ಸೆ.10ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ
ಪುತ್ತೂರು: ಮೈಸೂರಿನ ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಇದರ ಪ್ರಥಮ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಇದರ ಸ್ಥಾಪಕ ಕಾರ್ಯದರ್ಶಿ ಪ್ರೊ.ಡಾ.ಕೆ.ಕುಮಾರ್ ಅವರ ಆಯೋಜನೆಯಲ್ಲಿ ಸೆ.10 ಮತ್ತು 11ರಂದು ಮೈಸೂರಿನ ಕಲೆಮನೆ ಸಭಾಂಗಣದಲ್ಲಿ ನಡೆಯಲಿರುವ `ನಿರಂತರ ಕಲೆಮನೆ ಉತ್ಸವ’ದಲ್ಲಿ ಸೆ.10ರಂದು ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಇದರ ನಿರ್ದೇಶಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸಹಿತ ರಾಜ್ಯದ ನಾನಾ ಭಾಗಗಳ ಒಂಭತ್ತು ಮಂದಿಗೆ
ಪ್ರತಿಷ್ಠಿತ `ಕಲೆಮನೆ ವಾರ್ಷಿಕ ಪ್ರಶಸ್ತಿ’ ಪ್ರದಾನ ನಡೆಯಲಿದೆ.
ನೃತ್ಯ ಕ್ಷೇತ್ರದಲ್ಲಿನ ವಿವಿಧ ಸಾಧನೆಗಾಗಿ ಶಾಲಿನಿ ಆತ್ಮಭೂಷಣ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಳಿಕ ವಿವಿಧ ನೃತ್ಯಗುರುಗಳು ಹಾಗೂ ಅವರ ಶಿಷ್ಯವೃಂದದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಶಾಲಿನಿ ಆತ್ಮಭೂಷಣ್ ಅವರು 2004ರಲ್ಲಿ ಪುತ್ತೂರಿನಲ್ಲಿ ನೃತ್ಯೋಪಾಸನಾ ಕಲಾಕೇಂದ್ರ ಸ್ಥಾಪಿಸಿ 18 ವರ್ಷಗಳಿಂದ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಪ್ರಸ್ತುತ ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ, ವಿಟ್ಲ ಹಾಗೂ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ನೃತ್ಯ ತರಗತಿ ನಡೆಸುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಇಲ್ಲಿವರೆಗೆ ಸುಮಾರು 300ಕ್ಕೂ ಅಧಿಕ ಕಡೆಗಳಲ್ಲಿ ಭರತನಾಟ್ಯ ಪ್ರದರ್ಶನ ನಡೆದಿದೆ.
ವಿವಿಧ ನೃತ್ಯರೂಪಕಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ನೃತ್ಯೋಪಾಸನಾ ಕಲಾಕೇಂದ್ರ ಈವರೆಗೆ ನಿರಂತರವಾಗಿ ಶೇ.100 ಫಲಿತಾಂಶ ದಾಖಲಿಸುತ್ತಾ ಬಂದಿದೆ. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಭರತನಾಟ್ಯ ಜೂನಿಯರ್, 200ಕ್ಕೂ ಅಧಿಕ ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗೆ ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. `ನೃತ್ಯ ಶಿಕ್ಷಣ- ಪೋಷಣೆ’ ಯೋಜನೆಯಡಿ ಸುಮಾರು 25ಕ್ಕೂ ಅಧಿಕ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ಸಂಘ ಸಂಸ್ಥೆಗಳ ನೆರವು ಇಲ್ಲದೆ ಉಚಿತ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಅಲ್ಲದೆ ಉಚಿತ ನೃತ್ಯ ಕಾರ್ಯಾಗಾರ, ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.ವಿದುಷಿ ಸುಮಾ ರಾಮಪ್ರಸಾದ್, ವಿದುಷಿ ಗೀತಾ ಸರಳಾಯ, ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್, ವಿದುಷಿ ರಾಜಶ್ರೀ, ಬೆಂಗಳೂರಿನ ನೃತ್ಯಗುರು ವಿದುಷಿ ದಿ.ಭಾನುಮತಿ ಇವರಲ್ಲಿ ನೃತ್ಯಭ್ಯಾಸ ಮಾಡಿದ್ದು, ಪ್ರಸ್ತುತ ಬೆಂಗಳೂರಿನ
ವಿದುಷಿ ಶೀಲಾ ಚಂದ್ರಶೇಖರ್ ಇವರಲ್ಲಿ ಉನ್ನತ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲಿನಿ ಆತ್ಮಭೂಷಣ್ ಅವರು ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಹಾಗೂ ಮಂಗಳೂರು ವಿವಿಯಲ್ಲಿ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಚೆನ್ನೈನ ಅಣ್ಣಾಮಲೈ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ನಡೆಸುವ ತಾಳ, ವಾದ್ಯ, ಸಂಗೀತ ಪರೀಕ್ಷೆಯಲ್ಲಿ ಪರೀಕ್ಷಕರಾಗಿ, ಮೌಲ್ಯಮಾಪಕರಾಗಿ ಭಾಗವಹಿಸುವ ಶಾಲಿನಿ ಆತ್ಮಭೂಷಣ್ ಅವರು, ವಿವಿಧ ನೃತ್ಯ ಶಿಬಿರ, ಆಕಾಶವಾಣಿ ಸಂದರ್ಶನ, ವಿವಿಧ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಭಾಗವಹಿಸಿದ್ದಾರೆ. ೨೦೧೮ರಲ್ಲಿ ಮಲೇಷಿಯಾದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಇವರ ಸಾಧನೆಗೆ ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯಿಂದ ನಾಟ್ಯ ಶಿಕ್ಷಣ ಪುರಸ್ಕಾರ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ನೃತ್ಯ ಕಲಾ ರತ್ನ ಪ್ರಶಸ್ತಿ, ಸುಬ್ರಹ್ಮಣ್ಯದ ಶ್ರೀವಿದ್ಯಾಸಾಗರ ಭಜನಾ, ಸಂಗೀತ, ಯಕ್ಷಗಾನ ಕಲಾ ಶಾಲೆಯಿಂದ ಗೌರವ ಪುರಸ್ಕಾರ, ಪುತ್ತೂರಿನ ಗಾನಸರಸ್ವತಿ ಸಂಗೀತ ಕಲಾಶಾಲೆಯಿಂದ ಸನ್ಮಾನ, ಪುತ್ತೂರಿನ ಶ್ರೀಶಾರದಾ ಕಲಾಕೇಂದ್ರ ಟ್ರಸ್ಟ್‌ನಿಂದ `ರಜತಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.