ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಕನ್ನಡ ರಾಜ್ಯೋತ್ಸವ ಆಚರಣೆ

0

ರಂಜಿಸಿದ ಕಾವ್ಯ-ನಾಟ್ಯ-ರಂಗ-ಕಥಾ ಹಾಗೂ ಕವಿ-ಕಾವ್ಯ-ಕುಂಚ ಕಾರ್ಯಕ್ರಮಗಳು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಕಾವ್ಯ-ನಾಟ್ಯ-ರಂಗ-ಕಥಾ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ನೃತ್ಯ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯಂ ಅವರ ನಾಟ್ಯ ರಂಗ ಪುತ್ತೂರು ವತಿಯಿಂದ ಪ್ರಸ್ತುತಿಗೊಂಡ ಕಾರ್ಯಕ್ರಮದ ತಂಡದಲ್ಲಿ ರಚನಾ ನರಿಯೂರು, ಅನ್ನಪೂರ್ಣ ರಾವ್ ಹಾಗೂ ವಿನಿತಾ ಶೆಟ್ಟಿ ಸಾಥ್ ನೀಡಿದರು. ಜಿ. ಎಸ್. ಶಿವರುದ್ರಪ್ಪ ಅವರ ‘ಹಣತೆ ಹಚ್ಚುತ್ತೇವೆ’ ಕವನ ವಾಚನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹಳೆಗನ್ನಡ ಪದ್ಯ, ಸಾಹಿತಿ ಎಸ್. ದಿವಾಕರ ಅವರ ಸಂಕಲನದಿಂದ ಆಯ್ದ ಪುಟದ ಓದುವಿಕೆ, ಮೂರು ಮೆಟ್ಟಿಲ ಕತೆ ರೂಪಕ, ಪ್ರತಿಮಾನಂದ ಕುಮಾರ್ ಅವರ ‘ಅಡುಗೆ ಮಾಡುವುದೆಂದರೆ’ ಕವನದ ದೃಶ್ಯ ಪ್ರಸ್ತುತಿ, ಬಸವಣ್ಣನವರ ವಚನ, ಪಂಚತಂತ್ರ ಕಥಾಭಿನಯ, ರಂಗಗೀತೆ, ಚಿಂತಾಮಣಿ ಕೂಡ್ಲಕೆರೆ ಅವರ ಮಕ್ಕಳ ಕವನ ‘ಬಾಬುವಿನ ಕನಸು’, ದಾಸರಪದ, ನಾಂದಿ ಪದ ಮುಂತಾದವುಗಳನ್ನು ಸಮನ್ವಯಗೊಳಿಸಿ ನೃತ್ಯ, ಅಭಿನಯ, ನಾಟ್ಯಗಳ ಮೂಲಕ ಪ್ರಸ್ತುತ ಪಡಿಸಿದ ರೀತಿ ವಿಭಿನ್ನವಾಗಿದ್ದು, ಶಿಕ್ಷಕರ ಹಾಗೂ ಮಕ್ಕಳ ಮೆಚ್ಚುಗೆಗೆ ಪಾತ್ರವಾಯಿತು.

ಶುದ್ಧ-ಸ್ಪಷ್ಟ ಕನ್ನಡ ಭಾಷಾ ನೆಲೆಗಟ್ಟಲ್ಲಿ ಪ್ರಸ್ತುತಗೊಂಡ ಕಾರ್ಯಕ್ರಮಕ್ಕೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪುನೀತ್ ಅವರು ದೀಪ ಬೆಳಗಿಸಿ ಶುಭಹಾರೈಸಿದರು. ಅನಂತರ ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಬಗೆಗಿನ ಓದು, ಚಿತ್ರರಚನೆ, ಕಾವ್ಯ-ಪ್ರಸ್ತುತಿಗೆ ಶಾಲಾ ಸಂಚಾಲಕರಾದ ವಸಂತ ಸುವರ್ಣ ಅವರು ಶುಭ ಹಾರೈಸಿದರು. ಶಾಲಾ ಖಜಾಂಜಿ ಅಶೋಕ್ ಕುಂಬ್ಳೆ, ಶಿಕ್ಷಕ ವೃಂದದವರ ಉಪಸ್ಥಿತಿಯಲ್ಲಿ ಸಂಪನ್ನಗೊಂಡ ಕಾರ್ಯಕ್ರಮವನ್ನು ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಹಾಗೂ ವಿದ್ಯಾರ್ಥಿ ತನ್ನಯ್ ಕೃಷ್ಣ ನಿರೂಪಿಸಿದರು.

LEAVE A REPLY

Please enter your comment!
Please enter your name here