ಪುತ್ತೂರು: ಯಕ್ಷಗಾನದ ಪಾತ್ರದಲ್ಲಿ ತಾವು ನಗದೇ, ಇತರರನ್ನು ನಗಿಸುತ್ತಿದ್ದ ಯಕ್ಷಗಾನ ಕ್ಷೇತ್ರದ ಹಾಸ್ಯ ದಿಗ್ಗಜರಾದ ವಿಟ್ಲ ಗೋಪಾಲಕೃಷ್ಣ ಜೋಷಿ ಮತ್ತು ನಯನ ಕುಮಾರ್ ರವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ನಿವೃತ್ತ ಶಿಕ್ಷಕ ಪಶುಪತಿ ಶಾಸ್ತ್ರಿ ಹೇಳಿದರು.
ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದಸರಾ ನಾಡ ಹಬ್ಬ ಸಮಿತಿ, ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ನಯನ ಕುಮಾರ್ ಅಭಿಮಾನಿ ಬಳಗದ ಸಹಯೋಗದಲ್ಲಿ ಪುತ್ತೂರು ನಟರಾಜ ವೇದಿಕೆಯಲ್ಲಿ ಜರಗಿದ ವಿಟ್ಲ ಜೋಷಿ ಮತ್ತು ನಯನ ಕುಮಾರ್‌ರವರ ಸಂಸ್ಮರಣಾ ಕಾರ‍್ಯಕ್ರಮದಲ್ಲಿ ಮಾತನಾಡಿ ಹಿಂದಿನ ಕಾಲದ ಯಕ್ಷಗಾನದ ಹಾಸ್ಯಕ್ಕೂ ಪ್ರಸ್ತುತ ದಿನದ ಯಕ್ಷಗಾನದ ಹಾಸ್ಯಕ್ಕೂ ಬಹಳಷ್ಟು ಅಜಗಜಾಂತರ ಇದೆ. ವಿಟ್ಲ ಜೋಷಿ ಮತ್ತು ನಯನ ಕುಮಾರ್ ರವರು ಹಿತ ಮಿತವಾದ ಹಾಸ್ಯ ಮತ್ತು ಅವರು ಯಕ್ಷಗಾನಕ್ಕೆ ನೀಡಿದ ಸೇವೆಯನ್ನು ಸಂಸ್ಮರಣೆ ಮಾಡುವುದು ಪುಣ್ಯದ ಕೆಲಸ ಎಂದು ಹೇಳಿದರು.
ಪ್ರತಿವರ್ಷ ಯಕ್ಷಗಾನ ಕಾರ‍್ಯಕ್ರಮ- ಸೀತಾರಾಮ ಶಾಸ್ತ್ರಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಯಕ್ಷರಂಗ ಅಧ್ಯಕ್ಷ ಕಾಡೂರು ಸೀತಾರಾಮ ಶಾಸ್ತ್ರಿ ರವರು ಮಾತನಾಡಿ ಯಕ್ಷಗಾನ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಪ್ರತಿ ವರ್ಷ ಯಕ್ಷಗಾನ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ‍್ಯ ನಿರಂತರವಾಗಿ ಮುಂದುವರಿಯಲಿದೆ ಎಂದರು.
ವಿಟ್ಲ ಜೋಷಿರವರ ಪುತ್ರ ಡಾ.ಹರೀಶ್ ಜೋಷಿ ಮತ್ತು ನಯನಕುಮಾರ್ ರವರ ಪುತ್ರ ಉದಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.