ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಗೊಬ್ಬರ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತೋಡಿಗೆ ಬಿದ್ದ ಘಟನೆ ಸೆ.14ರಂದು ತಡರಾತ್ರಿ ನಡೆದಿದೆ. ಮಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಮೀನು ಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿ ನೀರಕಟ್ಟೆ ತಿರುವಿನಲ್ಲಿ ಪಕ್ಕದ ತೋಡಿಗೆ ಬಿದ್ದಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಅಪಾಯಕಾರಿ ತಿರುವು:
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೀರಕಟ್ಟೆಯಲ್ಲಿನ ಈ ತಿರುವು ಬಹಳ ಅಪಾಯಕಾರಿಯಾಗಿದೆ. ಇಲ್ಲಿ ಯಾವುದೇ ತಡೆಗೋಡೆ ಇಲ್ಲ. ಬೃಹತ್ ವಾಹನಗಳೂ ಇಲ್ಲಿನ ತಿರುವಿನಲ್ಲಿ ಸಾಕಷ್ಟು ಸರ್ಕಸ್ ಮಾಡಿಕೊಂಡು ಹೋಗಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಪಕ್ಕದ ತೋಡಿಗೆ ಬೀಳುವುದು ಗ್ಯಾರಂಟಿ. ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇವೆ. ಇಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ ಅರಿವೇ ಇಲ್ಲದ ಚಾಲಕರು ತಮ್ಮ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ವಾಹನದ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಇದರಿಂದಾಗಿ ವಾಹನಗಳು ಪಕ್ಕದ ತೋಡಿಗೆ ಬೀಳುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಅಪಾಯಕಾರಿ ತಿರುವಿನಲ್ಲಿ ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.