ಅರಿಯಡ್ಕ ಗ್ರಾಪಂ ಸಾಮಾನ್ಯ ಸಭೆ
ಪುತ್ತೂರು: ಪಂಚಾಯತ್‌ನ ಶೇ.25 ರ ನಿಧಿಯ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮಾತ್ರ ಬಳಸಿಕೊಳ್ಳಲು ಅವಕಾಶ ಇದ್ದು ಇತರರಿಗೆ ಬಳಕೆ ಮಾಡುವಂತಿಲ್ಲ ಆದರೆ ಇತರರಲ್ಲಿ ಬಹಳಷ್ಟು ಮಂದಿ ಕಡು ಬಡತನದಲ್ಲಿದ್ದಾರೆ ಆದ್ದರಿಂದ ಬಡತನದಲ್ಲಿರುವವರಿಗೆ ಶೇ.25 ರ ನಿಧಿಯಿಂದ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಎಂದು ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಈ ಬಗ್ಗೆ ಚರ್ಚೆ ನಡೆದು ಸರಕಾರಕ್ಕೆ ಮನವಿ ಮಾಡಿಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಜಯಂತಿ ಪಟ್ಟುಮೂಲೆ, ಉಷಾ ರೇಖಾ ರೈಯವರು ವಿಷಯ ಪ್ರಸ್ತಾಪಿಸಿ, ಶೇ.25 ರ ನಿಧಿಯನ್ನು ಇತರರಿಗೂ ಬಳಕೆ ಮಾಡುವಂತಿದ್ದರೆ ಬಡವರಿಗೆ ಪ್ರಯೋಜನ ಆಗುತ್ತಿತ್ತು ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು, ಶೇ.25 ನಿಧಿಯನ್ನು ಪ.ಜಾತಿ ಮತ್ತು ಪಂಗಡಕ್ಕೆ ಮಾತ್ರ ಬಳಕೆಗೆ ಅವಕಾಶ ಇದೆ. ಇತರರಿಗೂ ಬಳಕೆ ಮಾಡಲು ಅವಕಾಶ ಕೊಡುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಮನೆ ಕಾಮಗಾರಿ ಕೂಡಲೇ ಆರಂಭಿಸಿ
ಸರಕಾರದಿಂದ ಮನೆ ಮಂಜೂರುಗೊಂಡ ಫಲಾನುಭವಿಗಳು ಈ ಕೂಡಲೇ ಮನೆ ಕಾಮಗಾರಿ ಆರಂಭಿಸುವಂತೆ ತಿಳಿಸಲಾಯಿತು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು ಮಾತನಾಡಿ, ಮನೆ ಬೇಕು ಎಂದು ಬೇಡಿಕೆ ಇಡುತ್ತಾರೆ ಆದರೆ ಮನೆ ಮಂಜೂರುಗೊಂಡ ಬಳಿಕ ಕಾಮಗಾರಿ ಆರಂಭಿಸುತ್ತಿಲ್ಲ ಈಗಾಗಲೇ ಪಂಚಾಯತ್‌ನ ಮಂಜೂರುಗೊಂಡ 11 ಮನೆಗಳ ಕಾಮಗಾರಿ ಪೌಂಡೇಷನ್ ಹಂತಕ್ಕೂ ತಲುಪಿಲ್ಲ ಆದ್ದರಿಂದ ಫಲಾನುಭವಿಗಳು ಕೂಡಲೇ ಮನೆ ಕಾಮಗಾರಿ ಆರಂಭಿಸಬೇಕು, ವಾರ್ಡ್ ಸದಸ್ಯರು ಫಲಾನುಭವಿಗಳಿಗೆ ಮನೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲು ತಿಳಿಸಬೇಕು ಎಂದು ಕೇಳಿಕೊಂಡರು.
