ಪರ್ಪುಂಜ: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆ

0
  • ಅಭಿವೃದ್ಧಿಯನ್ನು ಜನರ ಬಳಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು: ಮಠಂದೂರು
  • ಪುತ್ತೂರು ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಗೆ ಗೆಲುವು ನಿಶ್ಚಿತ : ಗೋಪಾಲಕೃಷ್ಣ ಹೇರಳೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆಯು ಸೆ.೩೦ ರಂದು ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಹೇರಳೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು, ಭಾರತೀಯ ಜನತಾ ಪಾರ್ಟಿಯಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರ ಜನಪರ ಆಡಳಿತದಿಂದಾಗಿ ಭಾರತ ಜಗದ್ಗುರು ಸ್ಥಾನಕ್ಕೆ ಮುಟ್ಟಿದೆ. ಬಿಜೆಪಿಯಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಬಳಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದಾಗಬೇಕು ಆ ಮೂಲಕ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸ ಆಗಬೇಕು ಎಂದರು. ಒಂದಷ್ಟು ಪ್ರಮುಖ ಸಮಸ್ಯೆಗಳಾದ ಮರಳು, ಕುಮ್ಕಿ, ಪ್ಲಾಟಿಂಗ್ ಬಗ್ಗೆ ಸಭೆಯಲ್ಲಿ ಉಲ್ಲೇಖ ಮಾಡಲಾಗಿದ್ದು ಈಗಾಗಲೇ ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಕ್ರಮ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೋಪಾಲಕೃಷ್ಣ ಹೇರಳೆಯವರು ಮಾತನಾಡಿ, ಭಾರತೀಯ ಜನತಾ ಪಾರ್ಟಿಯು ಒಂದು ಗುರಿ ಇಟ್ಟುಕೊಂಡು ದೇಶದಲ್ಲಿ ಅದ್ಭುತ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಭಾರತವನ್ನು ಜಗದ್ಗುರು ಮಾಡುವಲ್ಲಿ ಪ್ರಧಾನಿ ಮೋದಿಜಿಯವರು ಹೆಜ್ಜೆ ಇಟ್ಟಿದ್ದಾರೆ ಮುಂದಿನ ಕೆಲವೇ ದಿನಗಳಲ್ಲಿ ಭಾರತ ಜಗದ್ಗುರು ಆಗಲಿದೆ ಎಂದರು. ಅದೆಷ್ಟೋ ವರ್ಷಗಳ ನಂತರ ಕಾಶ್ಮೀರ ನಮ್ಮದು ಆಗಿದ್ದು ೩೫ ವರ್ಷಗಳ ನಂತರ ಕಾಶ್ಮೀರದಲ್ಲಿ ಸಿನಿಮಾ ಥಿಯೇಟರ್‌ಗಳು ತೆರೆದುಕೊಳ್ಳುತ್ತಿದೆ ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು. ಸೆ.೧೭ ರಿಂದ ಅ.೦೨ ರ ತನಕ ಬಿಜೆಪಿ ಈ ೧೫ ದಿನಗಳ ಬಹಳ ಮಹತ್ತರವಾದ ದಿನಗಳಾಗಿವೆ ಎಂದ ಅವರು, ಸೆ.೧೭ ರಂದು ಮೋದಿಯವರು ಜನ್ಮ ದಿನವಾದರೆ ಸೆ.೨೫ ರಂದು ದೀನದಯಾಳ್ ಉಪಾಧ್ಯಾಯರವರ ಜನ್ಮ ದಿನ ಹಾಗೇ ಅ.೨ ರಂದು ಗಾಂಧಿಜಿಯವರ ಜನ್ಮ ದಿನವಾಗಿದೆ. ಇವರೆಲ್ಲರ ವಿಚಾರಧಾರೆಗಳೇ ಬಿಜೆಪಿಯ ವಿಚಾರಧಾರೆಗಳಾಗಿವೆ ಎಂದರು.

ಈ ಬಾರಿಯೂ ಬಿಜೆಪಿಗೆ ಗೆಲುವು ನಿಶ್ಚಿತ
ಜನ ಮೋದಿಯನ್ನು ಬಯಸುತ್ತಿದ್ದಾರೆ. ಮೋದಿಯವರ ಆಡಳಿತದ ಮೇಲೆ ಜನರಿಗೆ ನಂಬಿಕೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು ಪ್ರತಿ ಮಂಡಲಕ್ಕೆ ಭೇಟಿ ನೀಡುವ ಪ್ರವಾಸ ಮಾಡುತ್ತಿದ್ದು ಕಾರ್ಯಕರ್ತರಲ್ಲಿ ಹುರುಪು ತುಂಬಿಸುವ ಕೆಲಸ ನಡೆಯುತ್ತಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕೂಡ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಗೋಪಾಲಕೃಷ್ಣ ಹೇರಳೆಯವರು ಹೇಳಿದರು. ಕಳೆದ ವರ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿಪುತ್ತೂರು ವಿಧಾನಸಭೆಯಲ್ಲಿ ೨೯ ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದೇವೆ ಈ ವರ್ಷ ೧೦ ಸಾವಿರ ಹೆಚ್ಚುವರಿ ಮತಗಳನ್ನು ಪಡೆಯುತ್ತೇವೆ ಎಂಬ ನಂಬಿಕೆ ಇದೆ. ಆದರೆ ನಮ್ಮ ಕಾರ್ಯಕರ್ತರು, ಶಕ್ತಿ ಕೇಂದ್ರದ ಪ್ರಮುಖರು ಸುಮ್ಮನೆ ಕುಳಿತುಕೊಂಡರೆ ಸಾಲದು ಬಿಜೆಪಿ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಹಿರಿಯ ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ
ಜನಸಂಘದಿಂದ ಬೆಳದು ಬಂದು ಬಳಿಕ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿ ದುಡಿದ ಹಿರಿಯ ಕಾರ್ಯಕರ್ತ ಎಂ.ಎಸ್.ಕೇಶವ ಶಾಂತಿವನರವರನ್ನು ಈ ಸಂದರ್ಭದಲ್ಲಿ ಶಾಲು, ಹಾರ, ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಂಟ್ವಾಳ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ವಿಭಾಗ ಸಹಪ್ರಭಾರಿ ಚನಿಲ ತಿಮ್ಮಪ್ಪ ಶೆಟ್ಟಿ, ಹಿಂದುಳಿದ ಮೋರ್ಛಾದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಣಾಜೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಜಯರಾಮ ಪೂಜಾರಿ ಸ್ವಾಗತಿಸಿ, ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ೫ ಮಹಾ ಶಕ್ತಿಕೇಂದ್ರ, ೪೧ ಶಕ್ತಿಕೇಂದ್ರಗಳ ಮಂಡಲ ಸಮಿತಿಯ ಪದಾಧಿಕಾರಿಗಳು, ಮಂಡಲದಿಂದ ಜಿಲ್ಲಾ, ರಾಜ್ಯ ಮಟ್ಟಕ್ಕೆ ಸಂಬಂಧಿಸಿದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here