ನಿಮ್ಮ ಕಾಲನಿಗೆ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲ!!!

0

*ನೀವು ಬರುವುದಾದರೆ ನಿಮಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ-ತಹಶೀಲ್ದಾರ್ ಭರವಸೆ
*ಸ್ಥಳಾಂತರಕ್ಕೆ ಸಿದ್ದ ಎಂದ ಕೆಯ್ಯೂರು ಗ್ರಾಮದ 5 ದಲಿತ ಕುಟುಂಬಗಳು

ಪುತ್ತೂರು: ಕಳೆದ 50 ವರ್ಷಗಳಿಂದ ಮನೆ ಮಾಡಿಕೊಂಡಿದ್ದರು ಇದುವರೆಗೆ ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲ, ರಸ್ತೆ ಸಂಪರ್ಕಕ್ಕಾಗಿ ಇಲ್ಲಿರುವ 5 ದಲಿತ ಕುಟುಂಬಗಳು ನಿರಂತರವಾಗಿ ಇಲಾಖೆಗೆ ಅಲೆದಾಡಲುತ್ತಲೇ ಇದ್ದಾರೆ ಸಮಸ್ಯೆ ಪರಿಹಾರವಾಗಲೇ ಇಲ್ಲ. ಇಲ್ಲಿನ 5 ಕುಟುಂಬಗಳು ಸುಮಾರು 1.5 ಕಿ.ಮೀ ನಡೆದುಕೊಂಡೆ ಮನೆ ಸೇರಬೇಕು. ಮಕ್ಕಳು ಶಾಲೆಗೆ ತೆರಳಲು ಪಡುವ ಪಾಡು ಆ ದೇವರಿಗೆ ಪ್ರೀತಿ. ಇವರ ನೋವಿಗೆ ಇದುವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದು ಕೆಯ್ಯೂರು ಗ್ರಾಮದ ಕಣಿಯಾರು ದಂಬೆತ್ತಡ್ಕ ಓಡಪಲ್ಲದಲ್ಲಿ ವಾಸ್ತವ್ಯವಿರುವ 5 ದಲಿತ ಕುಟುಂಬಗಳ ನೋವಿನ ಕಥೆ.

ತಮ್ಮ ನೋವಿನ ಕಥೆಯನ್ನು ಅ.15 ರಂದು ಕೆಯ್ಯೂರು ಗ್ರಾಮಕ್ಕೆ ಗ್ರಾಮವಾಸ್ತವ್ಯಕ್ಕೆ ಬಂದು ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯರವರಲ್ಲಿ ಹೇಳಿಕೊಂಡಿದ್ದಾರೆ. ಗ್ರಾಮವಾಸ್ತವ್ಯ ಮುಗಿಸಿ ನೇರವಾಗಿ ಕಾಲನಿಗೆ ಭೇಟಿ ನೀಡಿದ ತಹಶೀಲ್ದಾರ್‌ರವರು ನಡೆದುಕೊಂಡೆ ಅಲ್ಲಿಗೆ ಸಮಸ್ಯೆ ಆಲಿಸಲು ತೆರಳಿದರು. ಮನೆಗೆ ತೆರಳುವ ಕಾಲುದಾರಿಯ ಅಕ್ಕಪಕ್ಕದಲ್ಲಿರುವ ಜಾಗವನ್ನು ಪರಿಶೀಲಿಸಿದ ತಹಶೀಲ್ದಾರ್‌ರವರು ಈ ಕಾಲನಿಗೆ ರಸ್ತೆ ಸಂಪರ್ಕ ಮಾಡಲು ಜಾಗದ ಸಮಸ್ಯೆ ಇರುವುದನ್ನು ಮನಗಂಡಿದ್ದಾರೆ. ಅಕ್ಕಪಕ್ಕದ ಜಮೀನುದಾರರಲ್ಲಿ ಮಾತುಕತೆ ನಡೆಸಿದರೂ ಕಾಲನಿಗೆ ರಸ್ತೆ ಸಂಪರ್ಕ ಕಷ್ಟಸಾಧ್ಯ ಎಂದು ತಹಶೀಲ್ದಾರ್ ಮನಗಂಡಿದ್ದಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಕಾಲನಿಯ ದಲಿತ ಕುಟುಂಬಗಳ ಜೊತೆ ತಹಶೀಲ್ದಾರ್ ಮಾತುಕತೆ ನಡೆಸಿದ್ದಾರೆ.

