ಪುತ್ತೂರು:ಜೆಡಿಎಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯು ಸೆ.27ರಂದು ಅಧ್ಯಕ್ಷ ಅಶ್ರಫ್ ಕಲ್ಲೇಗವರ ಅಧ್ಯಕ್ಷತೆಯಲ್ಲಿ ಮುಖ್ಯರಸ್ತೆಯ ಕೆ.ಪಿ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ, ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಧಾನಗಳಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಬಹಳಷ್ಟು ಅಸಮಾಧಾನಿತರಿದ್ದಾರೆ. ಹೀಗಾಗಿ ಅಸಮಾದಾನಿತರನ್ನು ಸಂಪರ್ಕಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು. ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿ ಮುಂದಿನ 15 ದಿನಗಳಲ್ಲಿ ಸಮಿತಿ ರಚಿಸಬೇಕು. ಎಲ್ಲಾ ಜಾತಿ, ಧರ್ಮದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸಮಿತಿ ರಚಿಸಬೇಕು. ಜನ ಸಾಮಾನ್ಯರನ್ನು ನಾಯಕರನ್ನಾಗಿ ಮಾಡಬೇಕು ಎಂದರು. ತಂಡಗಳಾಗಿ ಪ್ರತಿಮನೆಗಳನ್ನು ಸಂಪರ್ಕಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಯಾವುದೇ ರೀತಿಯ ಭಿನ್ನಮತ ಬಾರದ ರೀತಿಯಲ್ಲಿ ಪಕ್ಷ ಸಂಘಟಿಸಬೇಕು. ಮುಂದಿನ ಶಾಸಕ ಅಭ್ಯರ್ಥಿಯ ಬಗ್ಗೆ ಅಭಿಪ್ರಾಯ ನೀಡಬೇಕು. ಈ ಬಾರಿ ಮೂರನೇ ಅಭ್ಯರ್ಥಿಯ ಮೇಲೆ ಒಳವಿದ್ದು ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ರೈತರ ಸಾಲಮನ್ನಾ, ಕಡಿಮೆ ಬೆಲೆಯಲ್ಲಿ ಅಕ್ಕಿ, ಆರ್ಥಿಕ ನೆರವು ಸೇರಿದಂತೆ ಕುಮಾರ ಸ್ವಾಮಿಯವರು ನೀಡಿದ ಕೊಡುಗೆಗಳನ್ನು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಿ ಕುಮಾರ ಸ್ವಾಮಿಯವರಿಗೆ ಮತ ಕೇಳಬೇಕು ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು-ಇಬ್ರಾಹಿಂ ಗೋಳಿಕಟ್ಟೆ:
ಜೆಡಿಎಸ್ ರಾಜ್ಯ ನಾಯಕ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದಲ್ಲಿ ಈಗ ಆಡಳಿತ ನಡೆಸುತ್ತಿರುವಂತಹ ಭ್ರಷ್ಟಾಚಾರದ ಸರಕಾರ ಇತಿಹಾಸದಲ್ಲಿ ಬಂದಿಲ್ಲ. ನಮ್ಮದು ಭ್ರಷ್ಟಾಚಾರ ರಹಿತ ಆಡಳಿತ. ನಾವು ಭ್ರಷ್ಟಾಚಾರವನ್ನು ದೂರವಿಡಬೇಕು. ಎಲ್ಲಿ ಭ್ರಷ್ಟಾಚಾರ ನಡೆದರೂ ಅದರ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸಿ ಧ್ವನಿಡತ್ತಬೇಕು. ಬಿಜೆಪಿ ಹೋರಾಟದಲ್ಲಿ ಆಡಳಿತಕ್ಕೆ ಬಂದರೂ ಬಳಿಕ ತನ್ನ ಹೋರಾಟದ ಹಾದಿಯನ್ನು ಮರೆತು ಆಡಳಿತ ನಡೆಸುತ್ತಿದೆ. ಈ ಬಾರಿ ಜೆಡಿಎಸ್ 99 ಸ್ಥಾನ ಪಡೆಯುವುದಾಗಿ ಮಾಧ್ಯಮಗಳಲ್ಲಿ ವರದಿ ಮಾಡಿದೆ. ಹೀಗಾಗಿ ಕುಮಾರ ಸ್ವಾಮಿ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ರಾಜ್ಯದಲ್ಲಿ ಬಿಜೆಪಿ ಮತಗಳಿಸಿ ಆಡಳಿತಕ್ಕೆ ಬಂದಿಲ್ಲ. ಈಗ ಅನೈತಿಕ ಸರಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಎಷ್ಟೇ ಹೋರಾಟ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಈ ಬಾರಿ ಕಿಂಗ್:
ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಪ್ ಕಲ್ಲೇಗ ಮಾತನಾಡಿ, ಕುಮಾರ ಸ್ವಾಮಿಯವರನ್ನು ಈ ಭಾರಿಯೂ ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಾರಿ ಜೆಡಿಎಸ್ ಕಿಂಗ್ ಆಗಲಿದೆ. ಕಿಂಗ್ ಮೇಕರ್ ಅಲ್ಲ. ಸ್ಪಷ್ಟ ಬಹುತೇಕದಿಂದ ಆಡಳಿತಕ್ಕೆ ಬರಲಿದೆ. ಆಗ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಲ ನೀಡಲಾಗುವುದು. ಕುಮಾರ ಸ್ವಾಮಿಯವರು ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದರೂ ಭ್ರಷ್ಟಾಚಾರವಿಲ್ಲದ ಆಡಳಿತ ನಡೆಸಿದ್ದಾರೆ.ನಮ್ಮಲ್ಲಿ ಕಾರ್ಯಕರ್ತರು ಕಡಿಮೆಯಿದ್ದರೂ ಇರುವವರು ನಿಷ್ಟಾವಂತರಾಗಿದ್ದಾರೆ ಎಂದರು.
