- ಪೇಟೆಯೊಳಗೆ 6 ಮೀಟರ್, ಗ್ರಾಮೀಣ-4 ಮೀಟರ್.
- ಅಕ್ರಮ ತೆರವಿಗೆ ಸಮೀಕ್ಷೆ ನಡೆಸಿ ಗುರುತು ಹಾಕುವುದು.
- ರಾಜ್ಯ ಹೆದ್ದಾರಿ ಅಭಿವೃದ್ಧಿ ಆಗ್ರಹ.
ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಉಪ್ಪಿನಂಗಡಿ ಪೇಟೆಯ ಒಳಗೆ ರಸ್ತೆ ಬದಿಯಿಂದ 5 ಮೀಟರ್ ಅಂತರದ ಒಳಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 4 ಮೀಟರ್ ಅಂತರದ ಒಳಗೆ ಇರುವ ಅಕ್ರಮ ಕಟ್ಟಡ ಯಾ ವಿಸ್ತರಣೆಗಳು ಇದ್ದಲ್ಲಿ ಅಂತಹವುಗಳನ್ನು ತೆರವು ಮಾಡುವ ಸಲುವಾಗಿ ಸಮೀಕ್ಷೆ ನಡೆಸಿ ಗುರುತು ಮಾಡುವ ಬಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಅ. 18ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷರು ವಿಷಯ ಪ್ರಸ್ತಾಪಿಸಿ ಮಾತನಾಡಿ ಪೇಟೆಯ ಒಳಗಿನ ರಸ್ತೆ ಡಾಂಬರೀಕರಣಕ್ಕೆ ಶಾಸಕರು 30 ಲಕ್ಷ ರೂಪಾಯಿ ಅನುದಾನ ಇರಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಸದಸ್ಯರು ಪೇಟೆಯ ಒಳಗಿನ ರಸ್ತೆ ತೀರಾ ಇಕ್ಕಟ್ಟಾಗಿದೆ. ವಾಹನ ದಟ್ಟನೆಯೂ ಅಧಿಕವಾಗಿದೆ. ಹಳ್ಳಿಗಳಿಂದ ಇದೀಗ ಉಪ್ಪಿನಂಗಡಿ ಪೇಟೆಗೆ ಬರುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕಲ್ಲೇರಿ, ಆಲಂಕಾರು ಭಾಗದಿಂದ ಬರುವವರು ಆ ಊರಿನ ಅಭಿವೃದ್ಧಿಯಿಂದಾಗಿ ಉಪ್ಪಿನಂಗಡಿಗೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬರುವವರೂ ಇದ್ದರೂ ಉಪ್ಪಿನಂಗಡಿ ಪೇಟೆಯೊಳಗೆ ವಾಹನ ನಿಲುಗಡೆಗೆ ಸ್ಥಳವಕಾಶ ಇಲ್ಲದ ಕಾರಣ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಅಗಲೀಕರಣ ಮಾಡುವುದು ಅತೀ ಅಗತ್ಯ ಎಂದರು.
ಉಪ್ಪಿನಂಗಡಿ ಪೇಟೆ ದಿನೇ ದಿನೇ ಸೊರಗುತ್ತಾ ಇದೆ, ಇಲ್ಲಿನ ಅಭಿವೃದ್ಧಿಯ ದೃಷ್ಠಿಯಿಂದ ರಸ್ತೆ ಅಗಲೀಕರಣ ಮಾಡುವುದೊಂದೇ ಸೂಕ್ತವಾದುದು. ಆದ ಕಾರಣ ರಸ್ತೆ ಡಾಂಬರೀಕರಣ ಮಾಡುವ ಮುನ್ನ ರಸ್ತೆ ಅಗಲೀಕರಣ ಮಾಡುವ ಈ ಬಗ್ಗೆ ನಿರ್ಣಯ ಅಂಗೀಕರಿಸುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿ ಉಪ್ಪಿನಂಗಡಿ ಪೇಟೆಯ ಒಳಗಿನ ಕಟ್ಟಡ ಮಾಲಕರು ಮತ್ತು ವರ್ತಕರ ಸಹಕಾರ ಪಡೆದುಕೊಂಡು ಪೇಟೆಯೊಳಗೊಳಗಿನ ರಸ್ತೆ ಬದಿಯಿಂದ 6 ಮೀಟರ್ ಮತ್ತು ಗ್ರಾಮೀಣ ಪ್ರದೇಶದಲ್ಲಿ 4 ಮೀಟರ್ ಅಂತರದ ಒಳಗೆ ಇರುವ ಕಟ್ಟಡ ಯಾ ವಿಸ್ತರಣೆಗಳನ್ನು ತೆರವು ಮಾಡುವ ಸಲುವಾಗಿ ಸಮೀಕ್ಷೆ ನಡೆಸಿ ಗುರುತು ಮಾಡುವ ಬಗ್ಗೆ ನಿರ್ಣಯಿಸಲಾಯಿತು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಆಗ್ರಹ:
ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ನೇತ್ರಾವತಿ ಸೇತುವೆ ತನಕ ರಾಜ್ಯ ಹೆದ್ದಾರಿ ರಸ್ತೆ ಇದ್ದು, ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ನಿರ್ಮಾಣ ಆಗಿದೆ. ಆದರೆ ಇದಕ್ಕೆ ಪಂಚಾಯಿತಿ ಅನುದಾನ ಇಡುವುದಕ್ಕೆ ಆಗುವುದಿಲ್ಲ, ರಸ್ತೆ ಸಂಪೂರ್ಣವಾಗಿ ಕುಲಗೆಟ್ಟು ಹೋಗಿದ್ದು, ಈ ರಸ್ತೆಯನ್ನು ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡುವಂತೆ ಲೋಕೋಪಯೋಗಿ ಇಲಾಖೆಯನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.