ನೀವು ಬರುವುದಾದರೆ ಪರ್‍ಯಾಯ ವ್ಯವಸ್ಥೆ
ನಿಮ್ಮ ಕಾಲನಿಗೆ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲ. ನೀವು ಬರುವುದಾದರೆ ನಿಮಗೆ ಪರ್‍ಯಾಯ ವ್ಯವಸ್ಥೆ ಮಾಡಲು ಇಲಾಖೆ ಸಿದ್ಧವಿದೆ. ನಿಮಗೆ ಬೇರೆ ಕಡೆ ಜಾಗವನ್ನು ಗುರುತಿಸಿ ಅಲ್ಲಿ ನಿಮಗೆ ವಾಸ್ತವ್ಯ ಮಾಡಲು ವ್ಯವಸ್ಥೆ ಮಾಡಲಾಗುವುದು ಇದಕ್ಕೆ ನೀವು ಸಿದ್ಧರಾಗಿದ್ದರೆ ಸ್ಥಳೀಯ ಗ್ರಾಪಂ ಮೂಲಕ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕಾಲನಿ ಕುಟುಂಬಸ್ಥರಲ್ಲಿ ತಹಶೀಲ್ದಾರ್ ಕೇಳಿಕೊಂಡಿದ್ದಾರೆ. ತಹಶೀಲ್ದಾರ್ ಭರವಸೆಗೆ 5 ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ರಸ್ತೆ ಸಂಪರ್ಕ ಮಾಡಲು ಸಾಧ್ಯವೇ ಇಲ್ಲವಾದರೆ ನಮಗೆ ಇಲ್ಲಿ ಬದುಕುವುದೇ ಕಷ್ಟ ಈಗಾಗಲೇ ಇಲ್ಲಿರುವ 2 ಕುಟುಂಬಗಳು ಮನೆ ಬಿಟ್ಟು ಹೋಗಿದ್ದಾರೆ.ಸರಕಾರ ನಮ್ಮ ಸಂಕಷ್ಟಕ್ಕೆ ಪರಿಹಾರ ನೀಡುವುದಾದರೆ ಎಲ್ಲಿಗೂ ಬರಲು ನಾವು ಸಿದ್ದರಿದ್ದೇವೆ ಎಂದು ತಹಶೀಲ್ದಾರ್‌ರವರಿಗೆ ಮಾತು ಕೊಟ್ಟಿದ್ದಾರೆ.

ಸಮಸ್ಯೆ ಪರಿಹಾರ ಸಂತಸದಲ್ಲಿ ದಲಿತ ಕುಟುಂಬಗಳು
ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯರವರು ಕೆಯ್ಯೂರು ಗ್ರಾಮವಾಸ್ತವ್ಯ ಭೇಟಿಯಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂಬ ಸಂತಸದಲ್ಲಿ ದಲಿತ ಕುಟುಂಬಗಳು ಈಗಾಗಲೇ ಪರ್‍ಯಾಯ ವ್ಯವಸ್ಥೆಯ ಕಡೆ ಚಿಂತನೆ ನಡೆಸಿದ್ದಾರೆ. ಗ್ರಾಮವಾಸ್ತವ್ಯ ಭೇಟಿ ಕಾರ್ಯಕ್ರಮ ಇಲ್ಲದೇ ಇರುತ್ತಿದ್ದರೆ ನಮ್ಮ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತಿತ್ತು ಎಂದು ಹೇಳುತ್ತಿರುವ ಕಾಲನಿ ನಿವಾಸಿಗಳು ತಹಶೀಲ್ದಾರ್‌ರವರ ಮಾನವೀಯ ಕಾರ್ಯಕ್ಕೆ ಕೃತಜ್ಞತೆಯಲ್ಲಿ ಸಲ್ಲಿಸಿದ್ದಾರೆ. ಮಕ್ಕಳ ಮುಂದಿನ ಶಿಕ್ಷಣದ ಹಿತದೃಷ್ಟಿಯಿಂದ ತಹಶೀಲ್ದಾರ್‌ರವರ ಈ ಭರವಸೆ ಕುಟುಂಬಸ್ಥರಲ್ಲಿ ಹೊಸ ಚೈತನ್ಯಕ್ಕೆ ಕಾರಣವಾಗಿದೆ. ಕೆಯ್ಯೂರು ಗ್ರಾಪಂ ತಾಲೂಕು ಆಡಳಿತ, ಜನಪ್ರತಿನಿಧಿಗಳು ಒಟ್ಟಾಗಿ ರಸ್ತೆ ಸಂಪರ್ಕದಿಂದ ವಂಚಿತರಾಗಿರುವ ಬಡ ದಲಿತ ಕುಟುಂಬಗಳ ಕಣ್ಣೀರು ಒರೆಸಲು ಅಧಿಕಾರಿಗಳ ಜೊತೆ ಕೈಜೋಡಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ತಹಶೀಲ್ದಾರ್ ಭೇಟಿ ಸಂದರ್ಭದಲ್ಲಿ ಗ್ರಾಮಲೆಕ್ಕಿಗ ಗೋಪಾಲ್, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಬಿ , ಕೆಯ್ಯೂರು ಗ್ರಾಮಕರಣಿಕರಾದ ಸ್ವಾತಿ, ಸಹಾಯಕ ನಾರಾಯಣ್, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

