ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ಗಾಂಧೀ ನಡಿಗೆ

0

ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ಗಾಂಧೀ ನಡಿಗೆ ಗಾಂಧೀ ಪಥದಲ್ಲಿ ದ್ವೇಷಮುಕ್ತ ಭಾರತಕ್ಕಾಗಿ ಗಾಂಧೀ ಪಥದಲ್ಲಿ ಹೆಜ್ಜೆ ಹಾಕೋಣ ಎಂಬ ಧ್ಯೇಯವಾಕ್ಯದಡಿಯಲ್ಲಿ ಗಾಂಧೀ ನಡಿಗೆಯು ಅ.10ರಂದು ಸಂಜೆ ಇರ್ದೆ-ಬೆಟ್ಟಂಪಾಡಿಯಲ್ಲಿ ನಡೆಯಿತು.


ʼ

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಚೇರಿಯ ಬಳಿಯಿಂದ ಹೊರಟು ಗಾಂಧೀ ನಡಿಗೆಗೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿಯವರು ಚರಕ ತಿರುಗಿಸಿ ಚಾಲನೆ ನೀಡಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಗಾಂಧೀ ನಡಿಗೆಯು ಮುಖ್ಯರಸ್ತೆಯ ಮೂಲಕ ಸಾಗಿ ಇರ್ದೆ ಗಾಂಧೀ ಗಾಂಧೀಕಟ್ಟೆಯ ಬಳಿ ಸಮಾಪನಗೊಂಡಿತು. ನಂತರ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು. ಚೆಂಡೆ, ಕೊಂಬುವಾದನ ಗಾಂಧೀ ನಡಿಗೆಯಲ್ಲಿ ಮೇಲೈಸಿತು. ಕಾಂಗ್ರೆಸ್ ಪಕ್ಷದ ಜಿಲ್ಲೆ, ರಾಜ್ಯ ನಾಯಕರು ಸೇರಿಂದತೆ ನೂರಾರು ಮಂದಿ ಗಾಂಧೀ ನಡಿಗೆಯಲ್ಲಿ ಹೆಜ್ಜೆ ಹಾಕಿದರು.

ರಾಹುಲ್ ಗಾಂಧೀ ಜೋಡೋ ಯಾತ್ರೆಯಿಂದ ಬಿಜೆಪಿಯವರಲ್ಲಿ ನಡುಕ:

ತೆಂಗಿನಕಾಯಿ ಒಡೆದು ನಡಿಗೆಗೆ ಚಾಲನೆ ನೀಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ರಾಹುಲ್ ಗಾಂಧೀಯವರು ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ದುರಾಡಳಿತ ಬಿಜೆಪಿ ಸರಕಾರದ ಮೇಲೆ ಪ್ರಭಾವ ಬೀರಿದೆ. ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಹೀಗಾಗಿ ಬಿಜೆಪಿಯವರು ಯಾತ್ರೆ ನಡೆಸಲು ಮುಂದಾಗಿದ್ದಾರೆ. ಗಾಂಧೀ ಕುಟುಂಬದ ಯಾತ್ರೆಯ ಮುಂದೆ ಬಿಜೆಪಿಯವರ ಯಾತ್ರೆ ಸಫಲವಾಗಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾತ್ರೆಯ ಯಶಸ್ವಿಯಾಗಿ ಸಾಗುತ್ತಿದ್ದು, ರಾಹುಲ್ ಗಾಂಧೀಯವರನ್ನು ಪಪ್ಪು ಎಂದು ಹೀಯಾಳಿಸಿದ ಬಿಜೆಪಿಯವರೇ ಇಂದು ಪಪ್ಪು ಆಗಿದ್ದಾರೆ. ದುರಾಡಳಿತದಿಂದ ಜನ ತತ್ತರಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬದಲಾವಣೆಯ ಕ್ರಾಂತಿ ಆರಂಭವಾಗಿದೆ. ಜೋಡೋ ಯಾತ್ರೆಯಿಂದಾಗಿ 44 ಸ್ಥಾನದಲ್ಲಿದ್ದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ 400ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದರು.

