ಸಮಾಜದ ಎಲ್ಲಾ ವರ್ಗದವರು ಸ್ವಾಭಿಮಾನಿಯಾಗಿರಬೇಕೆಂಬುದೇ ರಾಮ, ವಾಲ್ಮೀಕಿ, ಸರಕಾರದ ಇಚ್ಚೆ- ಸಂಜೀವ ಮಠಂದೂರು
ವಾಲ್ಮೀಕಿ ಮಹಾಕಾವ್ಯ ಪ್ರಸ್ತುತ ಜೀವನದ ದಾರಿದೀಪ – ಗಿರೀಶ್‌ನಂದನ್
ವಾಲ್ಮೀಕಿ ಜಗತ್‌ವಂದ್ಯರಾಗಿದ್ದಾರೆ – ಪ್ರಶಾಂತ್ ಅನಂತಾಡಿ
ಪುತ್ತೂರು: ಸಮಾಜದ ಎಲ್ಲಾ ವರ್ಗದವರು ಸ್ವಾಭಿಮಾನಿಯಾಗಿರಬೇಕೆಂಬುದೇ ರಾಮ, ವಾಲ್ಮೀಕಿ ಮತ್ತು ಸರಕಾರದ ಇಚ್ಚೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಅ.9ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ, ಕುಟುಂಬ, ಸಮಾಜ, ಸರಕಾರ ಹೇಗಿರಬೇಕೆಂದು ಮಹರ್ಷಿ ವಾಲ್ಮೀಕಿ ಮಹಾಕಾವ್ಯದ ಮೂಲಕ ತೋರಿಸಿದ್ದಾರೆ. ಸರಕಾರವು ವಾಲ್ಮೀಕಿ ಹೆಸರಿನಲ್ಲಿ ಹತ್ತಾರು ಕಾರ್ಯಕ್ರಮ ಹಾಕಿಕೊಂಡಿದೆ. ಇವತ್ತು ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.3 ರಿಂದ 7ಕ್ಕೆ ಮೀಸಲಾತಿ ನೀಡುವ ಮೂಲಕ ಗುಡ್ಡಗಾಡು ಜನರಿಗೆ ದೊಡ್ಡ ಕೊಡುಗೆ ನೀಡಿದೆ. ಒಟ್ಟಿನಲ್ಲಿ ಸಮಾಜದ ಎಲ್ಲ ವರ್ಗದವರು ಸ್ವಾಭಿಮಾನಿಯಾಗಿರಬೇಕೆಂಬುದೇ ರಾಮ, ವಾಲ್ಮಕಿ ಮತ್ತು ಸರಕಾರ ಇಚ್ಚೆಯಾಗಿದೆ ಎಂದರು.
ವಾಲ್ಮೀಕಿ ಮಹಾಕಾವ್ಯ ಪ್ರಸ್ತುತ ಜೀವನದ ದಾರಿದೀಪ:
ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಮಾತನಾಡಿ ಮಹಾಕಾವ್ಯ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿಯವರ ಜಯಂತಿ ಮಹತ್ವ ಪೂರ್ಣವಾಗಿದೆ. ಅವರು ರಚಿಸಿದ ಮಹಾಕಾವ್ಯಗಳ ಅಂಶಗಳು ನಮ್ಮ ಈಗಿನ ಜೀವನ ಮುನ್ನಡೆಸಲು ದಾರಿ ದೀಪವಾಗಿದೆ ಎಂದರು.
ವಾಲ್ಮೀಕಿ ಜಗತ್‌ವಂದ್ಯರಾಗಿದ್ದಾರೆ:
ಕಡಬ ತಾಲೂಕು ಪ್ರೌಢ ಶಾಲಾ ಶಿಕ್ಷಕ ಪ್ರಶಾಂತ್ ಅನಂತಾಡಿ ಸಂಸ್ಮರಣಾ ಮಾತುಗಳನ್ನಾಡಿ ರಾಮಾಯಣದ ಮೂಲಕ ವಿಸ್ತಾರವಾದ ವೇದಿಕೆಯನ್ನು ಸೃಷ್ಟಿ ಮಾಡಿ ಮಹರ್ಷಿ ವಾಲ್ಮೀಕಿ ಜಗತ್ ವಂದ್ಯ ಆಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಜ್ಞಾನ ಸೃಷ್ಟಿ ಮತ್ತು ರಾಮಯಾಣದ ಕಥೆಗಳ ಮೂಲಕ ಬದಲಾವಣೆಯ ವರ್ತನೆಯನ್ನು ತೆರೆದು ಕೊಳ್ಳುತ್ತಾರೆ. ಅದೇ ರೀತಿ
ನಮ್ಮ ನೆಲದ ಬಹುಪಾಲು ಕಾನೂನುಗಳು ರಾಮಾಯಣದ ನೆಪದ ಮೂಲಕ ನೀತಿ ಭೋಧನೆಯಾಗಿದೆ ಜೊತೆಗೆ ವಾಲ್ಮೀಕಿ ಉತ್ತಮ ರಾಜಕೀಯ ಶಾಸ್ತ್ರಜ್ಞ ಕೂಡಾ ಆಗಿದ್ದರು ಎಂದರು.
ಶೈಕ್ಷಣಿಕ ಸಾಧಕರಿಗೆ ಸನ್ಮಾನ:
2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಬೆಟ್ಟಂಪಾಡಿ ಗುಮ್ಮಟಗದ್ದೆಯ ಪವನ್ ಕುಮಾರ್, ಇರ್ದೆ ಗ್ರಾಮದ ಕಾಟುಕಜ್ಜೆ ಯ ಶ್ವೇತಾ, ಬೆಳ್ಳಿಪ್ಪಾಡಿ ಗ್ರಾಮದ ಕಾರ್ನೋಜಿ ನಿವಾಸಿ ಮಾನಸ ಕೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.
ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಬಿಜತ್ರೆ, ಅಕ್ಷರದಾಸೋಹದ ಪ್ರಭಾರ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಕಂದಾಯ ನಿರೀಕ್ಷಕ ಗೋಪಾಲ್, ಕಂದಾಯ ಅಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ವಂದಿಸಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.