ಘನ ತ್ಯಾಜ್ಯ ಘಟಕ್ಕೆ ಹೋಗುವ ದಾರಿಯನ್ನು ಕಾಂಕ್ರಿಟೀಕರಣಗೊಳಿಸಿ
ಘನ ತ್ಯಾಜ್ಯ ಘಟಕ್ಕೆ ಹೋಗುವ ದಾರಿಯನ್ನು ಕಾಂಕ್ರಿಟೀಕರಣಗೊಳಿಸಬೇಕು ಎಂದು ಈಗಾಗಲೇ 15 ನೇ ಹಣಕಾಸು ಯೋಜನೆಯಲ್ಲಿ ಅನುದಾನ ಇಡಲಾಗಿದ್ದರೂ ಇನ್ನೂ ಕಾಂಕ್ರಿಟೀಕರಣಗೊಳಿಸಿಲ್ಲ ಯಾಕೆ ಎಂದು ಲೋಕೇಶ್ ಚಾಕೋಟೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಸೌಮ್ಯರವರು,ಆ ವಾರ್ಡಿನಿಂದ ಸದಸ್ಯರು ಕಾಂಕ್ರಿಟೀಕರಣಕ್ಕೆ ಶಿಲನ್ಯಾಸ ಮಾಡಬೇಕು ಒತ್ತಾಯಿಸಿದರಿಂಲೇ ಕಾಂಕ್ರಿಟ್ರೀಕರಣಕ್ಕೆ ಸ್ವಲ್ಪ ತಡವಾಯಿತು. ಅದರೆ ನಾವು ಇದುವರೆಗೆ 15ನೆ ಕಾಮಗಾರಿಗಲಿಗೆ ಶಿಲನ್ಯಾಸ ಮಾಡಿಲ್ಲ. ಈ ಕೂಡಲೇ ಕಾಂಕ್ರಿಟೀಕರಣ ಮಾಡಲು ಶಂಕುಸ್ಥಾಪನೆ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ರಸ್ತೆ ನಮ್ಮಿಂದ ಹಾಳಾದರೆ ನಾವೇ ಹೊಣೆಗಾರರು
ನಮ್ಮ ಮನೆಗೆ ಕೆಂಪು ಕಲ್ಲು ಅಥವಾ ಇನ್ನಿತರ ಸಾಮಾಗ್ರಿಗಳನ್ನು ಘನವಾಹನದಲ್ಲಿ ತರುವಾಗ ರಸ್ತೆ ಹಾಳಾದರೆ ಅದಕ್ಕೆ ನಾವೇ ಹೊಣೆಗಾರರು ಇದನ್ನು ಪಂಚಾಯತ್ ಸರಿ ಮಾಡಿಕೊಡುತ್ತದೆ ಎಂದು ತಪ್ಪು ಮಾಹಿತಿ ಕೊಡಬಾರದು ಎಂದು ಸಲ್ಮಾ ಸಭೆಗೆ ವಿನಂತಿಸಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು, ಇದು ಉತ್ತಮ ಸಲಹೆ ಎಂದು ಹೇಳಿದರು.
ಕಾಮಗಾರಿಗಳ ಪರಿಶೀಲನೆ ಬಳಿಕವೇ ಹಸ್ತಾಂತರ ಆಗಬೇಕು
ಗ್ರಾಮದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳನ್ನು ಅಧ್ಯಕ್ಷರು ಸ್ಥಳಕ್ಕೆ ಹೋಗಿ ನೋಡಿ ಪರಿಶೀಲನೆ ಮಾಡಬೇಕು ಈ ಬಗ್ಗೆ ನಿರ್ಣಯ ಮಾಡಿ ಎಂದು ಮೋನಪ್ಪ ಪೂಜಾರಿ ಕೆರೆಮಾರು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ನಾನು ಹೋಗುವುದಿಲ್ಲ ಎಂದು ಹೇಳಿಲ್ಲ, ಎಲ್ಲಾ ಕಾಮಗಾರಿಗಳನ್ನು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತೇನೆ ಎಂದರು. ಕಾಮಗಾರಿಗಳನ್ನು ಪಂಚಾಯತ್‌ಗೆ ಹಸ್ತಾಂತರ ಮಾಡುವ ಮೊದಲು ಅಧ್ಯಕ್ಷರು ಆ ಕಾಮಗಾರಿಯನ್ನು ಪರಿಶೀಲನೆ ಮಾಡಿರಬೇಕು, ಪರಿಶೀಲನೆ ಮಾಡಿದ ನಂತರವೇ ಕಾಮಗಾರಿಯನ್ನು ಪಂಚಾಯತ್‌ಗೆ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಮೋನಪ್ಪ ಪೂಜಾರಿ ತಿಳಿಸಿದರು.
