ಪುತ್ತೂರು: ಮೈಸೂರಿನಲ್ಲಿ ಸೆ. 24ರಂದು ನಡೆದ ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟೇರಿಯಟ್ ಹಾಗೂ ಅಸಿಸ್ಟೆಂಟ್ ಗವರ್ನರ್ಸ್ ಸಭೆಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಅಭಿಯಾನದ ಮಾಹಿತಿಯನ್ನು ನೀಡಲಾಯಿತು.
ಕ್ಲಬ್ ರೋಟರಿ ಪುತ್ತೂರು ಯುವದ ಪರವಾಗಿ ವಲಯ ಸೇನಾನಿ ಡಾ| ಹರ್ಷ ಕುಮಾರ್ ರೈ ಮಾತನಾಡಿ, ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ಬಳಿಕ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರದ ವ್ಯಾಪಕತೆ ಕಡಿಮೆಯಾಗಿದೆ. ಇದರಿಂದಾಗಿ ಜನರು ಒಂದಷ್ಟು ನೆಮ್ಮದಿಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅನುವಾಗಿದೆ ಎಂದರು.
ಸುದ್ದಿ ಜನಾಂದೋಲನ ವೇದಿಕೆಯ ಪುತ್ತೂರು ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಮಾತನಾಡಿ, 1985ರಲ್ಲಿ ಡಾ. ಯು.ಪಿ. ಶಿವಾನಂದ್ ಅವರು ಭ್ರಷ್ಟಾಚಾರ ವಿರುದ್ಧ ನಡೆಸಿದ್ದ ಹೋರಾಟವೇ ಸುದ್ದಿ ಬಿಡುಗಡೆಯ ಉಗಮಕ್ಕೆ ಕಾರಣವಾಯಿತು. ನಂತರ ನಿರಂತರವಾಗಿ ಒಂದಿಲ್ಲೊಂದು ಅಭಿಯಾನಗಳನ್ನು ನಡೆಸುತ್ತಾ, ಇದೀಗ ಮತ್ತೆ ಜನರ ಒತ್ತಾಯದ ಮೇರೆಗೆ ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಆಂದೋಲನಕ್ಕೆ ಅಧಿಕಾರಿಗಳಿಂದ, ಜನಪ್ರತಿನಿಧಿಗಳಿಂದ ಹಾಗೂ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತ್ಯುತ್ತಮ ಇಲಾಖೆಗಳನ್ನು ಮಾತ್ರವಲ್ಲ, ಆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತಮ ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ಆದ್ದರಿಂದ ಈ ಆಂದೋಲನವನ್ನು ತಮ್ಮ ಅನುಕೂಲತೆಗಳಿಗೆ ತಕ್ಕಂತೆ ರೋಟರಿ ಸಂಸ್ಥೆ ಮುನ್ನಡೆಸಿಕೊಂಡು ಹೋಗುವ ಅಗತ್ಯ ಇದೆ ಎಂದರು. ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೋಟರಿ ಜಿಲ್ಲೆ 3181 ಅಂದರೆ ದಕ್ಷಿಣ ಕನ್ನಡ, ಕೊಡಗು, ಚಾಮರಾಜಪೇಟೆ, ಮೈಸೂರು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.