ಭ್ರಷ್ಟಾಚಾರದ ವಿರುದ್ಧ ಸುದ್ದಿಯ ಹೋರಾಟಕ್ಕೆ ಧ್ವನಿಗೂಡಿಸಬೇಕು:
ಭ್ರಷ್ಟಾಚಾರದ ವಿರುದ್ಧ ಸುದ್ದಿಯವರು ಹೋರಾಟ ಮಾಡುತ್ತಿದ್ದಾರೆ. ಇದು ಸುದ್ದಿಯವರಿಗೆ ಸೀಮಿತವಲ್ಲ. ನಾವು ಇದಕ್ಕೆ ನಾವೆಲ್ಲರೂ ಧ್ವನಿಗೂಡಿಸಬೇಕು. ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರಕಾರ ನಾಮಫಲಕ ಅಳವಡಿಸಲು ಮುಂದಾಗಿದೆ. ಆದರೆ ನಾಮಫಕಲ ಮೊದಲೇ ಇದೆ. ಅದರ ಎದುರೇ ಲಂಚ ಪಡೆಯುತ್ತಿದ್ದಾರೆ. ಪಿಎಸ್‌ಐ ಹುದ್ದೆ ೮೦ಲಕ್ಷ ಲಂಚ ನೀಡಿದರೆ ಅವನು ದುಡಿದು ಭರ್ತಿ ಮಾಡಲು ಸಾಧ್ಯವಿದೆಯಾ. ಆಗ ಲಂಚ ಪಡೆಯಲೇಬೇಕು. ಇದನ್ನು ಸೃಷ್ಟಿ ಮಾಡಿರುವುದೇ ಸರಕಾರ. ಹಿಂದೆ ಕಾಂಗ್ರೆಸ್ ಸರಕಾರ ಮಾಡಿದರೆ ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಶೇ.10 ಎಂದು ಭ್ರಷ್ಟಾಚಾರದ ಆರೋಪವಿದ್ದರೆ ಈಗ ಬಿಜೆಪಿಯವರದ್ದು ಶೇ.40ಆಗಿದೆ. ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ನಡೆಸಬೇಕು. ಇಲ್ಲಿಯ ಶಾಸಕರು ನಿಷ್ಕ್ರೀಯರಾಗಿದ್ದಾರೆ ಎಂದು ಬಿಜೆಪಿಯವರೇ ಆರೋಪಿಸುತ್ತಿದ್ದು ಅವರ ಬದಲಾವಣೆಯನ್ನು ಬಿಜೆಪಿಯವರು ಬಯಸಿದ್ದಾರೆ ಎಂದು ಅಶ್ರಫ್ ಕಲ್ಲೇಗ ಆರೋಪಿಸಿದರು.
ವಿಧಾನ ಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಐ.ಸಿ ಕೈಲಾಸ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಪ್ರಭಾಕರ ಸಾಲಿಯಾನ್ ಮಾತನಾಡಿ, ಪಕ್ಷ ಸಂಘಟನೆಯ ಬಗ್ಗೆ ತಿಳಿಸಿದರು. ಪಕ್ಷದ ಪ್ರಮುಖರಾದ ಪದ್ಮಮಣಿ, ರಾಧಾಕೃಷ್ಣ ಸಾಲಿಯಾನ್, ಪ್ರಿಯ ಸಾಲಿಯಾನ್, ಶಿವು ಸಾಲಿಯಾನ್, ಇಬ್ರಾಹಿಂ ಕೆದಿಲ, ಸುಂದರ ಬಪ್ಪಳಿಗೆ, ಗೋಪಾಲ ಸಾಲಿಯಾನ್, ನಝೀರ್ ಬಪ್ಪಳಿಗೆ, ಶ್ರೇಯಾಂಶ್ ಕುಮಾರ್ ಜೈನ್, ಮಹಾವೀರ ಜೈನ್, ವಿಕ್ಟರ್ ಗೊನ್ಸಾಲ್ವೀಸ್, ಅಬ್ದುಲ್ ರಹಿಮಾನ್ , ಇಸಾಖ್ ಕಾರ್ಖಾನೆ, ಕೆ.ಪಿ ಇಬ್ರಾಹಿಂ ಕಲ್ಲರ್ಪೆ, ಮೊಹಮ್ಮದ್ ಪರ್ಲಡ್ಕ, ಜಯಶ್ರೀ, ವಿಸ್ಮಿತಾ, ಲೀಲಾ ಎಚ್., ವಿ ಫಾತಿಮಾ, ನೆಬಿಸಾ, ಇಬ್ರಾಹಿಂ, ಶಾಫಿ ಜಿ.ಕೆ., ಹಂಝ ಕಬಕ, ಆಶ್ಲೇಷ್ ಭಟ್ ಹಾಗೂ ಗಂಗಾಧರ ನಾಯ್ಕ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು. ಅಶ್ರಫ್ ಕೊಟ್ಯಾಡಿ ಸ್ವಾಗತಿಸಿ, ವಂದಿಸಿದರು.