ಪುತ್ತೂರು:ನೀರಿನೊಳಗೆ ಉಸಿರು ಕಟ್ಟಿಕೊಂಡು ಒಂದು ನಿಮಿಷ ಎರಡು ಸೆಕೆಂಡ್ ಕಾಲದಲ್ಲಿ ಮುಮ್ಮುಖವಾಗಿ 29 ತಿರುವುಗಳನ್ನು ಹಾಕುವ ಮೂಲಕ ಸೂರಿಕುಮೇರ್‌ನ ಚಂದ್ರಶೇಖರ ರೈಯವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಜೀವರಕ್ಷಕ ಮತ್ತು ತರಬೇತುದಾರರಾಗಿರುವ ಚಂದ್ರಶೇಖರ ರೈಯವರು ಲೇಡಿಹಿಲ್‌ನಲ್ಲಿರುವ ಪಾಲಿಕೆಯ ಈಜುಕೊಳದಲ್ಲಿ ಈ ಸಾಧನೆ ಮಾಡಿದ್ದಾರೆ. ಉಸಿರು ಬಿಗಿ ಹಿಡಿದುಕೊಂಡು 29 ಬಾರಿ ಮುಂಭಾಗದಿಂದ ತಿರುವು ಹಾಕುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮೂಲತಃ ಪುರುಷರಕಟ್ಟೆಯ ಇಂದಿರಾನಗರ ನಿವಾಸಿಯಾಗಿರುವ ಚಂದ್ರಶೇಖರ ರೈಯವರು ದಿ. ಜನಾರ್ದನ ರೈ ಹಾಗೂ ಪುಷ್ಪಾವತಿ ರೈ ದಂಪತಿ ಪುತ್ರ. ನರಿಮೊಗರು ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ದರ್ಬೆ ಸಂತ ಫಿಲೋಮಿನಾದಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಪೂರೈಸಿರುತ್ತಾರೆ. ರಾಷ್ಟ್ರಮಟ್ಟದ ಈಜುಪಟುವಾಗಿರುವ ಚಂದ್ರಶೇಖರ ರೈಯವರು ವಿಶ್ವವಿದ್ಯಾನಿಲಯ ಮಟ್ಟದ ಫೋಲ್‌ವಾಲ್ಟ್‌ನಲ್ಲಿ ಒಂದು ಬಾರಿ ಬೆಳ್ಳಿ ಹಾಗೂ ಎರಡು ಬಾರಿ ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಹಲವು ರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವ ನಾನು ಜನರಿಗೆ ಈಜಿನ ಮಹತ್ವ ತಿಳಿಸಲು ಈ ಸಾಹಸ ಮಾಡಿದ್ದೇನೆ. ಸಮುದ್ರದ ಈಜಿನಲ್ಲಿ ದಾಖಲೆ ನಿರ್ಮಿಸಿರುವ ಗೋಪಾಲ ಖಾರ್ವಿ, ನಾಗರಾಜ ಖಾರ್ವಿ, ಗಂಗಾಧರ ಕಡೆಕಾರ್, ರಾಷ್ಟ್ರೀಯ ಈಜುಪಟು ಸೀತಾರಾಮ ಶೆಟ್ಟಿ, ಮಹಮ್ಮದ್ ಅವರ ಪ್ರೇರಣೆಯಿಂದ ಈ ಸಾಧನೆ ಮಾಡಿದ್ದೇನೆ. ನೀರಿನಲ್ಲಿ ಊರ್ಧ್ವ ಧನುರಾಸನ(ನೀರಿನೊಲಗೆ ತಲೆ ಕೆಳಗಾಗಿ ನಿಲ್ಲುವುದು)ಮತ್ತು ಅತೀ ಹೆಚ್ಚು ಸಮಯ ನೀರಿನಲ್ಲಿ ಮುಳುಗಿರುವ ಸಾಹಸ ಮಾಡುವುದು, ಬ್ರೀದ್‌ಹೋಲ್‌ನಲ್ಲಿ ಈಗಾಗಲೇ ಮಧ್ಯಪ್ರದೇಶ ವ್ಯಕ್ತಿಯೋರ್ವರು 2.37 ನಿಮಿಷ ಸಾಧನೆ ಮಾಡಿದ್ದು ಅದನ್ನು ಮುರಿದು ಹೊಸ ದಾಖಲೆ ನಿರ್ಮಿಸುವುದು, ಬ್ಯಾಕ್ ಸ್ಲಿಪ್(ಹಿಮ್ಮುಖವಾಗಿ ತಿರುವು) ದಾಖಲೆ ನಿರ್ಮಿಸುವ ಪ್ರಯತ್ನ ನಡೆಸುವ ಇಚ್ಚೆಯಿದೆ ಎಂದು ಚಂದ್ರಶೇಖರ ರೈಯವರು ತಿಳಿಸಿದ್ದಾರೆ.