ಸೋಲಾರ್ ಲೈಟ್ ದುಬಾರಿ
ದಾರಿ ದೀಪಗಳಾಗಿ ಸೋಲಾರ್ ಲೈಟ್‌ಗಳನ್ನು ಅಳವಡಿಸುವುದು ಪಂಚಾಯತ್‌ಗೆ ದುಬಾರಿ. ಸೋಲಾರ್ ಲೈಟ್‌ಗಳು ಒಂದೇ ವರ್ಷದಲ್ಲಿ ಹಾಳಾಗಿ ಹೋಗುತ್ತವೆ ಅದರ ಬದಲು ವಿದ್ಯುತ್ ದೀಪಗಳನ್ನೇ ದಾರಿ ದೀಪಗಳಾಗಿ ಬಳಕೆ ಮಾಡುವುದು ಸೂಕ್ತ ಎಂದು ಮೋನಪ್ಪ ಪೂಜಾರಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ವಿದ್ಯುತ್ ದೀಪ ಅಳವಡಿಸಲು ಸಾಧ್ಯವಿಲ್ಲದ ಕಡೆ ಮಾತ್ರ ಸೋಲಾರ್ ಲೈಟ್ ಅಳವಡಿಸುತ್ತಿದ್ದೇವೆ ಎಂದು ತಿಳಿಸಿದರು.ಮಾಡ್ನೂರು 2 ಮತ್ತು 3 ನೇ ವಾರ್ಡ್‌ನಲ್ಲಿ ದಾರಿದೀಪ ದುರಸ್ತಿಯಾಗಿಲ್ಲ ಯಾಕೆ? ಕಾಂಗ್ರೆಸ್ ಸದಸ್ಯರು ಇರುವುದು ಎಂದು ದುರಸ್ತಿಯಾಗಿಲ್ಲವೋ ಎಂದು ಮೋನಪ್ಪ ಪೂಜಾರಿ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಹರೀಶ್ ಜಾರತ್ತಾರು, ಭಾರತಿಯವರು, ಬಿಜೆಪಿ ಸದಸ್ಯರು ಇರುವ ವಾರ್ಡ್‌ಗೂ ಬಂದಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು, ದಾರಿ ದೀಪ ದುರಸ್ತಿಯಾಗದೇ ಇರುವುದಕ್ಕೆ ನನಗೂ ನೋವಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಎಂಬುದಿಲ್ಲ ದಾರಿದೀಪ ಮುಗಿದ ಕಾರಣ ಅಳವಡಿಸಲಾಗಿಲ್ಲ, ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಜಲಪ್ರೇರಕಿ ವಿರುದ್ಧ ಗರಂ ಆದ ಸದಸ್ಯರು
ಪಂಚಾಯತ್ ಜಲಪ್ರೇರಕಿಯಾಗಿರುವ ಉಷಾ ಎಂಬವರು ಪಂಚಾಯತ್ ಕೆಲಸದ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನ ಸಭೆಯಲ್ಲಿ ಮಾತನಾಡಿದ್ದಾರೆ ಎಂಬ ವಿಷಯದಲ್ಲಿ ಚರ್ಚೆ ನಡೆಯಿತು. ಆಶಾ ಕಾರ್ಯಕರ್ತೆ ಹಾಗೂ ಜಲಪ್ರೇರಕಿಯಾಗಿರುವ ಉಷಾರವರು ಮೋರಿ ಆಗಿಲ್ಲ ಎಂದು ಸಾಮಾಜಿಕ ಲೆಕ್ಕಪರಿಶೋಧನ ಸಭೆಯಲ್ಲಿ ಪಂಚಾಯತ್ ಕೆಲಸದ ಬಗ್ಗೆ ಮಾತನಾಡಿದ್ದು ಸರಿಯಲ್ಲ, ಕೆಲಸ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ತಿಳಿದುಕೊಂಡು ಮಾತನಾಡಬೇಕಿತ್ತು ಎಂದು ಲೋಕೇಶ್ ಚಾಕೋಟೆ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಭಾರತಿಯವರು, ಪಂಚಾಯತ್ ಸಿಬ್ಬಂದಿಯಾಗಿ ಮಾತನಾಡಬಾರದಿತ್ತು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋನಪ್ಪ ಪೂಜಾರಿಯವರು ಹಾಗಾದರೆ ಪಂಚಾಯತ್ ಕೆಲಸದ ಬಗ್ಗೆ ಯಾರೂ ಮಾತನಾಡಬಾರದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು, ಕಾಮಗಾರಿ ಆಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಮಾತನಾಡಬೇಕಿತ್ತು. ಕಾಮಗಾರಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಿದ್ದರಿಂದ ಪಂಚಾಯತ್‌ಗೆ ಧಕ್ಕೆ ಬಂದಂತೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮೋನಪ್ಪ ಪೂಜಾರಿಯವರು, ಕಾಮಗಾರಿ ನಡೆದಿರುವುದು ಐತ್ತಪ್ಪ ಗೌಡರ ಮನೆಯ ಹತ್ತಿರವೋ ಅಥವಾ ಐತ್ತಪ್ಪ ಮೂಲ್ಯರ ಮನೆಯ ಹತ್ತಿರವೋ ಎಂಬ ಬಗ್ಗೆ ಉಷಾರವರಿಗೆ ಕನ್‌ಫ್ಯೂಶ್ ಆಗಿತ್ತು ಅವರು ಹೋಗುವ ದಾರಿಯಲ್ಲಿ ಕಾಮಗಾರಿ ಆಗಿರಲಿಲ್ಲ ಆದ್ದರಿಂದ ಅವರು ಕೇಳಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ಅವರನ್ನು ಕೆಲಸದಿಂದ ಕೈಬಿಡುವುದು ಎಂಬ ವಿಷಯ ಪ್ರಸ್ತಾಪವಾಯಿತು. ಕೆಲಸದಿಂದ ಕೈಬಿಡುವ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೋನಪ್ಪ ಪೂಜಾರಿಯವರು, ಕೆಲಸದಿಂದ ಕೈಬಿಡುವುದು ಸರಿಯಲ್ಲ ಅವರು ತಪ್ಪು ಮಾಡಿದ್ದರೆ ಅವರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿ ಅದು ಬಿಟ್ಟು ಹೊಟ್ಟೆಗೆ ಹೊಡೆಯುವ ಕೆಲಸಕ್ಕೆ ಕೈಹಾಕಬೇಡಿ ಇದಕ್ಕೆ ನನ್ನ ಆಕ್ಷೇಪ ಇದೆ ಎಂದು ತಿಳಿಸಿದರು.
ಪಾಪೆಮಜಲು ಸರಕಾರಿ ಪ್ರಾಥಮಿಕ ಶಾಲೆಗೆ ಯೂನಿಯನ್ ಬ್ಯಾಂಕ್‌ನವರು ಕೊಡುಗೆಯಾಗಿ ನೀಡಿದ ಶೌಚಾಲಯದ ಉದ್ಘಾಟನೆಗೆ ಪಂಚಾಯತ್ ಸದಸ್ಯರಿಗೆ ಆಹ್ವಾನ ನೀಡಿಲ್ಲ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಇದಲ್ಲದೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.ಸದಸ್ಯರುಗಳಾದ ಲೋಕೇಶ್ ಚಾಕೊಟೆ, ಹರೀಶ್ ರೈ ಜಾರಾತ್ತಾರು, ದಿವ್ಯನಾಥ ಶೆಟ್ಟಿ ಕಾವು ರಾಜೇಶ್ ಮಣಿಯಾಣಿ, ಸಲ್ಮಾ, ಜಯಂತಿ ಪಟ್ಟುಮೂಲೆ, ಶಂಕರ ಮಾಡನ್ನೂರು, ಅನಿತಾ ಅಚಾರಿಮೂಲೆ, ವನಿತಾ ಕೆ.ವಿ, ಭಾರತಿವಸಂತ್ ಕೌಡಿಚ್ಚಾರ್, ಉಷಾರೇಖಾ ರೈ, ರೇಣುಕಾ ಸತೀಶ್,ಪುಷ್ಪಲತಾ, ನಾರಾಯಣ ಚಾಕೊಟೆ, ಸಾವಿತ್ರಿ ಪೊನ್ನೆತ್ತಡ್ಕ, ಮೋನಪ್ಪ ಕೆರೆಮಾರು, ಮೀನಾಕ್ಷಿ ಪಾಪೆಮಜಲು, ಹೇಮಾವತಿ ಚಾಕೊಟೆ, ಸದಾನಂದ ಮಣಿಯಾಣಿ,ವಿಜೀತ್ ಕೆರೆಮಾರು ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾ.ಪಂ ಗುಮಾಸ್ತ ಪ್ರಭಾಕರ ಸ್ವಾಗತಿಸಿ ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು, ಅಭಿವೃದ್ಧಿ ಅದಿಕಾರಿ ಪದ್ಮಕುಮಾರಿ ಸರ್ಕಾರಿ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿ ಸಭೆಯ ಮುಂದಿಟ್ಟರು.
ಸಿಬ್ಬಂದಿಗಳು ಸಹಕರಿಸಿದರು.