- 80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇರುತ್ತದೆಯೇ?-ಸಚಿವ ಎಂ.ಟಿ.ಬಿ
- ಶಾಸಕನಾದರೆ ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇನೆ-ಉದ್ಯಮಿ ಅಶೋಕ್ ರೈ
- ಸುಳ್ಳು ಸುದ್ದಿ ಬಗ್ಗೆ ಎಚ್ಚರ, ದೇಶದ ಭದ್ರತೆಗೆ ಸವಾಲೊಡ್ಡಬಹುದು-ಪ್ರಧಾನಿ ಮೋದಿಜಿ
ಪತ್ರಕರ್ತರಿಗೆ ದೀಪಾವಳಿಯ ಉಡುಗೊರೆಯೊಂದಿಗೆ ಮುಖ್ಯಮಂತ್ರಿ ಕಛೇರಿಯಿಂದ 2.5 ಲಕ್ಷ ಕ್ಯಾಶ್ ಕೊಡುಗೆ, ಸಚಿವ ಸುಧಾಕರ್‌ರಿಂದ ಆಯ್ದ ಪತ್ರಕರ್ತರಿಗೆ ಚಿನ್ನದ ನಾಣ್ಯ ಕೊಡುಗೆ ಎಂಬ ವಿಚಾರ ಬಹಳ ಚರ್ಚೆಯಲ್ಲಿದೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಿಗೆ ನೀಡಿದ ಮೊತ್ತವನ್ನು ಹಿಂತಿರುಗಿಸಿದ್ದಾರೆ. ಹಲವು ಪತ್ರಕರ್ತರು ಆ ರೀತಿ ಮಾಡಿದ್ದಾರೆ ಎಂಬುವುದು ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ. ಪತ್ರಕರ್ತರನ್ನು, ಪತ್ರಿಕೆಯನ್ನು, ಮಾಧ್ಯಮದವರನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಬರೆಯದಂತೆ ಮತ್ತು ತಮ್ಮ ಪರವಾಗಿ ಬರೆಯುವಂತೆ ಮಾಡುವ ಪ್ರಯತ್ನ ಬಹಳ ಹಿಂದಿನಿಂದಲೇ ಇದೆ. ಆಡಳಿತದಲ್ಲಿ ಇರುವವರು, ಇರದವರು ಅದನ್ನು ಮಾಡುತ್ತಲೇ ಇರುತ್ತಾರೆ. ಸುದ್ದಿಗಳನ್ನು ಹಾಕಲು ಹಾಗೂ ಮುಚ್ಚಿಡಲು ಪತ್ರಕರ್ತರ ಬೆಂಬಲ ಪಡೆಯುವ ಘಟನೆಗಳು ನಡೆದಿದೆ. ಈ ಮೇಲಿನ ಕಾರಣದಿಂದಾಗಿ ಯಾವ ಪತ್ರಿಕೆಯನ್ನು, ಯಾವ ವರದಿಯನ್ನು ನಂಬಬೇಕು, ಹೀಗಾದರೆ ಭ್ರಷ್ಟಾಚಾರ ನಿಲ್ಲುವುದು ಹೇಗೆ? ಎಂಬ ಪ್ರಶ್ನೆ ಜನರ ಮುಂದಿದೆ. ಇನ್‌ಸ್ಪೆಕ್ಟರ್ ನಂದೀಶ್ ಹೃದಯಾಘಾತ ಸುದ್ದಿ ಕೇಳಿದ ಸಚಿವ ಎಂ.ಟಿ.ಬಿ.ನಾಗರಾಜ್‌ರವರು 70-80 ಲಕ್ಷ ಹಣ ಕೊಟ್ಟು (ಪೋಸ್ಟ್‌ಗೆ) ಬಂದರೆ ಹೃದಯಾಘಾತ ಆಗದೇ ಇರುತ್ತದೆಯೇ? ಎಂದು ಹೇಳಿದ ವೀಡಿಯೋ ವೈರಲ್ ಆಗಿದೆ. ಅಷ್ಟೆಲ್ಲಾ ಹಣ ಕೊಟ್ಟು ಕೆಲಸ ಮತ್ತು ಪೋಸ್ಟಿಂಗ್ ಪಡೆಯುವ ಅಧಿಕಾರಿಗಳು ಯಾರ‍್ಯಾರಿಗೆ ಹಣ ಕೊಡುತ್ತಾರೊ? ಆ ಅಧಿಕಾರಿಗಳು ಹಣ ಮಾಡಲು ಜನರಿಗೆ ತೊಂದರೆ ಕೊಟ್ಟು ಸುಲಿಗೆ ಮಾಡಲೇ ಬೇಕಲ್ಲವೇ?. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಲ್ಲವೇ?.
ಈ ವ್ಯವಸ್ಥೆಯಿಂದ ಹೊರಗೆ ಬರಬೇಕಾದರೆ ಚುನಾವಣೆಯಲ್ಲಿ ಭ್ರಷ್ಟಾಚಾರ ರಹಿತ ಜನಪ್ರತಿನಿಧಿಗಳನ್ನು, ಪಕ್ಷಗಳನ್ನು ಬಯಸುವುದು ಮತ್ತು ಆರಿಸುವುದು ಒಂದೇ ದಾರಿ. ಹಾಗೆ ಮಾಡಿದರೆ ಮಾತ್ರ ಭ್ರಷ್ಟಾಚಾರದ ಈ ಸುಳಿಯಿಂದ ಜನತೆ ಹೊರಗೆ ಬರಬಹುದು. ವ್ಯವಸ್ಥೆ ಸರಿಯಾಗಬಹುದು. ರೈ ಎಸ್ಟೇಟ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವದ ಸಂಭ್ರಮದಲ್ಲಿ, ಶಾಸಕ ಸ್ಥಾನದ ಆಕಾಂಕ್ಷಿಯಾಗಿರುವ ಉದ್ಯಮಿ ಅಶೋಕ್ ರೈರವರು ಭ್ರಷ್ಟಾಚಾರ ಬಡವರ ಮೇಲಿನ ಅನ್ಯಾಯ ತಡೆಯಬೇಕು. ತಾನು ಶಾಸಕನಾದರೆ ಅದನ್ನು ಮಾಡುವುದಾಗಿ ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಪಕ್ಷದ ಎಲ್ಲಾ ಅಭ್ಯರ್ಥಿಗಳು ಆ ರೀತಿ ಘೋಷಣೆಯನ್ನು ಮಾಡಬೇಕು ಎಂದು ಜನತೆ ಬಯಸಬೇಕು. ಓಟು ನೀಡುವಾಗ ಪಕ್ಷ, ಜಾತಿ, ಧರ್ಮಕ್ಕೆ ನೀಡುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಅದಕ್ಕೆ ನೀಡಬೇಕು. ಯಾಕೆಂದರೆ ಲಂಚ, ಭ್ರಷ್ಟಾಚಾರ ಇದ್ದರೆ, ಪಕ್ಷ, ಜಾತಿ, ಧರ್ಮ ಮಾತ್ರವಲ್ಲ ಜನತೆ ಹಾಗೂ ದೇಶವೇ ನಾಶವಾಗುತ್ತದೆ ಎಂಬುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಿ ಅಭಿವೃದ್ಧಿಯಾಗುವುದು ಮಾತ್ರವಲ್ಲ ಜನರೂ ಸ್ವತಂತ್ರರಾಗಿ ನ್ಯಾಯಯುತವಾಗಿ ಬದುಕಬಹುದು.
ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಆಗುತ್ತಿರುವ ಅವಾಂತರಗಳನ್ನು, ತೊಂದರೆಗಳನ್ನು, ಮಾನಹಾನಿ, ಜೀವಹಾನಿ ಘಟನೆಗಳನ್ನು ಬಹಳ ಹಿಂದಿನಿಂದಲೇ ಸುದ್ದಿ ಆಂದೋಲನವಾಗಿ ವಿರೋಧಿಸುತ್ತಲೇ ಬಂದಿದೆ. ಆ ಹೋರಾಟದ ಪರಿಣಾಮವಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದೆ. ತಮಗಾಗಿರುವ ಅನ್ಯಾಯವನ್ನು ಪ್ರತಿಭಟಿಸಲು ಮುಂದಾಗಿ ಕೇಸನ್ನು ಎದುರಿಸಿದೆ. ಮಾತ್ರವಲ್ಲ ಪತ್ರಿಕೆಯನ್ನು ನಿಲ್ಲಿಸಿ ಜನರ ಬೆಂಬಲವನ್ನು ಪಡೆದು ಹೋರಾಟ ನಡೆಸಿ ಯಶಸ್ವಿಯಾಗಿದೆ. ಪ್ರಧಾನಿ ಮೋದೀಜಿಯವರು ‘ಸುಳ್ಳು ಸುದ್ದಿ ಬಗ್ಗೆ ಎಚ್ಚರ ವಹಿಸಬೇಕು, ಫೇಕ್ ನ್ಯೂಸ್ ದೇಶದ ಭದ್ರತೆಗೆ ಸವಾಲೊಡ್ಡಬಹುದು’ ಎಂದು ರಾಜ್ಯಗಳ ಗೃಹ ಸಚಿವರ ಚಿಂತನಾ ಸಭೆಯಲ್ಲಿ ತಿಳಿಸಿದ್ದಾರೆ. ಆ ಕರೆ ಅತ್ಯಂತ ಪ್ರಾಮುಖ್ಯ ಕರೆ ಎಂದು ಜನತೆ ಪರಿಗಣಿಸಬೇಕಾಗಿದೆ. ಈ ಹೇಳಿಕೆ ಐದಾರು ವರ್ಷಗಳ ಹಿಂದೆಯೇ ಬರುತ್ತಿದ್ದರೆ ಎಷ್ಟೋ ಸಾವು, ನೋವುಗಳು ಕಡಿಮೆಯಾಗುತ್ತಿದ್ದವು. ಸುದ್ದಿಗೂ ಆ ತರ ತೊಂದರೆಯಾಗುತ್ತಿರಲಿಲ್ಲ ಎಂಬುವುದನ್ನು ನೆನಪಿಸುತ್ತಾ ಮುಂದಕ್ಕಾದರೂ ಪ್ರಧಾನಿ ಮೋದಿಜೀಯವರ ಕರೆ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡುತ್ತಿರುವವರ ಮನಸ್ಸಲ್ಲಿ ಪರಿವರ್ತನೆ ತರಲಿ, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರಲಿ ಎಂದು ಆಶಿಸುತ್ತೇನೆ.