ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆತ್ತಡ್ಕ ಎಂಬಲ್ಲಿ ಬಹುಗ್ರಾಮದ ಕುಡಿಯುವ ನೀರಿನ ಪೈಪು ಲೈನ್ ಅಳವಡಿಕೆಗೆ ತೋಡಿದ ಗುಂಡಿಯಿಂದಾಗಿ ಮಳೆ ನೀರಿಗೆ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ರಸ್ತೆ ಭಾಗವೂ ಕುಸಿತಕ್ಕೆ ಒಳಗಾಗಿತ್ತು. ಹೀಗೆ ಕುಸಿತಗೊಂಡ ಜಾಗಕ್ಕೆ ಕಲ್ಲು ಕಟ್ಟಿ ಅಥವಾ ಕಾಂಕ್ರೀಟ್ ಹಾಕಿ ತಡೆಗೋಡೆ ನಿರ್ಮಿಸುವ ಬದಲು ಗೋಣಿ ಚೀಲದೊಳಗೆ ಮಣ್ಣು ತುಂಬಿಸಿ ಅವುಗಳನ್ನು ಆಧಾರವಾಗಿಟ್ಟು ಅದರ ಮೇಲೆ ಕಾಂಕ್ರೀಟ್ ಮಾಡಲಾಗಿತ್ತು. ವಿಶಿಷ್ಟ ರೀತಿಯ ಈ ಕಾಂಕ್ರಿಟೀಕರಣವನ್ನು ಕಂಡ ಸಾರ್ವಜನಿಕರು ಬಹುಗ್ರಾಮ ಕುಡಿಯವ ನೀರಿನ ಯೋಜನೆಯ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಲ್ಲದೆ ಈ ಬಗ್ಗೆ ಸುದ್ದಿ ಕೂಡ ವರದಿ ಬಿತ್ತರಿಸಿತ್ತು.

ಮಲೆತ್ತಡ್ಕದಲ್ಲಿ ರಸ್ತೆ ಅಗೆದ ಭಾಗದಲ್ಲಿ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿ ರಸ್ತೆ ಬದಿಯು ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇತ್ತು, ಇದನ್ನು ತಪ್ಪಿಸುವ ಸಲುವಾಗಿ ಮಣ್ಣು ಜರಿದ ಭಾಗಕ್ಕೆ ಗೋಣಿ ಚೀಲದಲ್ಲಿ ಮಣ್ಣು ತುಂಬಿಸಿ ಅದನ್ನು ದಿಬ್ಬದ ಥರ ಇಟ್ಟು ಅದರ ಮೇಲೆ ಕಾಂಕ್ರೀಟ್ ಹಾಕಿ ಸಮತಟ್ಟು ಮಾಡಲಾಗಿತ್ತು. ಕಲ್ಲು ಕಟ್ಟಿ ತಡಗೋಡೆಯ ಥರ ಮಾಡಬೇಕಾದ ಜಾಗಕ್ಕೆ ಕೇವಲ ಗೋಣಿ ಚೀಲವನ್ನು ಆಧಾರವಾಗಿಸಿಕೊಂಡು ಅದರ ಮೇಲೆ ಕಾಂಕ್ರೀಟ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಘನ ವಾಹನಗಳು ರಸ್ತೆ ಬದಿಯಿಂದ ಹಾದು ಹೋಗುವಾಗ ಇದು ಜರಿದು ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ. ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಇಲ್ಲಿ ಗುತ್ತಿಗೆದಾರರ ಮಾಡಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಗೋಣಿ ಚೀಲಗಳನ್ನು ತೆರವುಗೊಳಿಸಿ ಕಬ್ಬಿಣದ ಸಲಾಕೆಗಳನ್ನು ಇಟ್ಟು ವ್ಯವಸ್ಥಿತ ರೀತಿಯಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ.