ಪುತ್ತೂರು : ಉಪ್ಪಿನಂಗಡಿ ವೇದಶಂಕರ ನಗರದಲ್ಲಿರುವ ಶ್ರೀರಾಮ ಶಾಲೆಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಒಂದರಿಂದ ಐದನೇ ತರಗತಿ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಆರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ಯು.ಜಿ ರಾಧಾ ಮಾತನಾಡಿ ಮಕ್ಕಳ ಸರ್ವತೋಮುಖ ವಿಚಾರಗಳ ಪ್ರಗತಿಯು ನಮ್ಮ ಗುರಿಯಾಗಿದ್ದು, ಸಂಸ್ಕಾರಯುತ ವಿಚಾರಗಳ ಜೊತೆಗೆ ಶೈಕ್ಷಣಿಕವಾಗಿ ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಎಲ್ಲವೂ ನವೀನ ಮಾದರಿಯಲ್ಲೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಜೊತೆಗೆ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಮತ್ತು ಶಾಲೆಗೆ ಸಂಬಂಧಿಸಿದ ಇತರೆ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಶಾಲೆಯು ವ್ಯವಸ್ಥೆ ಮಾಡಿಕೊಟ್ಟಿದೆ. ತಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನೂತನ ಪೋಷಕ ಸಂಘದ ಪ್ರತಿನಿಧಿಗಳ ಮತ್ತು ಮಾತೃಭಾರತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಮುಖ್ಯ ಸೂಚನೆಗಳನ್ನು ನೀಡಿದರು. ಸೌಮ್ಯ ಮಾತಾಜಿ ಮತ್ತು ಕೃಪಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅಣವು, ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಪೋಷಕ ಸಂಘದ ಸದಸ್ಯ ಜಯಂತ ಪೊರೋಳಿ, ಗುಣಕರ ಅಗ್ನಾಡಿ, ಕೋಶಾಧಿಕಾರಿ ಸುಧೀರ್ ಟಿ.ಎಸ್ ಉಪಸ್ಥಿತರಿದ್ದರು.