ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ವಾಣಿಜ್ಯ ಸಂಕೀರ್ಣ, ಕಚೇರಿ `ರೈತ ಸೌಧ’ ಉದ್ಘಾಟನೆ

0
  • ಪಿಎಲ್‌ಡಿ ಬ್ಯಾಂಕ್‌ನಿಂದ ಕೃಷಿಕನ ಬದುಕು ಬೆಳಗಿದೆ-ನಳಿನ್ ಕುಮಾರ್ ಕಟೀಲ್
  • ಪಿಎಲ್‌ಡಿ ಬ್ಯಾಂಕಿನಿಂದ ರೈತನಿಗೆ ಆರ್ಥಿಕ ಶಕ್ತಿ– ಅಂಗಾರ
  • ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಬ್ಯಾಂಕ್– ಮಠಂದೂರು

ಪುತ್ತೂರು:ಸ್ವಾತಂತ್ಯ ಪೂರ್ವದಲ್ಲಿ ಪುತ್ತೂರಿನಲ್ಲಿ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರವರಿಂದ ಸ್ಥಾಪನೆಗೊಂಡು ಬಳಿಕದ ದಿನಗಳಲ್ಲಿ ರೈತರ ಕೃಷಿಕಾರ್‍ಯ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕನ್ನು ಉನ್ನತಮಟ್ಟಕ್ಕೆ ಕೊಂಡೊಯ್ದ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನಿಂದ ಕೃಷಿಕನ ಬದುಕು ಬೆಳಗಿದೆ ಎಂದು ದ.ಕ.ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ರೂ.೨.೨೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ, ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿಯನ್ನೊಳಗೊಂಡ `ರೈತ ಸೌಧ’ಕಟ್ಟಡವನ್ನು ಸೆ.೨೪ರಂದು ಅವರು ಉದ್ಘಾಟಿಸಿ, ಬಳಿಕ ಪುತ್ತೂರು ಕಿಲ್ಲೆ ಮೈದಾನದ ಮೊಳಹಳ್ಳಿ ಶಿವರಾಯ ವೇದಿಕೆಯಲ್ಲಿ ಜರಗಿದ ಸಭಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಬಡ ಕೃಷಿಕನನ್ನು ಸದೃಢಗೊಳಿಸಬೇಕು ಎಂಬ ನೆಲೆಯಲ್ಲಿ ನಮ್ಮ ಹಿರಿಯರು ಸಹಕಾರ ಮನೋಭಾವದಲ್ಲಿ ಪಿಎಲ್‌ಡಿ ಸಂಸ್ಥೆಯನ್ನು ಹುಟ್ಟು ಹಾಕಿಸಿದರು.ದೇಶದ ಸಹಕಾರ ಕ್ಷೇತ್ರಕ್ಕೆ ದ.ಕ.ಜಿಲ್ಲೆಯ ಕೊಡುಗೆ ಅಪೂರ್ವವಾದದ್ದು, ಬ್ರಿಟಿಷರ ಕಾಲದಲ್ಲಿ ನಮ್ಮ ಹಿರಿಯರಿಂದ ಪ್ರಾರಂಭಗೊಂಡ ಸಹಕಾರ ಚಳುವಳಿಯಿಂದ ಜನರಲ್ಲಿ ಜಾಗೃತಿ ಆಗಿದೆ.ಕೇಂದ್ರ ಸರಕಾರ ಆರಂಭ ಮಾಡಿದ ಜನಧನ್ ಯೋಜನೆ ದ,ಕ.ಜಿಲ್ಲೆಯಲ್ಲಿ ನೂರಕ್ಕೆ ನೂರು ಯಶಸ್ವಿಯಾಗಲು,ಇಲ್ಲಿ ಈ ಯೋಜನೆ ಬರುವ ಮೊದಲೇ ಸಹಕಾರ ಸಂಸ್ಥೆಗಳು ಶೇ.೮೦ರಷ್ಟು ಮಂದಿಗೆ ಬ್ಯಾಂಕ್ ಖಾತೆಯನ್ನು ಮಾಡಿರುವುದು ಕಾರಣ ಎಂದರು.ದ.ಕ.ಜಿಲ್ಲೆಯ ಕೃಷಿಕರು ಪ್ರಯೋಗಶೀಲರು, ಭತ್ತ ಬೆಳೆಯುತ್ತಿದ್ದ ರೈತ ಅಡಿಕೆ ಕೃಷಿಯಿಂದ ಲಾಭ ಎಂದು ಕಂಡಾಗ ಅದರತ್ತ ಮುಖಮಾಡಿದ, ಆ ಬಳಿಕ ಗುಡ್ಡ ಜಾಗದಲ್ಲಿ ರಬ್ಬರ್ ಕೃಷಿಯನ್ನು ಮಾಡುವ ಯೋಜನೆ ರೂಪಿಸಿದ, ಈ ಭಾಗದ ರೈತರು ತಮ್ಮ ಕೃಷಿಯಲ್ಲಿ ಪ್ರಯೋಗಶೀಲತೆಯಿಂದ ಬೆಳೆದಿದ್ದಾರೆ, ಇವರಿಗೆಲ್ಲ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಆರಂಭದ ಅಧ್ಯಕ್ಷ ಮೊಳಹಳ್ಳಿ ಶಿವರಾಯರಿಂದ ಹಿಡಿದು ಈಗಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡರ ತನಕ ಕೃಷಿಕನ ಏಳಿಗೆಗಾಗಿ ಪಿಎಲ್‌ಡಿ ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯವನ್ನು ನೀಡಿ, ಅವರ ಜೀವನವನ್ನು ಉನ್ನತ ಮಟ್ಟಕ್ಕೆ ತಲುಪಿಸಿದ ಸಹಕಾರಿಗಳಿಗೆ ಜನರು ಕೃತಜ್ಞರಾಗಿದ್ದಾರೆ ಎಂದು ಕಟೀಲ್ ಹೇಳಿದರು.


