ಯಕ್ಷಗಾನ ರಂಗದ ಸಿಡಿಲ ಮರಿ ವಿನೋದ್‌ ರೈ ಸೊರಕೆ

0

42ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸಕ್ರಿಯ

*ಪ್ರವೀಣ್‌ ಚೆನ್ನಾವರ

ಸವಣೂರು : ಯಕ್ಷಗಾನ ಕರಾವಳಿಯ ಗಂಡುಕಲೆ, ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಯಕ್ಷಗಾನ.

ಈ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 42ವರ್ಷಗಳಿಂದ ಪುತ್ತೂರು ತಾಲೂಕಿನ ವಿನೋದ್‌ ರೈ ಸೊರಕೆ ಅವರು ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ.‌

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕಲ್ಲಮೆಟ್ಟು-ಆನೆಮಜಲು ನಾರಾಯಣ ರೈ ಮತ್ತು ಸರಸ್ವತಿ ರೈ ಅವರ ಮಗನಾಗಿ ಜನಿಸಿರುವ ಇವರು,ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನದ ಕಡೆ ವಿಶೇಷ ಒಲವು ಹೊಂದಿ ಕುಂಬ್ರ ಶ್ರೀರಾಮ ಯಕ್ಷಗಾನ ಸಂಘದಲ್ಲಿ ಹಾಸ್ಯಗಾರ ಪುತ್ರಕಳ ಶಿವಣ್ಣ ರೈ ಅವರಿಂದ ತರಬೇತಿ ಪಡೆದು ಯಕ್ಷಗಾನ ರಂಗಕ್ಕೆ ಪ್ರವೇಶ ಪಡೆದರು.

ಬಳಿಕ ಯಕ್ಷಗಾನವನ್ನು ಮತ್ತಷ್ಟು ಕರಗತಮಾಡಿಕೊಳ್ಳಲು ಹಾಗೂ ಸಂಪೂರ್ಣವಾಗಿ ಯಕ್ಷಗಾನ ಕ್ಷೇತ್ರದಲ್ಲೇ ಸೇವೆ ಮಾಡಬೇಕೆಂಬ ಹಂಬಲದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಲಲಿತಾ ಕಲಾ ಕೇಂದ್ರದಲ್ಲಿ ಯಕ್ಷ ದಿಗ್ಗಜರಾದ ಸೂರಿಕುಮೇರು ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್‌ ಅವರ ಶಿಷ್ಯನಾಗಿ ನಾಟ್ಯಾಭಿನಯ,ಮಾತುಗಾರಿಕೆಯಲ್ಲಿ ಪರಿಣಿತಿ ಪಡೆದು ಪುಂಡು ವೇಷ,ಕಿರೀಟ ವೇಷಗಳ ನಿರ್ವಹಣೆಯಲ್ಲಿ ಸ್ವಂತಿಕೆಯನ್ನು ಪಡೆದುಕೊಂಡರು.

ವಿನೋದ್‌ ರೈ ಸೊರಕೆ ಅವರು,1981-82ನೇ ವರ್ಷದಲ್ಲಿ ಯಕ್ಷಗಾನ ರಂಗಕ್ಕೆ ಸೇರ್ಪಡೆಯಾದರು.7 ವರ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ,2 ವರ್ಷ ಕಾಂತಾವರ ಯಕ್ಷಗಾನ ಮೇಳದಲ್ಲಿ, 3 ವರ್ಷ ಮಂಗಳೂರಿನ ಮಂಗಳಾದೇವಿ ಮೇಳದಲ್ಲಿ,12 ವರ್ಷ ಕದ್ರಿ ಮಂಜುನಾಥೇಶ್ವರ ಯಕ್ಷಗಾನ ಮೇಳದಲ್ಲಿ,ಕೊಲ್ಲಂಗಾನ ಮೇಳದಲ್ಲಿ,ಸುಂಕದಕಟ್ಟೆ,ಪುತ್ತೂರು,ಕೂಡ್ಲು,ಎಡನೀರು ಮೇಳದಲ್ಲಿ,ಬಪ್ಪನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ಪ್ರಸ್ತುತ ನೂತನ ಮೇಳವಾದ ಗೆಜ್ಜೆಗಿರಿ ಯಕ್ಷಗಾನ ಮೇಳದಲ್ಲಿ ವೃತ್ತಿ ಕಲಾವಿದರಾಗಿ ಯಕ್ಷ ಪಯಣವನ್ನು ಮುಂದುವರೆಸುತ್ತಿರುವ ವಿನೋದ್‌ ರೈ ಸೊರಕೆ ಅವರು ಒಟ್ಟು 42 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದು,ಯಕ್ಷಗಾನ ರಂಗದ ಸಿಡಿಲ ಮರಿ ಎಂದು ಖ್ಯಾತಿ ಪಡೆದಿದ್ದಾರೆ.

