ಮನೆ ನಿವೇಶನ ಮಂಜೂರು ಆಗಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಮನವಿಗೆ ನಿರ್ಣಯ
ನೆಲ್ಯಾಡಿ: ಮನೆ ನಿವೇಶನ ಮಂಜೂರು ಆಗಿರುವ ಫಲಾನುಭವಿಗಳಿಗೆ ತುರ್ತಾಗಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಅ.20ರಂದು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಮನೆ ನಿವೇಶನಕ್ಕೆ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ನಿಗಮಕ್ಕೆ ಕಳಿಸಿ ವರ್ಷಗಳೇ ಕಳೆದಿವೆ. ಆದರೆ ಈ ತನಕವೂ ಫಲಾನುಭವಿಗಳಿಗೆ ಹಕ್ಕುಪತ್ರ ಮಂಜೂರಾಗಿ ಬಂದಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ತುರ್ತಾಗಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಲು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ:
ಗ್ರಾಮ ಪಂಚಾಯತ್‌ನ 2022-23ನೇ ಸಾಲಿನಲ್ಲಿ ಕ್ರಿಯಾಯೋಜನೆಯಲ್ಲಿ ಅಳವಡಿಸಿದ ಕಾಮಗಾರಿಗಳನ್ನು ವಹಿಸಿಕೊಂಡಿರುವ ಗುತ್ತಿಗೆದಾರರು ಕೂಡಲೇ ಕೆಲಸ ಪ್ರಾರಂಭಿಸಿ ಮುಗಿಸಿಕೊಡುವಂತೆ ಸೂಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ವಿವಿಧ ಯೋಜನೆಯಡಿ ಮನೆ ಮಂಜೂರಾದರೂ ಮನೆ ಕಾಮಗಾರಿ ಪ್ರಾರಂಭಿಸದೆ ಇರುವ ಫಲಾನುಭವಿಗಳು ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅ.14ರಂದು ನಡೆದ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸಾಮಾನ್ಯ ಸಭೆಗೆ ಮಂಡಿಸಲಾಯಿತು.
ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಗಂಗಾಧರ ಕೆ.ಎನ್., ಸಂತೋಷ್‌ಕುಮಾರ್ ಪಿ., ಉಮೇಶ್ ಓಡ್ರಪಾಲು, ನಝೀರ್ ಬೆದ್ರೋಡಿ, ಗಂಗಾಧರ ಕೆ.ಎಸ್., ವಿಮಲ, ಯಶೋಧಾ, ಪ್ರೆಸಿಲ್ಲಾ ಡಿ.ಸೋಜ, ರತ್ನ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಸ್ವಾಗತಿಸಿ, ಜಮಾ ಖರ್ಚು, ಸರಕಾರದ ಸುತ್ತೋಲೆಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.