ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮನೆಯೊಂದರಿಂದ 107 ಗ್ರಾಂ ಚಿನ್ನಾಭರಣ ಕಳವುನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕುಖ್ಯಾತ ಕಳ್ಳನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಜಿಲ್ಲೆಯ ತಳಿಪರಂಬ ಆಲಕೋಡ್ ಕೊಲ್ಲಪರಂಬ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಕೆ. ಯು.(42 ವ.) ಬಂಧಿತ ಆರೋಪಿ. ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನವಾದ ಸ್ವತ್ತುಗಳನ್ನು ಕಾಸರಗೋಡಿನ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಕಳವುಗೈದ ಚಿನ್ನಾಭರಣಗಳ ಪೈಕಿ 80 ಗ್ರಾಂ ಚಿನ್ನಾಭರಣವನ್ನು ಕಾಸರಗೋಡಿನ ಜ್ಯುವೆಲ್ಲರಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 3,71,600 ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್. ಇ.ರವರ ನೇತೃತ್ವದಲ್ಲಿ ಠಾಣಾ ಎಸ್.ಐ.ಗಳಾದ ಸಂದೀಪ್ ಕುಮಾರ್ ಶೆಟ್ಟಿ, ರುಕ್ಮ ನಾಯ್ಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಘಟನೆಯ ವಿವರ: ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಉಮ್ಮರ್ ಎಂಬವರ ಮನೆಯಲ್ಲಿ ಸಂಬಂಧಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾ. 9ರಂದು ರಾತ್ರಿ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಕಳವಾಗಿದ್ದ ಚಿನ್ನದ ಮೌಲ್ಯ 4,28,೦೦೦ ರೂ. ಎಂದು ಅಂದಾಜಿಸಲಾಗಿತ್ತು. ಮನೆಯವರು ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.