ಭಾಸ್ಕರ್ ಎಸ್ ಗೌಡ ಟೀಮ್‌ನ ಅದ್ಭುತ ಕೆಲಸ: ಪಾರದರ್ಶಕವಾದ ಆಡಳಿತವನ್ನು ನೀಡಿ, ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಮತ್ತು ಅವರ ಟೀಮ್ ಅದ್ಭುತವಾದ ಕೆಲಸವನ್ನು ಮಾಡಿ ತೋರಿಸಿದೆ.ಈ ಬ್ಯಾಂಕ್ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದ ನಳಿನ್ ಕುಮಾರ್ ಕಟೀಲ್,ರಾಜ್ಯ ಬಿಜೆಪಿ ಸರಕಾರ ರೈತ ಪರ ಚಿಂತನೆಯಿರುವ ಸರಕಾರ, ಯಡಿಯೂರಪ್ಪ ಕಾಲದಲ್ಲಿ ರೈತರಿಗಾಗಿ ಬಜೆಟ್ ಮಂಡನೆ ಮಾಡಿದೆ.ರೈತರ ಸಾಲವನ್ನು ಮನ್ನಾ ಮಾಡಿದೆ.ಬ್ಯಾಂಕಿಂಗ್ ವ್ಯವಹಾರದಲ್ಲಿ ಶ್ರೀಮಂತ ಮತ್ತು ಬಡವ ಎಂಬ ಭೇದವಿಲ್ಲದೇ ಎಲ್ಲರಿಗೂ ಸಮಾನವಾದ ಅವಕಾಶವನ್ನು ನರೇಂದ್ರ ಮೋದಿಯವರ ಕೇಂದ್ರ ಸರಕಾರ ನೀಡಿದೆ.ಹಳ್ಳಿ ಹಳ್ಳಿಯ ಜನ ಬ್ಯಾಂಕಿಂಗ್ ವ್ಯವಹಾರದಲ್ಲಿ ಎಟಿಎಂ ಬಳಕೆ ಮಾಡಿ ಕ್ಷಿಪ್ರವಾಗಿ ಹಣಕಾಸು ವ್ಯವಹಾರವನ್ನು ಪಡೆಯುವ ಕಾರ್‍ಯವನ್ನು ಮಾಡಿದ್ದಾರೆ.ಮೋದಿ ಸರಕಾರ ಸಹಕಾರ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ.ರಾಜ್ಯದ ಬಸವರಾಜ್ ಬೊಮ್ಮಾಯಿ ಸರಕಾರ ಹೈನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ,ಹೈನುಗಾರಿಕಾ ಸಹಕಾರ ಸಂಘದ ಸ್ಥಾಪನೆಯನ್ನು ಮಾಡುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಹೈನುಗಾರರನ್ನು ಮತ್ತಷ್ಟು ಬೆಳೆಸುವುದು ಸರಕಾರದ ಉzಶವಾಗಿದೆ ಎಂದು ಹೇಳಿದರು.