ವಿನೋದ್‌ ರೈ ಅವರು ಸುದರ್ಶನ,ಅಭಿಮನ್ಯು,ಪರಶುರಾಮ,ಕೃಷ್ಣ,ಅಶ್ವತ್ಥಾಮ,ಲಕ್ಮ್ಮಣ,ಬಬ್ರುವಾಹನ ಪಾತ್ರಗಳಿಗೆ ಜೀವ ತುಂಬಿ ಮೆರುಗು ನೀಡಿದ್ದಾರೆ.

ತುಳು ಹಾಗೂ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿ ಶತದಿಗಿಣ ವೀರ,ರಂಗರಾಜ,ಸಿಡಿಲ ಮರಿ ಮೊದಲಾದ ಬಿರುದುಗಳನ್ನು ಪಡೆದವರು.

ಯುವಜನ ಮೇಳಗಳಲ್ಲಿ ಸಕ್ರೀಯ:

ವಿನೋದ್‌ ರೈ ಅವರು ಯುವಜನ ಮೇಳದ ಯಕ್ಷಗಾನ ಸ್ಪರ್ಧೆಯಲ್ಲಿ 2004ರಿಂದ 2015ರ ವರೆಗೆ ಸವಣೂರು ಯುವಕ ಮಂಡಲವನ್ನು ಪ್ರತಿನಿಧಿಸಿ ತಾಲೂಕುಮಟ್ಟದಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.ದೊಡ್ಡಾಟ,ಏಕಪಾತ್ರಭಿನಯದಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದು ಸೈ ಎನಿಸಿಕೊಂಡವರು.

ಹಲವು ಗೌರವ ಸನ್ಮಾನ:ವಿನೋದ್‌ ರೈ ಅವರ ಯಕ್ಷಗಾನ ಸೇವೆಯನ್ನು ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸನ್ಮಾನಿಸಿ ಗೌರವಿಸಿ,ಅಭಿನಂದಿಸಿದೆ.

ವಿನೋದ್‌ ರೈ ಅವರ ಪತ್ನಿ ಸುಜಾತ ರೈ ,ಮಕ್ಕಳಾದ ಮನೀಶ್‌ ರೈ,ಧನೀಶ್‌ ರೈ ಅವರು ವಿನೋದ್‌ ರೈ ಅವರ ಯಕ್ಷಗಾನ ಕಲಾ ಸೇವೆಗೆ ಬೆಂಬಲವಾಗಿ ನಿಂತಿದ್ದು, ಕಳೆದ 42 ವರ್ಷಗಳಿಂದ ಯಕ್ಷಗಾನ ಕಲಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿನೋದ್‌ ರೈ ಅವರು ಇನ್ನಷ್ಟು ವರ್ಷ ಕಲಾಮಾತೆಯ ಸೇವೆ ಮಾಡುವಂತಾಗಲಿ ಎಂಬ ಹಾರೈಕೆ ನಮ್ಮದು.

LEAVE A REPLY

Please enter your comment!
Please enter your name here