ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪಿಂಡ ಪ್ರಧಾನ ಕಾರ್ಯಕ್ರಮ
- 717 ಮಂದಿಯಿಂದ ತಿಲ ಹೋಮ, ಪಿತೃ ತರ್ಪಣ
- 2 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಉಪ್ಪಿನಂಗಡಿ: ಮಹಾಲಯ ಅಮವಾಸ್ಯೆ ದಿನವಾದ ಸೆ. 25ರಂದು ದಕ್ಷಿಣಕಾಶಿ, ಗಯಾಪದ ಕ್ಷೇತ್ರ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ತಟದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾದಿಗಳು ಪೂರ್ವಜರನ್ನು ಸ್ಮರಿಸುವ ಪಿತೃಪಕ್ಷ ದಿನದ ಅಂಗವಾಗಿ ಅಗಲಿದ ತಮ್ಮ ತಮ್ಮ ಪಿತೃಗಳಿಗೆ ನಾರಾಯಣ ಬಲಿ, ಕನಿಷ್ಠ ಪಂಚಕ ಶಾಂತಿ, ತಿಲ ಹೋಮ, ಪಿಂಡ ಪ್ರಧಾನ, ಪಿತೃ ತರ್ಪಣ ವಿಧಿ ವಿಧಾನಗಳನ್ನು ನೆರವೇರಿಸಿದರು.
ನಸುಕಿನಿಂದಲೇ ದೇವಾಲಯಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ನೇತ್ರಾವತಿ ನದಿ ಸಂಗಮದಲ್ಲಿ ಮಿಂದು ಪುರೋಹಿತರ ಮುಖೇನ ತಮ್ಮ ತಮ್ಮ ಗತಿಸಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಪುನೀತರಾದರು. ಸುಮಾರು 717 ಮಂದಿ ತಮ್ಮ ಇಷ್ಠಾರ್ಥ ಸೇವೆ ನೆರವೇರಿಸಿದರು.
ರಾಜ್ಯದಾದ್ಯಂತ ಹಾಗೂ ಹೊರ ರಾಜ್ಯಗಳಿಂದಲೂ ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಿದ್ದು, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಹರಿರಾಮಚಂದ್ರ, ಸುನಿಲ್ ಆನಾವು, ರಾಮ ನಾಯ್ಕ್, ಪ್ರೇಮಲತಾ, ಹರಿಣಿ ರವೀಂದ್ರ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್, ಸಿಬ್ಬಂದಿಗಳಾದ ಪದ್ಮನಾಭ, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಮುಂಚೂಣಿಯಲ್ಲಿ ನಿಂತು ಆಗಮಿಸಿದ ಭಕ್ತ ಜನತೆಗೆ ಸುಲಲಿತ ಸೇವೆ ಒದಗಿಸುವಲ್ಲಿ ಸಹಕರಿಸಿದರು.