ಬ್ಯಾಂಕಿಂಗ್ ಕ್ಷೇತ್ರಕ್ಕೆ ದ.ಕ.ಜಿಲ್ಲೆಯ ಕೊಡುಗೆ ಅಪಾರ: ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ದ.ಕ,ಜಿಲ್ಲೆಯ ಪಾಲಿಗೆ ಇದೆ.ಅದೇ ರೀತಿ ದ.ಕ.ಜಿಲ್ಲೆ ಸಹಕಾರ ಕ್ಷೇತ್ರದ ಕಾಶಿಯಾಗಿ ಹೆಸರನ್ನು ಪಡೆದಿರುವುದು ನಮ್ಮ ಜಿಲ್ಲೆಯ ಕೀರ್ತಿಗೆ ಮತ್ತೊಂದು ಕಿರೀಟವಾಗಿದ್ದು ಬ್ಯಾಂಕಿಂಗ್ ಕ್ಷೇತ್ರಕ್ಕೆ ದ.ಕ.ಜಿಲ್ಲೆಯ ಕೊಡುಗೆ ಅಪಾರ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್, ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಮನವಿಯಂತೆ ಈ ಬ್ಯಾಂಕಿಗೆ ನನ್ನ ಸಂಸದ ನಿಧಿಯಿಂದ ಕಂಪ್ಯೂಟರ್ ಖರೀದಿಗೆ ಅನುದಾನ ಒದಗಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಪಿಎಲ್‌ಡಿ ಬ್ಯಾಂಕ್ ರೈತನ ಆರ್ಥಿಕ ಶಕ್ತಿ- ಎಸ್ ಅಂಗಾರ: ಬ್ಯಾಂಕ್‌ನ ನೂತನ ಕಚೇರಿಯನ್ನು ಉದ್ಘಾಟನೆಗೈದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಎಸ್.ಅಂಗಾರರವರು ಮಾತನಾಡಿ ೧೯೩೮ರಲ್ಲಿ ಪ್ರಾರಂಭವಾದ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನಿಂದ ರೈತಾಪಿ ವರ್ಗವು ಆರ್ಥಿಕವಾಗಿ ಬೆಳೆದು ನಿಂತಿದೆ.ರೈತರು ಆರ್ಥಿಕವಾಗಿ ಮುಂದೆ ಬರಲು ಕೃಷಿಯೊಂದಿಗೆ ಪರ್ಯಾಯವಾಗಿ ಮೀನುಗಾರಿಕೆ ಕೃಷಿಯನ್ನು ಮಾಡಬೇಕು ಎಂದು ಹೇಳಿದರು.

