ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
- ಹೆತ್ತವರನ್ನು ಗೌರವಿಸುವುದು ಮೇರಿ ಮಾತೆಗೆ ಸಲ್ಲುವ ಗೌರವ-ವಂ|ಸ್ಟ್ಯಾನಿ
ಪುತ್ತೂರು: ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಗೆ ಕುಟಂಬದಲ್ಲಿ ವಿಶೇಷ ಸ್ಥಾನಮಾನವಿದ್ದು ಅವರು ನಮ್ಮೆಲ್ಲರ ತಾಯಿಯಾಗಿದ್ದಾರೆ. ಮೇರಿ ಮಾತೆಯನ್ನು ಕುಟುಂಬದ ಮಾತೆ ಎಂದು ಪೂಜಿಸಲಾಗುತ್ತಿದ್ದು ಈ ಹಬ್ಬ ಕುಟುಂಬದ ಸಾಮರಸ್ಯವನ್ನು ಎತ್ತಿ ಹಿಡಿಯುತ್ತದೆ ಹಾಗೂ ಹೆತ್ತವರನ್ನು ಗೌರವಿಸುವುದು ಮೇರಿ ಮಾತೆಗೆ ಸಲ್ಲುವ ಅತ್ಯಂತ ಗೌರವವಾಗಿದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಹೇಳಿದರು.
ಅವರು ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.೮ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ `ಮೊಂತಿ ಫೆಸ್ತ್(ತೆನೆ ಹಬ್ಬ)-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾಯಿದೆ ದೇವುಸ್ ಚರ್ಚ್ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು. ಮೇರಿ ಮಾತೆಯು ತಾಳ್ಮೆಯ ಪ್ರತೀಕವಾಗಿದ್ದು, ಜೀವನದಲ್ಲಿ ಎಂದೆಂದಿಗೂ ವಿಧೇಯತೆಯ ಗುಣವನ್ನು ಮೈಗೂಡಿಸಿಕೊಂಡಿದ್ದರು ಮಾತ್ರವಲ್ಲದೆ ಕಡಿಮೆ ಮಾತುಗಳನ್ನಾಡುವ ಸ್ವಭಾವವನ್ನು ಅವರು ಹೊಂದಿದ್ದರು. ಅದರಂತೆ ಮೇರಿ ಮಾತೆಯಲ್ಲಿರುವ ಧನಾತ್ಮಕ ಚಿಂತನೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಮೇರಿ ಮಾತೆಯ ಹಬ್ಬದ ಅಂಗವಾಗಿ ಕಳೆದ ಒಂಭತ್ತು ದಿನಗಳ ಪ್ರಾರ್ಥನೆ(ನವೇನಾ)ಯಲ್ಲಿ ಭಾಗಿಯಾದವರ ಭಕ್ತರ ಪ್ರಾರ್ಥನೆ ಫಲಿಸಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದ ಅವರು ಮೇರಿ ಮಾತೆಯು ಸಾಧಾರಣ ಸ್ತ್ರೀ ಆಗಿರದೆ ದೇವರ ಅಪ್ಪಣೆಯಂತೆ ಯೇಸು ಕ್ರಿಸ್ತರನ್ನು ತನ್ನ ಪುತ್ರನಾಗಿ ಜನಿಸಲು ಸಂಪೂರ್ಣ ಒಪ್ಪಿಗೆ ಸೂಚಿಸಿ ದೇವರ ಆಜ್ಞೆಯನ್ನು ಪಾಲಿಸಿದ ಮೇರಿ ಮಾತೆಯು ಕ್ರೈಸ್ತ ಬಾಂಧವರಿಗೆ ಆದರ್ಶಪ್ರಾಯರಾಗಿದ್ದಾರೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಹೊಸ ಅಕ್ಕಿ ಊಟವನ್ನು ಸೇವನೆ ಮಾಡುವ ಮೂಲಕ ಕುಟುಂಬವು ಸಮೃದ್ಧಿಗೊಳ್ಳುವುದು ಎಂದು ಅವರು ಹೇಳಿದರು.
ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಧರ್ಮಗುರು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಭಕ್ತಾಧಿಗಳೊಂದಿಗೆ ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು. ಅದರಂತೆ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ರಾಕ್ಣೊ ಪತ್ರಿಕೆಯ ಸಂಪಾದಕ ವಂ|ವಲೇರಿಯನ್ ಫೆರ್ನಾಂಡೀಸ್, ಸಂತ ಫ್ರಾನ್ಸಿಸ್ಕನ್ ಸಂಸ್ಥೆಯ ಬ್ರದರ್ ವಿಲ್ಫ್ರೆಡ್ ಮೊಂತೇರೊ, ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಬಿಕರ್ನಕಟ್ಟೆ ಚರ್ಚ್ನ ಧರ್ಮಗುರು ವಂ|ಟೋನಿ ಡಿ’ಸೋಜರವರೊಂದಿಗೆ ಹಬ್ಬದ ಬಲಿಪೂಜೆಗಳು ನೆರವೇರಿದವು. ಆಯಾ ಚರ್ಚ್ನ ಧರ್ಮಭಗಿನಿಯರು, ಪಾಲನಾ ಸಮಿತಿ, ವಾಳೆ ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ, ಸ್ಯಾಕ್ರಿಸ್ಟಿಯನ್, ಸಂಘ-ಸಂಸ್ಥೆಗಳು ಸಹಕರಿಸಿದರು.
ಭತ್ತದ ತೆನೆಗಳ ಪವಿತ್ರೀಕರಣ, ಕಬ್ಬು ವಿತರಣೆ:
ರೈತರು ಬೆಳೆಸಿದ ಭತ್ತದ ತೆನೆ(ಹೊಸ ಅಕ್ಕಿ ಊಟ)ಗಳನ್ನು ಆಯಾ ಚರ್ಚ್ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು ಹಾಗೂ ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಆಯಾ ಚರ್ಚ್ನಲ್ಲಿ ವಿತರಿಸುವುದು ಸಂಪ್ರದಾಯವಾಗಿದ್ದು, ಅದರಂತೆ ತಾಲೂಕಿನ ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ಸಿಹಿತಿಂಡಿ ಹಾಗೂ ಕಬ್ಬನ್ನು ವಿತರಿಸಲಾಯಿತು.
ಮೇರಿ ಮಾತೆಗೆ ಹೂ ಅರ್ಪಣೆ:
ಮೊಂತಿ ಫೆಸ್ತ್-ಕುಟುಂಬದ ಹಬ್ಬ ಆಚರಣೆಯು ಒಂಭತ್ತು ದಿವಸದ ಹಿಂದೆಯೇ ಆರಂಭಗೊಂಡಿದ್ದು, ಕರಾವಳಿಯ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಯ ಜೊತೆಗೆ ಪುಟ್ಟ ಮಕ್ಕಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ್ಯ ಪ್ರಾರಂಭಗೊಂಡಿತ್ತು. ಆಯಾ ಚರ್ಚ್ಗಳಲ್ಲಿ ಪುಟ್ಟ ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಕ್ಕಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇರಿ ಮಾತೆಗೆ ಹಬ್ಬದ ದಿನದಂದು ಹೂವುಗಳನ್ನು ಅರ್ಪಿಸಲಾಯಿತು.
ಹಬ್ಬದಿಂದ ಕೌಟುಂಬಿಕ ಸಾಮರಸ್ಯ..
ಹಬ್ಬದ ಇನ್ನೊಂದು ವಿಶೇಷವೆಂದರೆ `ಹೊಸ ಅಕ್ಕಿ ಊಟ’ ನವ ದಂಪತಿಗಳಿಗೆ, ಒಂದು ವರ್ಷ ತುಂಬುವ ಮಗುವಿಗೆ ಈ ಹಬ್ಬ ಇನ್ನೂ ವಿಶೇಷವಾಗಿದೆ. ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಭತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಾಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ.
ಮಾಯಿದೆ ದೇವುಸ್ ಚರ್ಚ್ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ)ನಿಂದ ಹಬ್ಬದ ಪ್ರಯುಕ್ತ ಪುತ್ತೂರು, ಮನೆಲ, ಬೆಳ್ಳಾರೆ, ನಿಡ್ಪಳ್ಳಿ ಚರ್ಚ್ ವ್ಯಾಪ್ತಿಯಲ್ಲಿನ ಸುಮಾರು ೨೬೦ ಫಲಾನುಭವಿ ಕುಟುಂಬಗಳನ್ನು ಗುರುತಿಸಿ, ಹಬ್ಬಕ್ಕೆ ಬೇಕಾದ ಸಿರಿಧಾನ್ಯಗಳು ಮತ್ತು ವಿವಿಧ ತರಕಾರಿ ವಸ್ತುಗಳನ್ನು ವಿತರಿಸಿ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿತ್ತಿದ್ದಾರೆ. ಕಳೆದ ವರ್ಷವೂ ಇದೇ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸಂಘದವರು ಫಲಾನುಭವಿ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮನೆಮಾತಾಗಿದ್ದರು.