್ರಾಲ್, ಪೃಥ್ವಿರಾಜ್ ಪೆರಿಯಡ್ಕ, ಪ್ರಹ್ಲಾದ್ ಪೆರಿಯಡ್ಕ, ಜತ್ತಪ್ಪ ನಾಯ್ಕ, ವಸಂತ ನಾಯ್ಕ, ಗಣೇಶ್ ಆಚಾರ್ಯ, ಶೀನಪ್ಪ ಗೌಡ, ವಸಂತ ಕುಂಟಿನಿ, ಕೃಷ್ಣಪ್ರಸಾದ್ ಬೊಳ್ಳಾವು, ದುರ್ಗಾಪ್ರಸಾದ್ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ನಾರಾಯಣ ಭಟ್ ಪೆರಿಯಡ್ಕ, ಶಿವರಾಜ್ ಭಟ್ ಕುಂಟಿನಿ, ಲೋಕೇಶ ನೆಕ್ಕರೆ, ರಮೇಶ ನೆಕ್ಕರೆ, ರಾಜೇಶ ನೆಕ್ಕರೆ, ಪರಮೇಶ್ವರ ನೆಕ್ಕರೆ, ಹರೀಶ್ ಪಟ್ಲ, ಪ್ರವೀಣ್ ರೈ, ಪ್ರವೀಣ್ ಕುಮಾರ್, ರೋಹಿತ್, ಅಶೋಕ್ ವರ್ನಡ್ಕ, ಸದಾಶಿವ, ಸುಧಾಕರ ಕನಿಯ, ಸತೀಶ್ ಕನಿಯ, ದುರ್ಗಾಪ್ರಸಾದ್, ಗಣೇಶ್ ಕಿಂಡೋವು, ಉಪೇಂದ್ರ, ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಮಂದಿರದ ಕಾರ್ಯದರ್ಶಿ ಅವನೀಶ್ ಭಟ್ ಪೆರಿಯಡ್ಕ ಸ್ವಾಗತಿಸಿ, ವಂದಿಸಿದರು. ಚೇತನ್ ಮೊಗ್ರಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here