ಪುತ್ತೂರು:7 ವರ್ಷದ ಹಿಂದೆ ಆಲಂಕಾರಿನಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಗಳಿಬ್ಬರನ್ನು ಪುತ್ತೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆಲಂಕಾರು ನಿವಾಸಿ ರಮೇಶ್(30ವ)ಅವರು 2018ರ ಮಾ.22ರಂದು ತೋಟದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಆಲಂಕಾರು ಗ್ರಾಮದ ನೀರಕಣಿ ಎಂಬಲ್ಲಿ ರವೀಂದ್ರ ಪೂಜಾರಿ ಮತ್ತವರ ಮಗ ಜಯಕೀರ್ತಿ ಅವರು, ರಮೇಶ್ ಅವರನ್ನು ತಮ್ಮಲ್ಲಿಗೆ ಕೆಲಸಕ್ಕೆ ಬರುವಂತೆ ಹೇಳಿ,ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ರಮೇಶ್ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಹಲ್ಲೆ ನಡೆಸಿದ ಆರೋಪದಲ್ಲಿ ರವೀಂದ್ರ ಪೂಜಾರಿ ಮತ್ತು ಜಯಕೀರ್ತಿ ಅವರ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಬ್ಬರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಮಸ್ಕರೇನ್ಹಸ್, ಮೋಹಿನಿ ವಾದಿಸಿದ್ದರು.
