ನಿಡ್ಪಳ್ಳಿ; ಗ್ರಾಮ ಪಂಚಾಯತಿಯ 2021-22 ನೇ ಸಾಲಿನ ಜಮಾಬಂದಿ ಸಭೆ ಅ.12 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಲೆಕ್ಕ ಪತ್ರಗಳ ದಾಖಲೆ ಮತ್ತು ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಯಿತು. ಪಿಡಿಒ ಸಂಧ್ಯಾಲಕ್ಷ್ಮೀ ವರದಿ ಸಾಲಿನ ಲೆಕ್ಕಪತ್ರ ವಾಚಿಸಿದರು. ನೊಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರುಪ್ಲ ನಾಯ್ಕ್ ಮಾತನಾಡಿ ವರದಿ ಸಾಲಿನ ಲೆಕ್ಕ ಪತ್ರದಲ್ಲಿ ಏನಾದರೂ ಸಂದೇಹ ಸಂಶಯಗಳಿದ್ದರೆ ಕೇಳಬಹುದು ಎಂದರು. ಜಲಜೀವನ್ ಮಿಷನ್ ಯೋಜನೆಯಲ್ಲಿ ಕುಡಿಯುವ ನೀರಿನ ಸಂಪರ್ಕದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರಿಗೆ ಪರಿಶೀಲನೆ ನಡೆಸುವ ಹಕ್ಕು ಇದೆ.ಮತ್ತು ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ಸರಿಯಾಗಿಲ್ಲದಿದ್ದರೆ ನಮ್ಮಲ್ಲಿ ನೇರವಾಗಿ ಮಾತನಾಡಬಹುದು ಮತ್ತು ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.
ನರೇಗಾದಲ್ಲಿ ಫಲಾನುಭವಿಗಳು ನಡೆಸಿದ ಕಾಮಗಾರಿಯ ಉಪಕರಣಗಳ ಬಿಲ್ಲು ಪಾವತಿ ತಡವಾದ ಬಗ್ಗೆ ಗ್ರಾಮಸ್ಥ ನಾರಾಯಣ ನಾಯ್ಕ್ ಸಭೆಯಲ್ಲಿ ಪ್ರಸ್ತಾಪಿಸಿದರು.ಬಿಲ್ಲು ತಡವಾದರೆ ಮುಂದೆ ಕಾಮಗಾರಿ ನಡೆಸಲು ಜನರಿಗೆ ಮನಸ್ಸು ಬರುವುದಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಕೂಲಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಲು ಆಗುತ್ತದೆ. ಆದರೆ ಮೆಟಿರಿಯಲ್ ಬಿಲ್ಲು ಸ್ವಲ್ಪ ತಡವಾಗುತ್ತದೆ. ಕಾಮಗಾರಿ ಮತ್ತು ಅದಕ್ಕೆ ಉಪಯೋಗಿಸಿದ ಉಪಕರಣಗಳ ಲೆಕ್ಕಾಚಾರ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ಅದರ ವರದಿ ಕಳಿಸಿ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗುವಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದುದರಿಂದ ಕಾಮಗಾರಿ ನಡೆಸಿದವರಿಗೆ ಅದರ ಮೊತ್ತ ಬಂದೆ ಬರುತ್ತದೆ ಎಂದರು.
ನಂತರ ವರದಿ ಸಾಲಿನಲ್ಲಿ ನಡೆಸಿದ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧ್ಯಕ್ಷೆ ಗೀತಾ.ಡಿ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು.
ನರೇಗಾದ ಲೆಕ್ಕ ಸಹಾಯಕಿ ಅಕಾಂಕ್ಷ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು. ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.