ಪುತ್ತೂರು:ಸೆ.7ರಂದು ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬಲ್ನಾಡು ಗ್ರಾಮದ ಸಾರ್ಯ ಸಮೀಪ ಮನೆಯೊಂದು ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ.ಮನೆಯೊಳಗಿದ್ದ ಹೆಣ್ಣು ಮಕ್ಕಳಿಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.ತೀರಾ ಬಡತನದಲ್ಲಿರುವ ಕುಟುಂಬ ಮನೆ ಕಳೆದುಕೊಂಡು ಇದೀಗ ಸಂಕಷ್ಟ ಸ್ಥಿತಿಯಲ್ಲಿದೆ.
ಬಲ್ನಾಡು ಗ್ರಾಮದ ಸಾರ್ಯ ಅಬರೆಗುರಿ ನಿವಾಸಿ ವಿಶ್ವನಾಥ ರೈ ಎಂಬವರ ಹಂಚಿನ ಮಾಡಿನ ಮನೆ ಮಳೆಗೆ ಕುಸಿದು ಬಿದ್ದಿದೆ.ಕೂಲಿ ಕಾರ್ಮಿಕರಾಗಿ ಜೀವನ ನಿರ್ವಹಣೆ ಮಾಡುತ್ತಿರುವ ವಿಶ್ವನಾಥ ರೈ ಮತ್ತವರ ಪತ್ನಿ, ಇಬ್ಬರು ಪುತ್ರಿಯರು ಮನೆಯಲ್ಲಿ ವಾಸವಿದ್ದರು.ರಾತ್ರಿ ಸುಮಾರು ಒಂದೂವರೆ ಗಂಟೆ ವೇಳೆಗೆ ಮನೆ ಕುಸಿದು ಬಿದ್ದಿದೆ.ಮನೆ ಕುಸಿಯುತ್ತಿದ್ದ ಶಬ್ದ ಕೇಳಿ ಮನೆಯೊಳಗಿದ್ದವರು ಹೊರಗೆ ಓಡಿ ಬರುವ ಪ್ರಯತ್ನದಲ್ಲಿ ವಿಶ್ವನಾಥ ರೈಯವರ ಇಬ್ಬರು ಪುತ್ರಿಯರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸಂಕಷ್ಟದಲ್ಲಿ ಕುಟುಂಬ:
ವಿಶ್ವನಾಥ ರೈಯವರ ಕುಟುಂಬ ತೀರಾ ಆರ್ಥಿಕ ಬಡತನದಲ್ಲಿದ್ದು ಕೂಲಿ ಮಾಡಿಯೇ ಜೀವನ ನಿರ್ವಹಣೆ ಮಾಡಬೇಕು.ಇದ್ದ ವಾಸದ ಮನೆಯೂ ಇದೀಗ ಮಳೆಯಿಂದಾಗಿ ಕುಸಿದು ಬಿದ್ದಿರುವುದರಿಂದ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸದ್ಯ ಸಂಬಂಧಿಕರ ಮನೆಯಲ್ಲಿ ಅವರಿಗೆ ತಾತ್ಕಾಲಿಕವಾಗಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆಯಾದರೂ ಈ ಕುಟುಂಬಕ್ಕೆ ಶಾಶ್ವತವಾದ ಸೂರಿನ ವ್ಯವಸ್ಥೆ ಆಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾ.ಪಂ.ತಂಡ ಭೇಟಿ:
ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಸದಸ್ಯರಾದ ರವಿಚಂದ್ರ ಸಾಜ,ಶೋಭಾ ಮುರುಂಗಿ, ಗಣೇಶ್ ಬಲ್ನಾಡು,ಕಿರಣ್ ಕುಮಾರ್, ಅಭಿವೃದ್ಧಿ ಅಧಿಕಾರಿ ಶರೀಫ್, ಗ್ರಾಮಲೆಕ್ಕಾಧಿಕಾರಿ ವಾರಿಜಾ,ಗ್ರಾಮ ಸಹಾಯಕ ಸಂಜೀವ,ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶಕ್ತಿ ಕೇಂದ್ರದ ಅಕ್ಷಯ ಶೆಟ್ಟಿ ಕಲ್ಲಾಜೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಾತ್ಕಾಲಿಕ ಪರಿಹಾರವಾಗಿ ಮನೆಯ ಮಾಡಿಗೆ ಶೀಟು ಅಳವಡಿಸಿಕೊಡುವ ಕುರಿತು ಚಿಂತನೆ ನಡೆಸಲಾಗಿದ್ದು ಸೆ.9ರಂದು ಮತ್ತೆ ಗ್ರಾ.ಪಂ.ನಿಂದ ಅಲ್ಲಿಗೆ ಭೇಟಿ ನೀಡಲಾಗುವುದು ಎಂದು ಗ್ರಾ.ಪಂ.ಸದಸ್ಯ ರವಿಚಂದ್ರ ತಿಳಿಸಿದ್ದಾರೆ.ವಿಶ್ವನಾಥ ರೈಯವರ ಮನೆಗೆ ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಸಾಮಾಗ್ರಿಗಳನ್ನು ಕೊಂಡೊಯ್ಯಲೂ ಹರಸಾಹಸ ಪಡಬೇಕಾಗಿದೆ ಎಂದು ಮಾಹಿತಿ ಲಭಿಸಿದೆ.
ಸಂಬಂಧಿಸಿದವರು ಕೂಡಲೇಸೂಕ್ತ ವ್ಯವಸ್ಥೆ ಮಾಡಲಿ:
ಸ್ಥಳಕ್ಕೆ ಭೇಟಿ ನೀಡಿರುವ ಸಾಮಾಜಿಕ ಕಾರ್ಯಕರ್ತ ಕೃಷ್ಣಾನಂದ ಸೂರ್ಯ ಅವರು, ಮನೆ ಕುಸಿದು ಬಿದ್ದಿರುವುದರಿಂದ ವಿಶ್ವನಾಥ ರೈ ಕುಟುಂಬದವರು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಅವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕು ಮತ್ತು ಅವರಿಗೆ ಶಾಶ್ವತವಾದ ಮನೆಯೊಂದರ ವ್ಯವಸ್ಥೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.