ಕಾಂಗ್ರೆಸ್‌ನ ಗತವೈಭವ ಮತ್ತೆ ಮರುಕಳಿಸಲಿದೆ-ಡಾ.ರಾಜಾರಾಮ್ ಕೆ.ಬಿ:

ಚರಕ ತಿರುಗಿಸಿ ನಡಿಗೆಗೆ ಚಾಲನೆ ನೀಡಿದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ. ಮಾತನಾಡಿ, ಇಂದು ಮಹಾತ್ಮ ಗಾಂಧಿಯವರ ಸಿದ್ದಾಂತ, ಪ್ರಜಾಪ್ರಭುತ್ವ ಸಿದ್ದಾಂತಗಳು ಅಪಾಯದಲ್ಲಿದ್ದು ಅದನ್ನು ಉಳಿಸಬೇಕಾದ ಅನಿವಾರ್ಯತೆಯಿದೆ. ರಾಹುಲ್ ಗಾಂಧಿಯವರು ಮಾನಸಿಕ, ದೈಹಿಕ ಸಾಮರ್ಥ್ಯದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಪಪ್ಪು ಎಂದು ಹೇಳುವವರು ಹುಚ್ಚರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ಗತ ವೈಭವ ಮತ್ತೆ ಮರುಕಲಿಸಲಿದೆ ಎಂದರು.

ಈ ಬಾರಿ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ-ಎಂ.ಬಿ ವಿಶ್ವನಾಥ ರೈ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಜಾಥಾ ಮಾಡಿದ ಎಲ್ಲಾ ಸಂದರ್ಭದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕನ್ಯಾಕುಮಾರಿಯಿಂದ ಪ್ರಾರಂಭಿಸಿ ಕಾಶ್ಮೀರ ತನಕ ಪಾದಯಾತ್ರೆ ನಡೆಯುತ್ತಿದ್ದು ರಾಹುಲ್ ಗಾಂಧಿಯವರ ವ್ಯಕ್ತಿತ್ವ, ಪ್ರಭಾವ ವೃದ್ಧಿಸುತ್ತಿದೆ. ಹೀಗಾಗಿ 2023 ರಾಜ್ಯ ಹಾಗೂ 2024ರ ಕೇಂದ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ನವೀನ್ ರೈಯವರ ನೇತೃತ್ವದಲ್ಲಿ ನಡೆದ ಗಾಂಧೀ ನಡಿಗೆಯು ಗ್ರಾಮೀಣ ಪ್ರದೇಶದಿಂದಲೇ ಎಚ್ಚರಿಕೆ ನೀಡುವ ಕಾರ್ಯವಾಗಿದೆ ಎಂದರು.

ಬಿಜೆಪಿಯ ದುರಾಡಳಿತ ಜನರಿಗೆ ಮನವರಿಕೆ-ದಿವ್ಯಪ್ರಭಾ ಚಿಲ್ತಡ್ಕ:

ಭಾರತ್ ಜೋಡೋ ಯಾತ್ರೆಯ ಸಂಯೋಜಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ರಾಹುಲ್ ಗಾಂಧೀಯವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯು ನಡೆಯುತ್ತಿದ್ದು ಶಂಕರಾಚಾರ್ಯರ ನಂತರ ಇಷ್ಟು ದೊಡ್ಡ ಯಾತ್ರೆ ಕೈಗೊಂಡಿರುವುದು ಇದೇ ಪ್ರಥಮ. ಇದರಿಂದಾಗಿ ಜನ ನಾಯಕ ಯಾರೆಂಬುದು ಅರಿವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬದುಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಳ್ಳು ಹೇಳಿಕೊಂಡು ಆಡಳಿತ ನಡೆಸುವ ಬಿಜೆಪಿಯವರು ಸತ್ಯ ಹೇಳುವವರನ್ನು ಕಂಡಾಗ ಐಟಿ, ಇಡಿಯನ್ನು ಬಳಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯ ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಿ ಮುಂದಿನ ಬಾರಿ ಕಾಂಗ್ರೆಸ್ ನ್ನು ಆಡಳಿತಕ್ಕೆ ತರಲಾಗುವುದು. ಗಾಂಧೀ ತತ್ವದಲ್ಲಿ ಪಕ್ಷವನ್ನು ಆಡಳಿತಕ್ಕೆ ತರಲಾಗುವುದು ಎಂದರು.

ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ-ಎಂ.ಎಸ್ ಮಹಮ್ಮದ್;

ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯಲ್ಲಿ ಚಿಂತಕರು, ಸ್ವಾಮಿಜಿಯವರು ಭಾಗವಹಿಸುತ್ತಿದ್ದು ಯಾತ್ರೆಯು ಚರಿತ್ರೆ ನಿರ್ಮಿಸುತ್ತಿದೆ. ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಬಿಜೆಪಿ ಚಿಂತೆಯಲ್ಲಿದೆ. ಸಂಸದ ನಳಿನ್ ಕುಮಾರ್ ಕಟೀಲು ಒಬ್ಬ ಇತಿಹಾಸದ ವಿಧೂಷಕ. ಅವರಿಗೆ ಸೋನಿಯಾ ಗಾಂದೀಯವರ ಹೆಸರು ಹೇಳುವ ಯೋಗ್ಯತೆ ಇದೆಯಾ? ಅವರ ಪಕ್ಷದವರೇ ಕಾರನ್ನು ಅಲ್ಲಾಡಿಸಿ ಅವಮಾನ ಮಾಡಿದ್ದು ನಿಮಗೆ ಮರ್ಯಾದೆ ಇದೆಯಾ? ನಿಮ್ಮ ಬಗ್ಗೆ ಚಿಂತೆ ಮಾಡಿ, ಮುಂದಿನ ಬಾರಿ ಸ್ಪರ್ಧಿಸಲು ಅವಕಾಶ ಸಿಗುತ್ತಿಲ್ವಾ ಎಂಬ ಸಂಶಯ ಅವರಲ್ಲಿದೆ. ಎಲ್ಲಾ ಇಲಾಖೆಗಳು ಭ್ರಷ್ಟಾಚಾರದಿಂದ ಕೂಡಿದ್ದು ಸರಕಾರವೇ ಭ್ರಷ್ಟಾಚಾರದಲ್ಲಿ ಕೂಡಿದೆ. ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಮೂಲಕ ಅಲ್ಲಿಯೂ ಕಮಿಷನ್ ದೋಚುವ ಯೋಜನೆಯಿದೆ. 40% ಗಾಗಿ ಕಾಮಗಾರಿಗಳನ್ನು ಕೆಆರ್.ಡಿ.ಸಿಎಲ್‌ಗೆ ನೀಡುತ್ತಿದೆ. ಇಂತಹ ಬಿಜೆಪಿ ಸರಕಾರವನ್ನು ಒದ್ದೋಡಿಸುವ ಕೆಲಸವಾಗಬೇಕು ಎಂದರು.

ಬಿಜೆಪಿ ದುರಾಡಳಿತಕ್ಕೆ ಇತಿಶ್ರೀ ಹಾಡಬೇಕು-ಡಾ.ರಘು:

ಕೆಪಿಸಿಸಿ ಸದಸ್ಯ ಡಾ.ರಘು ಬೆಳ್ಳಪ್ಪಾಡಿ ಮಾತನಾಡಿ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ನಡೆಸುವ ಸಂದರ್ಭದಲ್ಲಿ ಬೆಟ್ಟಂಪಾಡಿಯಲ್ಲಿ ಗಾಂಧಿ ನಡಿಗೆ ನಡೆಸುವ ಮೂಲಕ ಅವರಿಗೆ ಶಕ್ತಿ ನೀಡುವ ಕೆಲಸವಾಗಿದೆ. ಕೇಂದ್ರ, ರಾಜ್ಯದಲ್ಲಿ ಆಡಳಿತಲ್ಲಿರುವ ಭ್ರಷ್ಟಾಚಾರದ, ದುರಾಡಳಿತದ ಬಗ್ಗೆ ಜನರಿಗೆ ತಿಳಿಸಿ ಬಿಜೆಪಿ ಸರಕಾರಕ್ಕೆ ಇತಿಶ್ರೀ ಹಾಡಬೇಕು. ಕಿತ್ತೊಗೆಯಬೇಕು. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂದರು.

