ಪುತ್ತೂರು:ವಾಣಿಜ್ಯ ಸಂಕೀರ್ಣದಿಂದ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರನ್ನು ಮಳೆ ನೀರಿನ ಚರಂಡಿಗೆ ಬಿಡುತ್ತಿರುವುದರಿಂದ ನಮ್ಮ ವಠಾರದಲ್ಲಿ ಗಬ್ಬು ವಾಸನೆ, ಸೊಳ್ಳೆಗಳ ಕಾಟದಿಂದ ತೊಂದರೆ ಆಗಿದೆ ಎಂಬ ಕುರಿತು ಸಾರ್ವಜನಿಕರಿಂದ ಬಂದ ದೂರಿಗೆ ಸಂಬಂಧಿಸಿ ನಗರಸಭೆಯು ವಾಣಿಜ್ಯ ಸಂಕೀರ್ಣದ ಮಾಲಕರಿಗೆ ನೋಟೀಸ್ ಜಾರಿ ಮಾಡಿದೆ.
ಬಪ್ಪಳಿಗೆ ಬಂಗಾರ್‌ಕಾಯರ್ ಕಟ್ಟೆಯ ಬಳಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದರು.‘ನಮ್ಮ ವಠಾರದ ಕಡೆಗೆ ಬರುವ ಮಳೆ ನೀರಿನ ಚರಂಡಿಗೆ ಪಕ್ಕದಲ್ಲಿರುವ ಆಶ್ಮಿ ಕಂಫರ್ಟ್ ವಾಣಿಜ್ಯ ಸಂಕೀರ್ಣವೊಂದರಿಂದ ಕೊಳಚೆ ನೀರನ್ನು ಬಿಡುತ್ತಿದ್ದಾರೆ.ಇದರಿಂದ ನಮ್ಮ ವಠಾರದಲ್ಲಿ ಗಬ್ಬು ವಾಸನೆ, ಸೊಳ್ಳೆ ಕಾಟ ಮತ್ತು ನಮ್ಮ ಪರಿಸರದ ನಾಗರಿಕರಿಗೆ ಮಲೇರಿಯಾ, ಡೆಂಗ್ಯೂ ಇತ್ಯಾದಿ ರೋಗಳು ಹರಡುವ ಭೀತಿ ಇರುತ್ತದೆ.ನಮ್ಮ ಪರಿಸರದ ಕುಡಿಯುವ ನೀರಿನ ಬಾವಿಗಳು ಕಲುಷಿತವಾಗುವ ಸಂಭವ ಇದೆ.ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಣಿಜ್ಯ ಸಂಕೀರ್ಣದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು’ ನಾಗರಿಕರು ಅ.25ರಂದು ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ವಾರ್ಡ್‌ನ ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಸ್ಪಂದಿಸಿದ್ದು, ಹಿರಿಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ, ಸಿಬ್ಬಂದಿ ಪುರುಷೋತ್ತಮ, ಎ.ಎಸ್.ಐ ಲೋಕನಾಥ್ ಮತ್ತು ಉದಯ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ತ್ಯಾಜ್ಯ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಇಲ್ಲವಾದಲ್ಲಿ ನಗರಸಭಾ ಕಾನೂನಿನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅ.28ರಂದು ನಗರಸಭೆಯು ವಾಣಿಜ್ಯ ಸಂಕೀರ್ಣದ ಮಾಲಕರಿಗೆ ನೋಟೀಸ್ ನೀಡಿದೆ.