ನೀರಿನ ಬಿಲ್, ತೆರಿಗೆ ಬಾಕಿ ಇದ್ದವರಿಗೆ ಸೌಲಭ್ಯ ಕಟ್.
ಪಂಚಾಯಿತಿಗೆ ಸುಮಾರು 11 ಲಕ್ಷ ರೂಪಾಯಿ ನೀರಿನ ಬಿಲ್ ಬಾಕಿ ಇದೆ, ಅದೇ ರೀತಿಯಾಗಿ ಮನೆ ತೆರಿಗೆ, ಕಟ್ಟಡ ತೆರಿಗೆ ಬಾಕಿ ಇರುತ್ತದೆ. ಇದರ ವಸೂಲಾತಿಗೆ ಕ್ರಮಕೈಗೊಳ್ಳುವುದು ಮತ್ತು ಪಾವತಿ ಮಾಡದೇ ಬಾಕಿ ಇರಿಸಿದವರಿಗೆ ಸೌಲಭ್ಯ ಕಟ್ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ತ್ಯಾಜ್ಯ ವಿಲೇವಾರಿ ಸಮಸ್ಯೆ ಸರಿ ಆಗಿಲ್ಲ.
ಕಳೆದ 6 ತಿಂಗಳಿನಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ, ಸರಿ ಮಾಡುತ್ತೇವೆ, ಎಂದು ಹೇಳುತ್ತಲೇ ಇದ್ದೀರಿ, ಆದರೆ ಸರಿ ಆಗುವುದಿಲ್ಲ. ಅದರ ನಿರ್ವಹಣೆ ಬಗ್ಗೆ ಟೆಂಡರು ಕರೆದು ಬೇರೆಯವರಿಗೆ ಬಿಟ್ಟುಕೊಡಿ ಎಂದು ಸದಸ್ಯರು ಸಲಹೆ ನೀಡಿದರು. ಆಗ ಅಧ್ಯಕ್ಷರು ಪ್ರತಿಕ್ರಿಯಿಸಿ 2 ದಿನಗಳ ಹಿಂದೆ ಮಾತಕತೆ ಮಾಡಲಾಗಿದೆ. ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದರು. ಆಗ ಸದಸ್ಯರು ಮತ್ತೆ ಪ್ರತಿಕ್ರಿಯಿಸಿ ಅಕ್ಟೋಬರ್ 31ರ ತನಕ ಗಡುವು ನೀಡಿ, ಅದರ ಮೊದಲು ಆಗದಿದ್ದಲ್ಲಿ ಬೇರೆಯವರನ್ನು ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು. ಅದಕ್ಕೆ ಅಧ್ಯಕ್ಷರು ಸಮ್ಮತಿಸಿದರು.
ಸಿಬ್ಬಂದಿಗಳ ಕೊರತೆ ಭರ್ತಿಗೆ ಆಗ್ರಹ:
ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ, ಸ್ವಚ್ಚತೆ ಬಿಲ್ ವಸೂಲಿ, ತೆರಿಗೆ ವಸೂಲಿಗಾರ ಹುದ್ದೆ ಖಾಲಿ ಇದ್ದು, ಇದನ್ನು ಭರ್ತಿ ಮಾಡಬೇಕು ಮತ್ತು ಈ ಹುದ್ದೆಗಳಿಗೆ ಕಳೆದ ಹಲವಾರು ವರ್ಷಗಳಿಂದ ದಿನಗೂಲಿ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಸಣ್ಣಣ್ಣ ಯಾನೆ ಸಂಜೀವ ಮಡಿವಾಳ, ವಿದ್ಯಾಲಕ್ಷ್ಮೀ ಪ್ರಭು, ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ ಮಾತನಾಡಿದರು. ಯು.ಕೆ. ಇಬ್ರಾಹಿಂ, ಉಷಾ ನಾಯ್ಕ್, ಶೋಭಾ, ಜಯಂತಿ, ವನಿತಾ, ನೆಬಿಸ, ಸೌದ ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ‍್ಯದರ್ಶಿ ದಿನೇಶ್ ವಂದಿಸಿದರು. ಲೆಕ್ಕಾಧಿಕಾರಿ ಜ್ಯೋತಿ ಸಹಕರಿಸಿದರು.