ಗೂಡ್ಸೆ ಪಥದಲ್ಲಿ ಸಾಗುತ್ತಿರುವುದರಿಂದ ದುರಂತ-ಅಮಳ ರಾಮಚಂದ್ರ:

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮಾತನಾಡಿ, ಭಾರತದ ಪ್ರಧಾನಿಯವರು ಗೂಡ್ಸೆ ಪಥದಲ್ಲಿ ಸಾಗುತ್ತಿದ್ದು ದುರಂತಗಳಿಗೆ ಕಾರಣವಾಗಿದೆ. ಗಾಂಧೀ ಸಿದ್ಧಾಂತವನ್ನು ನಾಶ ಪಡಿಸಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿದ್ದು ಅದು ಸಾಧ್ಯವಿಲ್ಲ. ಪಕ್ಷಕ್ಕೆ ಯಾವುದೇ ಅಧಿಕಾರವಿಲ್ಲ ಎಂಬ ಭ್ರಮನಿರಸರಾಗಬೇಕಿಲ್ಲ. ಪಾಂಡವರು, ರಾಮ ವನವಾಸ ಮುಗಿಸಿದಂತೆ ನಾವು ಎಂಟು ವರ್ಷಗಳ ವನವಾಸ ಮುಗಿಸಿದ್ದೇವೆ. ಮುಂದೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಗಾಂಧೀಗೆ ತಾಯಿನೆಲದಲ್ಲಿ ಅಗೌರವ-ಶ್ರೀಪ್ರಸಾದ್ ಪಾಣಾಜೆ:

ಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಇಡೀ ವಿಶ್ವವೇ ಮಹಾತ್ಮ ಗಾಂಧೀಜಿಯವರಿಗೆ ಗೌರವ ಬೆಲೆ ನೀಡುತ್ತಿದೆ. ಆದರೆ ಅವರು ಹುಟ್ಟಿ ಬೆಳೆದು ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿರುವ ಈ ನೆಲದಲ್ಲಿ ಗೌರವವಿಲ್ಲ. ಅವರನ್ನು ಗುಂಡಿಕ್ಕಿ ಕೊಂದ ಗೂಡ್ಸೆಯವರನ್ನು ಪೂಜಿಸುವ ಹಂತಕ್ಕೆ ಬಂದಿರುವುದು ದುರಂತವಾಗಿದೆ. ಗಾಂಧಿ ನಡಿಗೆಯ ಮೂಲಕ ಮನೆ ಮನೆಗೆ ತಲುಪಿಸಲಾಗುವುದು ಎಂದರು.

ಗಾಂಧೀ ತತ್ವ ಮರುಸ್ಥಾಪನೆಗೆ ಗಾಂಧೀ ನಡಿಗೆ-ನವೀನ್ ರೈ:

ಕಾರ್ಯಕ್ರಮದ ಸಂಯೋಜಕ ನವೀನ್ ರೈ ಚೆಲ್ಯಡ್ಕ ಪ್ರಾಸ್ತಾವಿಕಾಗಿ ಮಾತನಾಡಿ, ಅಸ್ಪೃಷ್ಯತೆ ನಿವಾರಣೆ, ಸಮಾನತೆ, ಸ್ವಾತಂತ್ರ್ಯದ ಚಿಂತನೆಗಳು ಎಲ್ಲರಿಗೂ ಶಿಕ್ಷಣ ಪಡೆಯುವಂತ ಯೋಜನೆಯಾಗಿದೆ. ಗಾಂಧಿ ಚಿಂತನೆಯಿಂದ ಜನರು ಇಂದು ಸಮಾನತೆ, ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಆಳುವ ವರ್ಗದ ಸ್ವಾರ್ಥದಿಂದಾಗಿ ಗಾಂಧೀ ಚಿಂತನೆಗಳನ್ನು ಕೆಡಗಣಿಸುವ ಕೆಲಸವಾಗುತ್ತಿದೆ. ಸಾರ್ವಜನಿಕ ಸೇವೆಗೆ ಮೀಸಲಿರಬೇಕಾದ ಸರಕಾರಿ ಸಂಸ್ಥೆಗಳು ಇಂದು ವ್ಯಾಪಾರಿ ಕೇಂದ್ರವಾಗುತ್ತಿದ್ದು ಬಡವರಿಗೆ ಕಷ್ಟುಗಳನ್ನು ನಿಡುತ್ತಿದೆ. ಗಾಂಧೀ ನಡಿಗೆಯು ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ನಡೆದ ಕಾರ್ಯಕ್ರಮ. ಆಡಳಿತದ ವ್ಯವಸ್ಥೆಯ ವಿರುದ್ದ ಸಂಘಟಿತರಾಗಬೇಕು. ಭ್ರಷ್ಟಾಚಾರ 10 ಪಟ್ಟು ಏರಿಕೆಯಾಗಿದೆ. ಅಗತ್ಯ ವಸ್ತಗಳು, ರಸಗೊಬ್ಬರಗಳ ದರ ಏರಿಕೆಯಾಗಿದೆ. ಅಕ್ಕಿ, ಹಾಲಿಗೂ ತೆರಿಗೆ ವಿಧಿಸಲಾಗಿದೆ. ಜನರಿಗೆ ಈ ಸತ್ಯದ ಅರಿವು ಮೂಡಿಸಬೇಕು. ಗಾಂಧೀ ಸಿದ್ದಾಂತನ್ನು ಮರು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮಾದರಿ ಕಾರ್ಯಕ್ರಮ:

ಕಾಂಗ್ರೆಸ್‌ನ ಹಿರಿಯ ಮುತ್ಸದಿ ದಿ. ಕಿಂಞಣ್ಣ ರೈಯವರ ಪುತ್ರನಾಗಿ, ತಂದೆಯ ಹಾದಿಯಲ್ಲಿ ಪಕ್ಷವನ್ನು ಸಂಘಟಿಸುತ್ತಿರುವ ನವೀನ್ ರೈಯವರ ನೇತೃತ್ವದಲ್ಲಿ ನಡೆದ ಗಾಂಧೀ ನಡಿಗೆಯು ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿದೆ. ಇದು ಎಲ್ಲಾ ಗ್ರಾಮಗಳಲ್ಲಿಯೂ ನಡೆಯಬೇಕು. ಈ ಕಾರ್ಯಕ್ರಮು ಎಲ್ಲರಿಗೂ ಸ್ಪೂರ್ತಿ ನೀಡುವ ಕಾರ್ಯಕ್ರಮವಾಗಿ ಮೂಡಿಬಂದಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಿದೆ ಎಂದು ಕಾರ್ಯಕ್ರಮ ಆಯೋಜನೆಯ ಕುರಿತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ;

