ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಕೂರೇಲು ಶ್ರೀ ಉಳ್ಳಾಲ್ತಿ ಉಳ್ಳಾಕುಲು ದೈವಸ್ಥಾನದಲ್ಲಿ ನ.10 ರಂದು ನಡೆಯಲಿರುವ ನೇಮೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಅ.09 ರಂದು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕೂರೇಲು ಸಂಜೀವ ಪೂಜಾರಿಯವರ ಮನೆಯಲ್ಲಿ ನಡೆಯಿತು. ತುಳುನಾಡಿನಲ್ಲಿ ಉಳ್ಳಾಲ್ತಿ ಉಳ್ಳಾಕುಲು ದೈವಗಳಿಗೆ ತನ್ನದೇ ಆದ ಇತಿಹಾಸ, ಕಾರಣಿಕತೆ ಇದ್ದು ಅದರಂತೆ ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಶ್ರೀ ಉಳ್ಳಾಲ್ತಿ ಉಳ್ಳಾಕುಲು ಸಪರಿವಾರ ದೈವಗಳು ವಿಶೇಷ ಕಾರಣಿಕ ಶಕ್ತಿಯನ್ನು ಹೊಂದಿವೆ. ಭಕ್ತಿಯಿಂದ ನಂಬಿದ ಭಕ್ತರಿಗೆ ತನ್ನ ವಿಶೇಷ ಶಕ್ತಿಯಿಂದ ಇಷ್ಟಾರ್ಥಗಳನ್ನು ಸಿದ್ಧಿಸುವ ಶ್ರೀ ದೈವಗಳಿಗೆ ನ.10 ರಂದು ನೇಮೋತ್ಸವ ನಡೆಯಲಿದೆ. ದೈವಸ್ಥಾನದ ಆಡಳಿತ ಮೊಕ್ತೇಸರ ಕೂರೇಲು ಸಂಜೀವ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ನೇಮೋತ್ಸವದ ಬಗ್ಗೆ ಕೂರೇಲು ಕುಟುಂಬಸ್ಥರು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿದರು. ಕೂರೇಲು ಸಂಜೀವ ಪೂಜಾರಿಯವರು ಸ್ವಾಗತಿಸಿ, ನೇಮೋತ್ಸವದ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು. ಹರ್ಷಿತ್ ಕುಮಾರ್ ಕೂರೇಲು ವಂದಿಸಿದರು.