ಮೀನು ಕೃಷಿಯಿಂದ ಅಡಿಕೆ ಕೃಷಿಗಿಂತ ಎರಡು ಪಟ್ಟು ಲಾಭ: ಅಡಿಕೆ ಕೃಷಿಯಿಂದ ಎರಡು ಪಟ್ಟು ಲಾಭ ಮೀನು ಕೃಷಿಯಿಂದ ಸಿಗುತ್ತದೆ.ಮೀನು ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳಿನಿಂದ ಮೀನುಗಾರಿಕೆ ವೃತ್ತಿಯನ್ನು ಮಾಡುವವರೇ ೩೦೦ ವಾಹನಗಳ ಮೂಲಕ ಗ್ರಾಮ ಗ್ರಾಮಕ್ಕೆ ತೆರಳಿ ಮೀನು ಮಾರಾಟ ಮಾಡುವ ಕಾರ್‍ಯಕ್ಕೆ ಚಾಲನೆ ದೊರೆಯಲಿದೆ.ಈ ಮೂಲಕ ಉದ್ಯೋಗ ಸೃಷ್ಟಿಯ ಜೊತೆಗೆ ಮೀನುಗಾರರೂ ಸ್ವಾವಲಂಬಿ ಜೀವನ ಸಾಧಿಸಲು ಅನುಕೂಲವಾಗುತ್ತದೆ ಎಂದು ಹೇಳಿದ ಸಚಿವ ಎಸ್.ಅಂಗಾರ ಅವರು, ರೈತರು ಅಡಿಕೆ ಕೃಷಿಯ ಜೊತೆಗೆ ಮೀನು ಕೃಷಿಯನ್ನು ಮಾಡಲು ಮುಂದೆ ಬಂದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.ಪುತ್ತೂರು ಪಿಎಲ್‌ಡಿ ಬ್ಯಾಂಕ್ ಸುಂದರವಾದ ಕಟ್ಟಡವನ್ನು ನಿರ್ಮಿಸುವ ಮೂಲಕ ಈ ಭಾಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ.ಕೃಷಿ ಕಾರ್‍ಯಕ್ಕೆ ಪುತ್ತೂರು ಪಿಎಲ್‌ಡಿ ಬ್ಯಾಂಕ್ ನೀಡುತ್ತಿರುವ ಸಹಕಾರವನ್ನು ರೈತರು ಸಂಪೂರ್ಣವಾಗಿ ಪಡೆದುಕೊಂಡು ಅಭಿವೃದ್ಧಿ ಹೊಂದುವಂತಾಗಬೇಕು ಎಂದು ಹೇಳಿದರು.

ರೈತರ ಆರ್ಥಿಕ ಶಕ್ತಿಗೆ ಪ್ರೋತ್ಸಾಹ ನೀಡಿದ ಪಿಎಲ್‌ಡಿ ಬ್ಯಾಂಕ್- ಸಂಜೀವ ಮಠಂದೂರು: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ರೈತರ ಅರ್ಥಿಕ ಶಕ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಭಾಗದ ರೈತ ಸ್ನೇಹಿಯಾಗಿ ಕೆಲಸವನ್ನು ಮಾಡಿದೆ.೮೪ ವರ್ಷಗಳಿಂದ ಕಾರ್‍ಯ ನಿರ್ವಹಿಸುತ್ತಾ ಬಂದಿರುವ ಪುತ್ತೂರು ಪಿಎಲ್‌ಡಿ ಬ್ಯಾಂಕ್ ೪ ಅಂತಸ್ತುಗಳ ಸುಂದರವಾದ ಕಟ್ಟಡವನ್ನು ನಿರ್ಮಿಸಿದೆ, ರೈತರ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಸಾಲ ಸೌಲಭ್ಯವನ್ನು ನೀಡಿ, ಅವರ ಅರ್ಥಿಕ ಶಕ್ತಿಗೆ ಬೆಂಬಲ ನೀಡುವ ಮೂಲಕ ಪುತ್ತೂರು ಪಿಎಲ್‌ಡಿ ಬ್ಯಾಂಕ್ ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿದೆ.ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಮತ್ತು ನಿರ್ದೇಶಕರುಗಳ ತಂಡ ಮಾಡುತ್ತಿರುವ ಉತ್ತಮ ಸೇವೆಗಳು ನಿರಂತರವಾಗಿ ರೈತಾಪಿ ವರ್ಗಕ್ಕೆ ದೊರೆಯಲಿ ಎಂದು ಹೇಳಿದರು.

