ನೆಲ್ಯಾಡಿ: ಸುಮಾರು 70 ವರ್ಷಗಳ ಹಿಂದೆ ಬಜತ್ತೂರು ಗ್ರಾಮದ ಮಣಿಕ್ಕಳ ಬೈಲಿನಲ್ಲಿ ನಿರ್ಮಿಸಲಾಗಿದ್ದ ಗ್ರಾಮದೈವಗಳಾದ `ಮೂವರು ದೈಯೊಂಕುಲು’ ಸೇರಿದ ಮಾಡ ಅಜೀರ್ಣಾವಸ್ಥೆಯಲ್ಲಿದ್ದು, ಪ್ರಸ್ತುತ ಮೂವರು ದೈವಗಳ ಸಮಿತಿ ಆಶ್ರಯದಲ್ಲಿ ಈ `ಮಾಡ’ವನ್ನು ಪುನರ್ ನಿರ್ಮಾಣದ ಕಾರ್ಯಕ್ಕೆ ಅ.29ರಂದು ಚಾಲನೆ ನೀಡಲಾಯಿತು.
ಕಾಂಚನ ಮನೆತನ ನಿರ್ಮಿಸಿದ ಈ ದೈವಗಳ ಮಾಡ ಇದೀಗ ಪೂರ್ಣವಾಗಿ ಅಜೀರ್ಣಗೊಂಡಿದ್ದು, ಸುಮಾರು ರೂ.20 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಂರ್ಪಸಂಸ್ಕಾರ, ನವಗೃಹ ಪೂಜೆ, ಅಘೋರ ಹೋಮ, ಪಂಚಮೂರ್ತಿ ಆರಾಧನೆ, ತಿಲ ಹೋಮ, ಅನುಜ್ಞಾ ಕಲಶ ಮತ್ತಿತರ ಧಾರ್ಮಿಕ ಹಾಗೂ ತಾಂತ್ರಿಕ ಕಾರ್ಯಗಳನ್ನು ನಡ್ಪ ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕಿಲ್ಲಾಯ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ನೂತನ ಮಾಡ ನಿರ್ಮಾಣದ ಕಾರ್ಯ ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದ್ದು, ಈ ಮಾಡದ ಜತೆಗೆ ಮೂಲಸ್ಥಳದಲ್ಲಿರುವ ಭಿನ್ನ ಬಿಂಬಗಳ ಬದಲಿಗೆ ಹೊಸ ಬಿಂಬಗಳನ್ನು ಅಳವಡಿಕೆ ಮಾಡಲಾಗುವುದು. ಈ ಬಗ್ಗೆ ಈ ಹಿಂದೆ ನಡೆದ ಪ್ರಶ್ನಾ ಚಿಂತನೆ ಪ್ರಕಾರ ನೂತನ ದೈವಗಳ ಮಾಡ ನಿರ್ಮಾಣಗೊಳ್ಳಲಿದೆ. ಸಂಪೂರ್ಣವಾಗಿ ಶಿಲಾಮಯವಾಗಲಿರುವ ನೂತನ ಮಾಡದ ಕಾರ್ಯಕ್ಕೆ ತಾಂತ್ರಿಕ ಸೇವಾ ಕಾರ್ಯಗಳು ಈಗಾಗಲೇ ನಡೆಸಲಾಗಿದೆ. ಧಾರ್ಮಿಕ-ತಾಂತ್ರಿಕ ಸೇವಾ ಕಾರ್ಯದಲ್ಲಿ ಮೂವರು ದೈವಗಳ ಸಮಿತಿ ಮುಖಂಡರಾದ ಜಗದೀಶ್ ರಾವ್ ಮಣಿಕ್ಕಳ, ಮುರಳೀಧರ್ ರಾವ್ ಮಣಿಕ್ಕಳ, ರಾಮಣ್ಣ ಗೌಡ ಮೇಲಿನಮನೆ, ದೇರಣ್ಣ ಗೌಡ ಓಮಂದೂರು, ದಿನೇಶ್ ಓಮಂದೂರು, ಹೊನ್ನಪ್ಪ ಗೌಡ ಕುದುರು, ವಿಠಲ ಗೌಡ ಹೊಸಮನೆ, ಧನಂಜಯ ಗೌಡ ಗುತ್ತಿಮಾರು, ಉಮೇಶ್ ಮಾಯಿತಾಲು, ವಿಶ್ವನಾಥ ಗೌಡ ಉಕ್ರಪಳಿಕೆ, ರಾಘವ ಗೌಡ ಗುತ್ತಿಮಾರು, ರುಕ್ಮಯ್ಯ ಗೌಡ ಓಮಂದೂರು, ಶ್ರೀಧರ ಗೌಡ ನಡ್ಪ ಮತ್ತಿತರರು ಭಾಗವಹಿಸಿದ್ದರು.