ಉಪ್ಪಿನಂಗಡಿ: ಸಮಾಜ, ಕುಟುಂಬ ಹಾಗೂ ವ್ಯಕ್ತಿ ಜೀವನದಲ್ಲಿ ಧರ್ಮಾಚರಣೆ, ಸಾಮರಸ್ಯ ಮತ್ತು ಸಂಸ್ಕಾರವಿದ್ದಾಗ ಮಾತ್ರ ಸಾರ್ಥಕ್ಯ ಬದುಕು ನಮ್ಮದಾಗಲು ಸಾಧ್ಯ. ಧರ್ಮವಿಲ್ಲದ ಬದುಕು ಪರಿಪೂರ್ಣ ಬದುಕಾಗಲು ಸಾಧ್ಯವಿಲ್ಲವೆಂದು ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ತಿಳಿಸಿದರು.
ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 28ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಅ.4ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು.
ಸತ್ಯ -ಧರ್ಮದ ಹಾದಿಯಲ್ಲಿ ನಮ್ಮ ಕೆಲಸ ಕಾರ್ಯಗಳು ನಡೆಯಬೇಕು. ಆದರೆ ಇಂದು ನಮ್ಮ ಯೋಚನಾ ಲಹರಿ ತಪ್ಪಿದ್ದು, ಅಂಕ ಮತ್ತು ಹಣದ ಹಿಂದೆ ಸಮಾಜ ಓಡ್ತಾ ಇದ್ದು, ಕೊಳ್ಳುಬಾಕ ಸಂಸ್ಕೃತಿ ನಮ್ಮದಾಗಿದೆ. ಒಗ್ಗಟ್ಟು, ಸಾಮರಸ್ಯವಿಲ್ಲದ ಬದುಕಿನಿಂದ ಸಮಾಜ, ಮನೆ, ಕುಟುಂಬದ ಉದ್ಧಾರ ಸಾಧ್ಯವಿಲ್ಲ. ವಿದ್ಯೆ ಬದುಕಿಗೆ ಅನ್ನ ನೀಡಿದರೆ, ಧರ್ಮ ಬದುಕಿಗೆ ಅರ್ಥವನ್ನು ನೀಡುತ್ತದೆ. ಆದ್ದರಿಂದ ನಾವು ವಿದ್ಯಾವಂತರಾಗುವುದರೊಂದಿಗೆ ಸಂಸ್ಕಾರವಂತರೂ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ವೆಂಕಟ್ರಮಣ ಪ್ರಸಾದ್ ಮಾತನಾಡಿ, ಸಾರ್ವಜನಿಕವಾಗಿ ಹಬ್ಬಾಚರಣೆ ಮಾಡುವುದರಿಂದ ಧರ್ಮ ಜಾಗೃತಿಯಾಗುವುದರೊಂದಿಗೆ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಹಾಗೂ ಎಲ್ಲರಿಗೂ ಹಬ್ಬಗಳ ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದರು.
ಬಿ.ಎಸ್.ಎಫ್-ನ ನಿವೃತ ಉಪ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಮಾತನಾಡಿ, ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸವಾಗಬೇಕು. ಪ್ರತಿಯೋರ್ವನೂ ಧರ್ಮಗ್ರಂಥವಾದ ಭಗವದ್ಗೀತೆಯ ಸಾರವನ್ನು ಅರಿತಿರಬೇಕು. ಈ ಉದ್ದೇಶದಿಂದ ನಾನು ಭಗವದ್ಗೀತ ಜ್ಞಾನ ಜ್ಯೋತಿ ಅಭಿಯಾನ ಹಮ್ಮಿಕೊಂಡಿದ್ದು, ಮನೆಯಲ್ಲಿ ಭಗವದ್ಗೀತೆ ಪುಸ್ತಕ ಇಲ್ಲದವರಿಗೆ ಉಚಿತವಾಗಿ ಭಗವದ್ಗೀತೆ ಪುಸ್ತಕವನ್ನು ವಿತರಿಸುತ್ತಿದ್ದೇನೆ. ಅಗತ್ಯವುಳ್ಳವರು ಇದನ್ನು ಪಡೆದುಕೊಂಡು ಜ್ಞಾನಜ್ಯೋತಿಯಾದ ಭಗವದ್ಗೀತೆಯ ಸಾರವನ್ನು ಅರಿತುಕೊಳ್ಳಬೇಕೆಂದು ತಿಳಿಸಿದರು.
ಉದ್ಯಮಿ ಮೋಹನ್ ಚೌಧರಿ ಮಾತನಾಡಿ ಶುಭ ಹಾರೈಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯ ಧನಂಜಯ ನಟ್ಟಿಬೈಲು, ತಾ.ಪಂ. ಮಾಜಿ ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಸಮಿತಿಯ ಕೋಶಾಽಕಾರಿ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಮಡಿವಾಳ, ಸ್ಥಾಪಕ ಸದಸ್ಯೆ ಪುಷ್ಪಲತಾ ಭಟ್ ಪೆರ್ನಾಜೆ, ನಿವೃತ್ತ ಯೋಧ ನಾರಾಯಣ ಹೆಗ್ಡೆ, ಪ್ರಮುಖರಾದ ಗಣೇಶ್ ಶೆಣೈ ಎನ್., ವಿಶ್ವನಾಥ ಶೆಣೈ, ಶಶಿಧರ ಹೆಗ್ಡೆ, ಜಯರಾಮ ಆಚಾರ್ಯ, ಯೋಗೀಶ್ ಶೆಣೈ, ಕೃಷ್ಣಪ್ಪ ಪೂಜಾರಿ, ಸಂದೇಶ್ ಶೆಣೈ, ಸಂದೀಪ್ ಶೆಣೈ, ಮಂಜುನಾಥ್ ಶೆಣೈ, ಪುಷ್ಪಲತಾ ಭಟ್, ಗಣೇಶ್ ಆಚಾರ್ಯ, ಶ್ಯಾಮಲಾ ಶೆಣೈ, ಅವಿನಾಶ್ ರಾಮನಗರ, ನಿತಿನ್ ರಾಮನಗರ, ನಿಶಾಂತ್, ಯತೀಶ್ ಶೆಟ್ಟಿ ಕೂಟೇಲು, ಸಚಿನ್, ನಿತೇಶ್ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜ್‌ಗೋಪಾಲ ಹೆಗ್ಡೆ ವಂದಿಸಿದರು. ಜೊತೆ ಕಾರ್ಯದರ್ಶಿ ರಘುರಾಮ ಎ. ರಾಮನಗರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾತ್ರಿ ಪೂಜೆ ನಡೆದು, ತಾಂಬೂಲ ಕಲಾವಿದೆರ್ ಪೂಂಜಾಲಕಟ್ಟೆ ಇವರಿಂದ ‘ಇಂಚಲಾ ಉಂಡಾ….’ ತುಳು ನಾಟಕ ನಡೆಯಿತು.