ಸರ್ಕಾರಿ ಸವಲತ್ತುಗಳು ಎಂಡೋ ಸಂತ್ರಸ್ತರ ಪಾಲಿಗೆ ಮರಿಚಿಕೆ; ಸೆ. 11ರಂದು ಎಂಡೋ ಸಂತ್ರಸ್ತರ ಸಮಾಲೋಚನಾ ಸಭೆ

0

ಉಪ್ಪಿನಂಗಡಿ: ಸರ್ಕಾರ ಘೋಷಿಸುತ್ತಿರುವ ಸವಲತ್ತುಗಳು ಎಂಡೋ ಸಂತ್ರಸ್ತರ ಪಾಲಿಗೆ ಮರಿಚಿಕೆಯಾಗಿದ್ದು, ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಹೋರಾಟ ನಡೆಸುವ ಸಲುವಾಗಿ ಸೆಪ್ಟೆಂಬರ್ ೧೧ರಂದು ಉಪ್ಪಿನಂಗಡಿಯಲ್ಲಿ ಎಂಡೋ ಸಂತ್ರಸ್ತರ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ ಎಂದು ಎಂಡೋ ಸಂತ್ರಸ್ತರ ಪರ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ತಿಳಿಸಿದ್ದಾರೆ.

ಅವರು ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ೨ ವರ್ಷಗಳ ಹಿಂದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ಸಂತ್ರಸ್ತರಿಗೆ ಯುಡಿ. ಐಡಿ ಕಾರ್ಡ್ ನೀಡುವ ಬಗ್ಗೆ ಸೂಚನೆಯನ್ನು ಸರಕಾರ ನೀಡಲಾಗಿತ್ತು. ೨ ತಿಂಗಳ ಹಿಂದೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮುಂದಿನ ೫ ದಿನಗಳ ಒಳಗಾಗಿ ಸಂತ್ರಸ್ತರಿಗೆ ಯುಡಿ. ಐಡಿ ಕಾರ್ಡ್ ನೀಡಲು ಸ್ವತಃ ಸಚಿವರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಅದು ಇದುವರೆಗೆ ಪಾಲನೆಯಾಗಿಲ್ಲ.

ಒಂದಷ್ಟು ಮಂದಿಗೆ ಎಂಡೋ ಸಂತ್ರಸ್ತರ ಪರಿಹಾರ ಧನವನ್ನು ಹೆಚ್ಚಳಗೊಳಿಸಿರುತ್ತಾರೆ. ಇನ್ನು ಹಲವು ಮಂದಿಗೆ ಹೆಚ್ಚಳಗೊಳಿಸಿರುವುದಿಲ್ಲ. ಪೌಷ್ಠಿಕ ಆಹಾರ ನೀಡುವ ಭರವಸೆ ಈಡೇರಲಿಲ್ಲ. ಸಂತ್ರಸತರಿಗೆ ಪುತ್ತೂರು ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಬೇಕೆಂಬ ಬೇಡಿಕೆಯೂ ಈಡೇರಲಿಲ್ಲ. ಸಂತ್ರಸ್ತರ ಅಹವಾಲನ್ನು ತಿಳಿಸೋಣ ಎಂದರೆ ಅಂಗವಿಕಲ ಕಲ್ಯಾಣ ಇಲಾಖೆಗೆ ಕಮಿಷನರ್‌ರವರ ನೇಮಕಾತಿಯೇ ಆಗಿಲ್ಲ.

ಇದರಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಎಂಡೋ ಸಂತ್ರಸ್ತರಿಗೆ ಸರಕಾರ ಸೌಲಭ್ಯ ನೀಡಿದರೂ ದಕ್ಕಿಸಿಕೊಳ್ಳಲಾಗದ ದುಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಹೋರಾಟದ ಅನಿವಾರ್ಯತೆ ಸಂತ್ರಸ್ತರದ್ದಾಗಿದೆ.

ಈ ಹಿನ್ನೆಲೆಯಲ್ಲಿ ಹೋರಾಟದ ರೂಪುರೇಷೆಯನ್ನು ಕೈಗೆತ್ತಿಕೊಳ್ಳಲು ಸೆ. ೧೧ರಂದು ಎಂಡೋ ಸಂತ್ರಸ್ತರ ಪೋಷಕರ ಸಮಾಲೋಚನಾ ಸಭೆಯನ್ನು ಉಪ್ಪಿನಂಗಡಿ ಸಂಗಮ ಕೃಪಾ ಸಭಾಂಗಣದಲ್ಲಿ ಕರೆಯಲಾಗಿದ್ದು, ಜಿಲ್ಲೆಯ ಎಲ್ಲಾ ಸಂತ್ರಸ್ತರ ಪೋಷಕರು ಇದರಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿರುತ್ತಾರೆ.  ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಮುಂದಾಳುಗಳಾದ ತುಕ್ರಪ್ಪ ಶೆಟ್ಟಿ, ಬಾಲಕೃಷ್ಣ ಬಳ್ಳಕ್ಕ, ಪ್ರಕಾಶ್ ಕೊಡೆಂಕೇರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here