ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆ

0

* ಹೊಸಗದ್ದೆ ಸಾಮಾಜಿಕ ಅರಣ್ಯ ನೆಡುತೋಪಿನಿಂದ ಬೆಲೆಬಾಳುವ ಮರಗಳ ಕಟಾವು ಪ್ರಕರಣ
* 2 ಸಾಮಾನ್ಯ ಸಭೆ ನಿರ್ಣಯಕ್ಕೂ ಸಿಗದ ಉತ್ತರ; ಸದಸ್ಯರ ಆಕ್ರೋಶ

ನೆಲ್ಯಾಡಿ: ಹೊಸಗದ್ದೆಯಲ್ಲಿರುವ ಸಾಮಾಜಿಕ ಅರಣ್ಯ ನೆಡುತೋಪಿನಿಂದ ಬೆಲೆಬಾಳುವ ಮರಗಳ ಕಟಾವು ಮಾಡಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.ನ 2 ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಯಾವುದೇ ಉತ್ತರ ಸಿಗದೇ ಇರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ. ಮುಂದಿನ ಗ್ರಾಮಸಭೆಯಲ್ಲಿ ಈ ಕುರಿತು ಸಂಪೂರ್ಣ ವಿವರ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.,ಅವರ ಅಧ್ಯಕ್ಷತೆಯಲ್ಲಿ ಸೆ.೨೦ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಬಜತ್ತೂರು ಗ್ರಾಮದ ಪೆರಿಯಡ್ಕ ಸಮೀಪದ ಹೊಸಗದ್ದೆ ಎಂಬಲ್ಲಿರುವ ಸಾಮಾಜಿಕ ಅರಣ್ಯ ನೆಡುತೋಪಿನಲ್ಲಿ ಗಾಳಿ ಮತ್ತು ಅಕೇಶಿಯಾ ಮರಗಳ ಕಟಾವು ಸಮಯದಲ್ಲಿ ಬೆಲೆಬಾಳುವ ಇನ್ನಿತರ ಮರಗಳನ್ನು ಕಟಾವು ಮಾಡಿ ಮಾರಾಟ ಮಾಡಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಕಳೆದ ಎರಡು ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಮರಗಳ ಮಾರಾಟ ಪ್ರಕರಣದ ಕುರಿತು ಗ್ರಾಮ ಪಂಚಾಯತ್‌ಗೆ ವರದಿ ನೀಡುವಂತೆ ಹಾಗೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಈ ಬಗ್ಗೆ ಈ ತನಕವೂ ಗ್ರಾ.ಪಂ.ಯಾವುದೇ ಮಾಹಿತಿ ನೀಡಿಲ್ಲ. ಅರಣ್ಯ ಇಲಾಖೆ ಗ್ರಾಮ ಪಂಚಾಯತ್ ನಿರ್ಣಯವನ್ನು ಕಡೆಗಣಿಸಿರುವ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಈ ಬಗ್ಗೆ ಮುಂದಿನ ತಿಂಗಳು ನಡೆಯುವ ಗ್ರಾಮಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲು ಸದಸ್ಯರ ಅಭಿಪ್ರಾಯದಿಂದ ನಿರ್ಣಯಿಸಲಾಯಿತು.

ಬ್ಯಾರಿಕೇಡ್ ಅಳವಡಿಕೆಗೆ ಮನವಿ:
ಬಜತ್ತೂರು ಗ್ರಾಮದ ಮುದಳೆಗುಂಡಿ ಗಣೇಶ ಕಟ್ಟೆ ಬಳಿ ಶಾಲಾ ಮಕ್ಕಳು ಹೆದ್ದಾರಿ ದಾಟಿ ಶಾಲೆಗಳಿಗೆ ಹೋಗಬೇಕಾಗಿದೆ. ಸದ್ರಿ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಮಕ್ಕಳಿಗೆ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಇಲ್ಲಿ ಅಪಘಾತಗಳೂ ನಡೆಯುತ್ತಿವೆ. ಆದ್ದರಿಂದ ಇಲ್ಲಿ ರಸ್ತೆಯ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ತ್ಯಾಜ್ಯ ಎಸೆಯದಂತೆ ಕ್ರಮ:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಆಯ್ದ ಸ್ಥಳಗಳಲ್ಲಿ ಎಚ್ಚರಿಕೆ ಸೂಚನಾ ಫಲಕ ಅಳವಡಿಸುವಂತೆ ಸದಸ್ಯರು ಒತ್ತಾಯಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಅವರಿಗೆ ಪಂಚಾಯತ್‌ನಿಂದ ದಂಡ ವಿಧಿಸುವಂತೆ ಹಾಗೂ ತ್ಯಾಜ್ಯ ಎಸೆಯುವವರನ್ನು ಸಾರ್ವಜನಿಕರು ಕಂಡಲ್ಲಿ ಫೋಟೋ ಸಮೇತ ಗ್ರಾಮ ಪಂಚಾಯಿತಿಗೆ ತಿಳಿಸುವಂತೆ ಸೂಚಿಸಲು ನಿರ್ಣಯಿಸಲಾಯಿತು.

ಸಬ್ ಸ್ಟೇಷನ್‌ಗೆ ಜಾಗ ಕಾದಿರಿಸಲು ನಿರ್ಣಯ:
ಬಜತ್ತೂರು ಗ್ರಾಮದ ಸರ್ವೆ ನಂಬ್ರ 64-1ಎಪಿ೧ರಲ್ಲಿನ ಸರಕಾರಿ ಜಾಗದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಜಮೀನು ಕಾದಿರಿಸುವ ಸಂಬಂಧ ಕಂದಾಯ ಇಲಾಖೆಗೆ ಬರೆದುಕೊಳ್ಳಲು ಹಾಗೂ ಈ ಬಗ್ಗೆ ಪಂಚಾಯತ್‌ನಿಂದ ನಿರಾಕ್ಷೇಪಣಾ ದೃಢಪತ್ರ ನೀಡಲು ನಿರ್ಣಯಿಸಲಾಯಿತು.

ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ, ಸದಸ್ಯರುಗಳಾದ ಸಂತೋಷ್‌ಕುಮಾರ್, ಗಂಗಾಧರ ಪಿ.ಎನ್., ಉಮೇಶ್ ಓಡ್ರಪಾಲು, ಗಂಗಾಧರ ಕೆ.ಎಸ್., ಮಾಧವ ಪೂಜಾರಿ, ಮೋನಪ್ಪ ಗೌಡ, ನಝೀರ್ ಬೆದ್ರೋಡಿ, ಅರ್ಪಿತಾ ರೈ, ಪ್ರೆಸಿಲ್ಲಾ ಡಿ.ಸೋಜ, ಭಾಗೀರಥಿ, ವಿಮಲ, ರತ್ನ ಸಭೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಡಿ., ಸರಕಾರದ ಸುತ್ತೋಲೆಗಳನ್ನು ಸಭೆಗೆ ಒದಿ ಹೇಳಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here