ಬೆಂಗಳೂರು:ಬಹುನಿರೀಕ್ಷಿತ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ- 2022ಕ್ಕೆ ಗುರುವಾರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯಿಂದ ಇನ್ಮುಂದೆ ಶಿಕ್ಷಕರು ಪ್ರತಿ ಮೂರು ವರ್ಷಕ್ಕೊಮ್ಮೆ ಪರಸ್ಪರ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿ, ವರ್ಗಾವಣೆ ಹೊಂದಬಹುದಾಗಿದೆ.ಈ ಮೊದಲು ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು. ಆದರೆ, ಸೇವೆಯ ಆರಂಭದ ಐದು ವರ್ಷ ಮತ್ತು ನಿವೃತ್ತಿಗೆ ಮುಂಚಿನ ಐದು ವರ್ಷ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.ಇದಲ್ಲದೆ, ಒಂದೇ ತಾಲೂಕಿನಲ್ಲಿ ಪತಿ-ಪತ್ನಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.ಇನ್ನು ಶಿಕ್ಷಕನ ಪತ್ನಿ ಅಥವಾ ಶಿಕ್ಷಕಿಯ ಪತಿಯು ಬೇರೆ ಬೇರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಆ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಲಭ್ಯವಿರುವ ಖಾಲಿ ಸ್ಥಾನಕ್ಕೆ ವರ್ಗಾವಣೆ ಕೋರಲು ಅನುಮತಿ ನೀಡಲಾಗಿದೆ.ಆದರೆ, ಈ ಮೊದಲೇ ಇಬ್ಬರೂ ಅದೇ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಆಗ ಆದ್ಯತೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವರು ಅರ್ಹರಿರುವುದಿಲ್ಲ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳು (377 ಜೆ ಅನ್ವಯ), ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗಬಯಸುವವರಿಗೆ ವಿಶೇಷ ಆದ್ಯತೆ ಸಿಗಲಿದೆ.ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ. 11ರಷ್ಟು ಮಿತಿ ಇರುತ್ತದೆ.ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು ಎಂದು ಅಽಸೂಚನೆಯಲ್ಲಿ ತಿಳಿಸಲಾಗಿದೆ.ಬಹುತೇಕ ಉಳಿದೆಲ್ಲ ನಿಯಮಗಳು ಮುಂದುವರಿಯಲಿವೆ.