ಕರ್ನಾಟಕ ಸರಕಾರ ರಾಜ್ಯದಲ್ಲಿ ೩೩ ಲಕ್ಷ ರೈತರಿಗೆ ೩೫ ಸಾವಿರ ಕೋಟಿ ರೂ.ಸಾಲವನ್ನು ಶೇ.೩ ಮತ್ತು ಶೂನ್ಯ ಬಡ್ಡಿಯಲ್ಲಿ ಸಹಕಾರ ಸಂಸ್ಥೆಗಳ ಮೂಲಕ ನೀಡಿದೆ.ಯಡಿಯೂರಪ್ಪ ಸರಕಾರ ರೈತರ ೧೬೫೦೦ ಕೋಟಿ ರೂ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರಿಗೆ ಅರ್ಥಿಕ ಶಕ್ತಿ ನೀಡಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರವು ಕ್ಷೀರಾಭಿವೃದ್ಧಿ ಬ್ಯಾಂಕ್ ಸ್ಥಾಪನೆಗೆ ಮುನ್ನೂರು ಕೋಟಿ ರೂ.ಹಣವನ್ನು ಬಜೆಟ್‌ನಲ್ಲಿ ಕಾದಿರಿಸಿದೆ, ಇದರಿಂದ ಹಳ್ಳಿ ಹಳ್ಳಿಯ ಹೈನುಗಾರರಲ್ಲಿ ಹೈನುಗಾರಿಕೆ ಉದ್ಯಮ ನಡೆಸಲು ಅರ್ಥಿಕ ಶಕ್ತಿಯನ್ನು ತುಂಬುವ ಕಾರ್‍ಯ ನಡೆಯಲಿದೆ ಎಂದು ಮಠಂದೂರು ಹೇಳಿದರು.ರೈತರ ಅನುಕೂಲಕ್ಕಾಗಿ ಫಸಲ್ ಭಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ವರದಾನವಾಗಿದೆ.ರೈತರ ಮಕ್ಕಳಿಗೆ ೬ ಸಾವಿರದಿಂದ ೧೧ ಸಾವಿರ ತನಕ ವಿದ್ಯಾನಿಧಿ ಸ್ಕಾಲರ್‌ಶಿಪ್ ನೀಡುವ ಯೋಜನೆಯನ್ನು ರಾಜ್ಯ ಸರಕಾರ ಪ್ರಾರಂಭಿಸಿದ್ದು, ಇದರಿಂದ ರೈತರ ಮಕ್ಕಳು ಐಟಿಬಿಟಿ ಶಿಕ್ಷಣವನ್ನು ಪಡೆಯಲು ಸಹಕಾರಿ ಆಗಲಿದೆ ಎಂದರು.


ಯಶಸ್ವಿನಿ ಯೋಜನೆ ಮರು ಜಾರಿ: ರಾಜ್ಯ ಸರಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಲಿದ್ದು, ಇದಕ್ಕಾಗಿ ನೂರು ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಕಾದಿರಿಸಲಾಗಿದೆ ಎಂದು ಮಠಂದೂರು ಹೇಳಿದರು.

ಬ್ಯಾಂಕಿನ ಭದ್ರತಾ ಕೊಠಡಿಯನ್ನು ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಿದರು.ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕಾರ್‍ಯದರ್ಶಿ ಮಹೇಶ್‌ರವರು ಕಂಪ್ಯೂಟರ್ ವಿಭಾಗವನ್ನು ಉದ್ಘಾಟನೆಗೈದರು.