“ ಸಂಪರ್ಕ ರಸ್ತೆ ವ್ಯವಸ್ಥೆ ಇಲ್ಲದೆ ಬಹಳಷ್ಟು ತೊಂದರೆಯಾಗಿದೆ. ಮಕ್ಕಳಿಗೆ ಶಾಲೆಗೆ ಹೋಗಲು, ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಹೋಗಲು ಎಲ್ಲದಕ್ಕೂ ಕಷ್ಟವಾಗಿದೆ. ಈ ಬಗ್ಗೆ ನಾವು ಗ್ರಾಮವಾಸ್ತವ್ಯದಲ್ಲಿ ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದೇವೆ ಆ ದಿನವೇ ತಹಶೀಲ್ದಾರ್‌ರವರು ಕಾಲನಿಗೆ ಬಂದು ಪರಿಶೀಲನೆ ಮಾಡಿ,ನಿಮಗೆ ರಸ್ತೆ ಸಂಪರ್ಕ ಮಾಡಿಕೊಡುವುದು ಕಷ್ಟ, ನೀವು ಇಲ್ಲಿ ಹೇಗೆ ಇರುತ್ತೀರಿ. ನಿಮಗೆ ಬೇರೆ ಜಾಗ ಮಾಡಿಕೊಟ್ಟರೆ ಅಲ್ಲಿಗೆ ಬರುತ್ತೀರಾ ಎಂದು ಕೇಳಿದ್ದಾರೆ. ನಾವು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ಪಂಚಾಯತ್‌ಗೆ ಅರ್ಜಿ ನೀಡಲು ತಿಳಿಸಿದ್ದಾರೆ.”
—ಹರೀಶ್ ಓಡಪಲ್ಲ, ಕಾಲನಿ ನಿವಾಸಿ

“ ಕಣಿಯಾರು ದಂಬೆತ್ತಡ್ಕ ಓಡಪಲ್ಲ ದಲಿತ ಕಾಲನಿಗೆ ಸಂಪರ್ಕ ರಸ್ತೆ ಇಲ್ಲದೆ ಇರುವುದರಿಂದ ಇಲ್ಲಿರುವ ೫ ಬಡ ಕುಟುಂಬಗಳಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ತಹಶೀಲ್ದಾರ್‌ರವರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಈ ಕುಟುಂಬಗಳಿಗೆ ಬೇರೆ ಕಡೆ ಜಾಗ ಮಾಡಿಕೊಡುವ ಬಗ್ಗೆ ತಿಳಿಸಿದ್ದು ಖುಷಿ ಕೊಟ್ಟಿದೆ. ತಹಶೀಲ್ದಾರ್‌ರವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ.”
—ಕಿಟ್ಟ ಅಜಿಲ ಕಣಿಯಾರು, ಮಾಜಿ ಸದಸ್ಯ, ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here