ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ

0

ಲುಕೌಟ್ ನೊಟೀಸ್ ಜಾರಿ: ನಾಲ್ವರ ಪತ್ತೆಗೆ ಎನ್ಐಎ ಶೋಧ

ಟೆಕ್ನಿಕಲ್ ಆಧಾರದಲ್ಲಿ ಪುತ್ತೂರಿನ ಹಲವೆಡೆ ಕಾರ್ಯಾಚರಣೆ

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು(34ವ)ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವ ಪಿಎಫ್ಐ ಸಂಘಟನೆಗೆ ಸೇರಿದ ನಾಲ್ವರಿಗೆ ಲುಕೌಟ್ ನೊಟೀಸ್ ಜಾರಿ ಮಾಡಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಿಜೆಪಿ ಯುವಮೋರ್ಛಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರ್ ಅವರನ್ನು 2022ರ ಜು.26ರಂದು ರಾತ್ರಿ 8.30ರ ವೇಳೆಗೆ ಬೆಳ್ಳಾರೆಯಲ್ಲಿ ಅವರದೇ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ‌‌ ತನಿಖಾ ದಳದ‌ ಅಧಿಕಾರಿಗಳು ಸುಳ್ಯ ತಾಲೂಕು ಬೆಳ್ಳಾರೆಯ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ. ಎಚ್., ಸುಳ್ಯ ತಾಲೂಕು ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್‌ರವರ ಪತ್ತೆಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ‌ ಲುಕೌಟ್ ನೊಟೀಸ್ ಜಾರಿ‌ ಮಾಡಿದ್ದಾರೆ. ಮಹಮ್ಮದ್ ಮುಸ್ತಫಾ ಹಾಗೂ ತುಫೈಲ್ ಎಂ.ಎಚ್. ಪತ್ತೆಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು ಉಳಿದಿಬ್ಬರ ಪತ್ತೆಗೆ ತಲಾ 2 ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿದೆ. ಎನ್‌ಐಎ ಕಚೇರಿಯ ಬೆಂಗಳೂರು ಘಟಕದ ಪೊಲೀಸ್ ಅಧೀಕ್ಷಕರ ಕಚೇರಿಗೆ 080-29510900  ಮಾಹಿತಿ ನೀಡಬಹುದು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಲುಕೌಟ್ ಜಾರಿಯಾಗಿರುವ ನಾಲ್ವರ‌ ಪತ್ತೆಗಾಗಿ ಪುತ್ತೂರು, ಸುಳ್ಯ , ಬೆಳ್ಳಾರೆ ಸಹಿತ ಹಲವೆಡೆ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಆರೋಪಿಗಳ ಫೋಟೋ ಇರುವ ಪೋಸ್ಟರ್ ಅಂಟಿಸಿ ಪತ್ತೆಗೆ ಸಹಕರಿಸಲು ಮನವಿ ಮಾಡಿದ್ದಾರೆ.‌ ಅಲ್ಲದೆ, ಎನ್.ಐ.ಎಯ ಆರು ಜನರ ತಂಡ ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಪುತ್ತೂರು ಸುತ್ತಮುತ್ತ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here