ಸನ್ಮಾನ ಸಮಾರಂಭ: ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ಬಿ.ಆರ್.ದೇವಪ್ಪ ಗೌಡ, ಎನ್.ನಾಗಣ್ಣ ಗೌಡ, ಕಡಮಜಲು ಸುಭಾಸ್ ರೈ, ಬಿ.ರಾಮ ಭಟ್ ಹಸಂತಡ್ಕ, ಕೆ.ಎಸ್.ರಂಗನಾಥ ರೈ ಗುತ್ತು, ಎ.ಬಿ.ಮನೋಹರ್ ರೈ,ಮಾಜಿ ವ್ಯವಸ್ಥಾಪಕರುಗಳಾದ ಹೊನ್ನಪ್ಪ ಗೌಡ, ಧನಕೀರ್ತಿ ಶೆಟ್ಟಿ, ಜಯಶ್ರೀ ಕೆ.ರೈ, ಆಲ್ಬರ್ಟ್ ಲೂಯಿಸ್, ಯಶೋಧರ್ ಜೈನ್, ದಯಾಮಣಿ ಕೆ.ವಿ ಹಾಗೂ ಬಾಲಕೃಷ್ಣ ಪಿ. ಮತ್ತು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬ್ಯಾಂಕಿನ ಸಿಬ್ಬಂದಿಗಳಿಗೆ ಗೌರವಾರ್ಪಣೆ: ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಎಂ, ಕಡಬ ಶಾಖಾ ವ್ಯವಸ್ಥಾಪಕಿ ಸುಮನ ಎಂ, ಸಿಬ್ಬಂದಿಗಳಾದ ವಿನಯ ಕುಮಾರ್ ಕೆ.,ರೊನಾಲ್ಡ್ ಮಾರ್ಟಿಸ್,ಆರತಿ ಟಿ.ಕೆ, ಸುರೇಶ್ ಪಿ, ವೇಣು ಭಟ್, ಭರತ್ ಟಿ, ಹರೀಶ್ ಗೌಡ, ವಿಜಯ ಭಟ್, ವಿನಯಕುಮಾರ್ ಗೌಡ, ಶಿವಪ್ರಸಾದ್, ಮನೋಜ್ ಕುಮಾರ್, ಮನೋಜ್ ಎ, ಪಿಗ್ಮಿ ಸಂಗ್ರಾಹಕರಾದ ಆರತಿ ಎಂ.ವಿ.ರಮೇಶ್ ಮತ್ತು ಬ್ಯಾಂಕಿನ ನಿವೃತ್ತ ಸಿಬ್ಬಂಧಿಗಳನ್ನು ಗೌರವಿಸಲಾಯಿತು.


ಶಾಸಕರಿಗೆ ಸನ್ಮಾನ: ಬ್ಯಾಂಕಿನ ಕಟ್ಟಡ ನಿರ್ಮಾಣ ಕಾರ್‍ಯದಲ್ಲಿ ವಿವಿಧ ರೀತಿಯ ಸಹಕಾರ ನೀಡಿದ ಶಾಸಕ ಸಂಜೀವ ಮಠಂದೂರುರವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ಕಟ್ಟಡದ ಗುತ್ತಿಗೆದಾರರಿಗೆ ಸನ್ಮಾನ: ಬ್ಯಾಂಕಿನ ನೂತನ ಕಟ್ಟಡದ ಗುತ್ತಿಗೆದಾರರಾದ ದಕ್ಷ ಕನ್‌ಸ್ಟ್ರಕ್ಷನ್‌ನ ರವೀಂದ್ರರವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ರಾಕೇಶ್ ರೈ ಕೆಡೆಂಜಿರವರಿಗೆ ಗೌರವಾರ್ಪಣೆ: ಕಾರ್‍ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆಗೈದ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರನ್ನು ಬ್ಯಾಂಕಿನ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೆಶಕ ಬಾಲಸುಬ್ರಹ್ಮಣ್ಯ ಕೆ.ಎಸ್‌ರವರು ಬ್ಯಾಂಕಿನ ಸಭಾಂಗಣವನ್ನು ಉದ್ಘಾಟನೆಗೈದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ದ.ಕ ಮತ್ತು ಉಡುಪಿ ಜಿಲ್ಲಾ ನಿರ್ದೇಶಕ,ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರೂ ಆಗಿರುವ ರಾಜಶೇಖರ್ ಜೈನ್,ಕ.ರಾ.ಸ.ಕೃ ಮತ್ತು ಗ್ರಾ.ಅ.ಬ್ಯಾಂಕ್‌ನ ಮಂಗಳೂರು ಶಾಖೆಯ ಜಿಲ್ಲಾ ವ್ಯವಸ್ಥಾಪಕ ಮುತ್ತುರಾಜ್‌ರವರು ಉಪಸ್ಥಿತರಿದ್ದರು.

ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ,ನಿರ್ದೇಶಕರುಗಳಾದ ಎ.ಬಿ.ಮನೋಹರ್ ರೈ, ನಾರಾಯಣ ಕನ್ಯಾನ, ಯುವರಾಜ ಪೆರಿಯತ್ತೋಡಿ, ಪ್ರವೀಣ್ ರೈ ಪಂಜೊಟ್ಟು, ದೇವಯ್ಯ ಗೌಡ, ಉಮೇಶ್ ನಾಕ್, ಧರ್ಣಪ್ಪ ಮೂಲ್ಯ, ಮೀನಾಕ್ಷಿ, ಸೋಮಪ್ಪ ನಾಯ್ಕ, ಶೀನ ನಾಯ್ಕರವರು ಉಪಸ್ಥಿತರಿದ್ದರು.ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಸ್ ಗೌಡರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಪುತ್ತೂರು ಪಿಎಲ್‌ಡಿ ಬ್ಯಾಂಕ್ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ೬೯ ಗ್ರಾಮಗಳನ್ನು ಹೊಂದಿದ್ದು, ರೈತರ ಕೃಷಿ ಅಭಿವೃದ್ಧಿಗೆ ಕ್ಲಪ್ತ ಸಮಯದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ.ಇದೀಗ ಬ್ಯಾಂಕಿನ ನೂತನ ವಾಣಿಜ್ಯ ಸಂಕೀರ್ಣ ಮತ್ತು ಕಚೇರಿ ಉದ್ಘಾಟನೆಗೊಂಡಿದೆ.ನೂತನ ಕಟ್ಟಡ ನಿರ್ಮಾಣದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ರಂಗನಾಥ ರೈ ಗುತ್ತು ಮತ್ತು ಮನೋಹರ್ ರೈಯವರ ಅಪಾರ ಶ್ರಮ ಇದೆ ಎಂದು ಅವರು ಹೇಳಿದರು.ಬ್ಯಾಂಕಿನ ವ್ಯವಸ್ಥಾಪಕ ಶೇಖರ್ ಎಂ.ವರದಿ ವಾಚಿಸಿದರು.ಬ್ಯಾಂಕಿನ ಲೆಕ್ಕಾಧಿಕಾರಿ ವಿನಯಕುಮಾರ್ ಕೆ.ವಂದಿಸಿದರು.ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾರ್‍ಯಕ್ರಮ ನಿರೂಪಿಸಿದರು.ರಾಜ್ಯ ಮಟ್ಟದ ಪ್ರತಿಭೆ ಗುರುಪ್ರಿಯಾ ಪ್ರಾರ್ಥನೆಗೈದರು.


ಕಾರ್‍ಯಕ್ರಮದ ಹೈಲೈಟ್ಸ್

ಆಗಮಿಸಿದ್ದ ಎಲ್ಲರಿಗೂ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಾರ್ವಾಕ ಸಿಂಗಾರಿ ಮೇಳದವರಿಂದ ಚೆಂಡೆವಾದನ ಮನ ಸೆಳೆಯಿತು. ಪಿಎಲ್‌ಡಿ ಬ್ಯಾಂಕ್ ಕಟ್ಟಡ ಉದ್ಘಾಟನೆಯ ಬಳಿಕ ಅಲ್ಲಿಂದ ಸಭಾ ಕಾರ್‍ಯಕ್ರಮ ನಡೆದ ಕಿಲ್ಲೆ ಮೈದಾನದ ತನಕ ಆಕರ್ಷಕ ಮೆರವಣಿಗೆ ನಡೆಯಿತು.

ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಯಶಸ್ವಿ ಕಾರ್‍ಯಕ್ರಮ
ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆದಿದೆ.ಅತ್ಯಂತ ಸುಂದರವಾಗಿ ಕಾರ್‍ಯಕ್ರಮ ನಡೆಯಲು ಕಾರಣಕರ್ತರಾದ ಪ್ರತಿಯೊಬ್ಬರಿಗೆ ಹೃದಯಪೂರ್ವಕ ನಮನಗಳುಭಾಸ್ಕರ್ ಎಸ್.ಗೌಡ ಇಚ್ಲಂಪಾಡಿ, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್ ಪುತ್ತೂರು

ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಿದ್ದು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದ್ದಿ ವತಿಯಿಂದ ಸಭಾ ಕಾರ್‍ಯಕ್ರಮದಲ್ಲಿ ಎಲ್‌ಇಡಿ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

LEAVE A REPLY

Please enter your comment!
Please enter your name here