ಇರ್ದೆ-ಬೆಟ್ಟಂಪಾಡಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರಾದ ನಾರಾಯಣ ರೈ ಮುದೆಲ್ಕಾಡಿ, ಗ್ರೆಗೋರಿ ಡಿ’ ಸೋಜ, ವಸಂತ ನಾಯ್ಕ, ಮಹಮ್ಮದ್ ನವಾಜ್, ಕುಟ್ಟಿ ಪೇರಲ್ತಡ್ಕ, ಸೀತಾರಾಮ ಇರ್ದೆ ಹಾಗೂ ಬಾಬು ಪೂಜಾರಿ ನಾಕಪ್ಪಾಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್ ದೇವಪ್ಪ ಗೌಡ, ಅಬೂಬಕ್ಕರ್ ಕೊರಿಂಗಿಲ, ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರಲ್ತಡ್ಕ, ಭಾರತ್ ಜೋಡೋ ಯಾತ್ರೆ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಮೊದು ಕುಂಞಿ ಕೋನಡ್ಕ, ಲಲಿತಾ ಚಿದಾನಂದ, ಮಹಾಲಿಂಗ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್‌ನ ಕಾಸರಗೋಡು ಜಿಲ್ಲಾಧ್ಯಕ್ಷ ಪೃಥ್ವಿರಾಜ್, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್, ರೋಷಣ್ ರೈ ಬನ್ನೂರು, ನೇಮಾಕ್ಷ ಸುವರ್ಣ, ಅಬ್ದುಲ್ ಖಾದರ್ ಮೇರ್ಲ, ಅವಿನಾಶ್ ರೈ ಕುಡ್ಚಿಲ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ನಡುಮನೆ, ಸುಬ್ರಹ್ಮಣ್ಯ ಗೌಡ ಹನಿಯೂರು, ಶರೀಪ್ ಬಲ್ನಾಡು, ಹಿಂದುಳಿದ ಘಟಕದ ಅಧ್ಯಕ್ಷ ಮೋಹನ ಗುರ್ಜಿನಡ್ಕ, ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಎಸ್ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ, ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಸಂಯೋಜಕ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕಾಂಗ್ರೆಸ್ ಮುಕಂಡ ಇಸಾಕ್ ಸಾಲ್ಮರ, ಯುವ ಕಾಂಗ್ರೆಸ್ ಮುಂದಾಳು ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮಹಿಳಾ ಘಟಕದ ಕಾರ್ಯದರ್ಶಿ ಸೀತಾ ಭಟ್ ಪಾಣಾಜೆ, ಪಾಣಾಜೆ ಗ್ರಾ.ಪಂ ಸದಸ್ಯರಾದ ಮೈಮೂನ, ವಿಮಲ ನಾಯ್ಕ, ಕೃಷ್ಣಪ್ಪ, ಬಾಬು ಕೋಟೆ, ನಿಡ್ಪಳ್ಳಿ ಗ್ರಾ.ಪಂ ಸದಸ್ಯೆ ಗ್ರೆಟ್ಟಾ ಜೆನೆಟ್ ಡಿ’ಸೋಜ, ಕಮಲೇಶ್ ಸರ್ವೆದೋಳ, ಭವಾನಿ ಹುಕ್ರಪ್ಪ ಗೌಡ, ಚೇತನ್ ಕಂಬಳತ್ತಡ್ಕ, ಕೇಶವ ಅರ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿದರು. ಆಲಿಕುಂಞಿ ಕೊರಿಂಗಿಲ ವಂದಿಸಿದರು. ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ರವಿ ಕಟೀಲ್ತಡ್ಕ, ಪರಮೇಶ್ವರ ನಾಯ್ಕ, ಹಮೀದ್ ಕೊಮ್ಮೆಮಾರ್, ಸದಾಶಿವ ರೈ ಗುಮ್ಮಟೆಗದ್ದೆ, ಯಾಕೂಬ್ ಬೆಟ್ಟಂಪಾಡಿ, ಚೇತನ್, ಸೀತಾ ಭಟ್, ಅವಿನಾಶ್ ರೈ ಕುಡ್ಚಿಲ, ಅಶ್ರಫ್, ಆನಂದ ಪೂಜಾರಿ, ಶ್ರೀಧರ ಪಟ್ಟೆ, ಅಬೂಬಕ್ಕರ್ ಪೇರಲ್ತಡ್ಕ, ಮಹಮ್ಮದ್ ಕೋನಡ್ಕ, ಖಲಂದರ್ ಅತಿಥಿಗಳ ಹಾರ, ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here