ಅ. 26ರಂದು ಕಿಲ್ಲೆ ಮೈದಾನದಲ್ಲಿ 25 ಸಾವಿರ ಮಂದಿಗೆ ವಸ್ತ್ರದಾನ- ಅಶೋಕ್ ರೈ
ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನ್&ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅ. 26ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಟ್ರಸ್ಟ್ ಫಲಾನುಭವಿಗಳ ಸಮಾವೇಶ ‘ದಶ ಸಂಭ್ರಮ ಮತ್ತು ವಸ್ತ್ರ ವಿತರಣೆ’ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.2ರಂದು ನಡೆಯಿತು.
ಮಹಿಷಮರ್ದಿನಿ ದೇವರ ಸನ್ನಿಧಿಯಲ್ಲಿ ಆಮಂತ್ರಣ ಪತ್ರ ಇಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಮತ್ತು ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಬಳಿಕ‘ಸುದ್ದಿ’ಯೊಂದಿಗೆ ಮಾತನಾಡಿದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರೂ ಆಗಿರುವ ಉದ್ಯಮಿ ಅಶೋಕ್ ಕುಮಾರ್ ರೈ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ತಂದೆಯವರ ಕಾಲದಿಂದಲೂ ವಸ್ತ್ರದಾನ ಮಾಡುವ ಸಂಪ್ರದಾಯವಿತ್ತು. ತಂದೆಯವರ ಕಾಲದಲ್ಲಿ ಸುಮಾರು 25 ಜನರಿಗೆ ವಸ್ತ್ರದಾನ ಮಾಡುವಲ್ಲಿಂದ ಇದೀಗ ನನ್ನ ಕಾಲದಲ್ಲಿ ಸಾವಿರಾರು ಜನರಿಗೆ ವಸ್ತ್ರದಾನ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದೇವೆ. ಈ ಬಾರಿ ನಮ್ಮ ಟ್ರಸ್ಟ್ ಹತ್ತು ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಭ್ರಮದಲ್ಲಿ ಟ್ರಸ್ಟ್ ಫಲಾನುಭವಿಗಳ ಸಮಾವೇಶ-ದಶ ಸಂಭ್ರಮ ಮತ್ತು ಸುಮಾರು 25,000 ಜನರಿಗೆ ವಸ್ತ್ರ ವಿತರಣೆ ಮಾಡಲಿದ್ದೇವೆ. ಜನಸಂದಣಿ ಹೆಚ್ಚುವ ಕಾರಣದಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ಜೋಡಣೆ ಮಾಡಲು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ನನ್ನ ಬಗ್ಗೆ ನನ್ನ ಹಿತೈಷಿಗಳು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಭೋಜನ ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ನನ್ನ ಹಿತೈಷಿಗಳು ಸೇರಿಕೊಂಡು ವ್ಯವಸ್ಥೆ ಮಾಡುತ್ತಿದ್ದಾರೆ. ಧರ್ಮಾತೀತವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಭಾಗವಹಿಸಬೇಕು ಎಂದು ಅಶೋಕ್ ರೈ ಮನವಿ ಮಾಡಿದರು.
ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಮಾಜಿ ಆಡಳಿತ ಮೊಕ್ತೇಸರ ಪಿ. ಸಂಕಪ್ಪ ಶೆಟ್ಟಿ, ಚಂದ್ರಹಾಸ್ ಮಾಣಿ, ಎ.ಜತೀಂದ್ರ ಶೆಟ್ಟಿ ಅಲಿಮಾರ, ಕೃಷ್ಣಪ್ರಸಾದ್ ಬೊಳ್ಳಾವು, ಕುಮಾರನಾಥ ಎಸ್, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ರಾಜಮಣಿ ರೈ, ಆನಂದ ಅಮೀನ್, ವಿಕ್ರಂ ಶೆಟ್ಟಿ ಅಂತರ, ಯೋಗೀಶ್ ಎಸ್. ಸಾಮಾನಿ, ದಿವಾಕರ ಶೆಟ್ಟಿ, ರಾಜೀವ ಶೆಟ್ಟಿ ಕೇದಗೆ, ವಿಜಯ ಕುಮಾರ್ ಶಿವಪ್ರಸಾದ್ ರೈ, ವೇದಾವತಿ ಎಸ್.ರೈ, ಜಯಶೀಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.